ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಎಸ್ಸೆಸ್ಸೆಲ್ಸಿ ಪರೀಕ್ಷೆ: ಪ್ರಶ್ನೆ ಪತ್ರಿಕೆ ತಡವಾಗಿ ವಿತರಣೆ

Published 25 ಮಾರ್ಚ್ 2024, 10:00 IST
Last Updated 25 ಮಾರ್ಚ್ 2024, 10:00 IST
ಅಕ್ಷರ ಗಾತ್ರ

ತುಮಕೂರು: ನಗರದ ಎಂಪ್ರೆಸ್‌ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಸಂಸ್ಕೃತ ಪ್ರಶ್ನೆ ಪತ್ರಿಕೆಯನ್ನು 15 ನಿಮಿಷ ತಡವಾಗಿ ವಿತರಿಸಲಾಗಿದೆ.

ಬೆಳಗ್ಗೆ 10.30 ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು, ಮಕ್ಕಳು ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳುವ ಸಲುವಾಗಿ 15 ನಿಮಿಷ ಮುಂಚಿತವಾಗಿ ನೀಡಲಾಗುತ್ತದೆ. ಎಂಪ್ರೆಸ್ ಪರೀಕ್ಷಾ ಕೇಂದ್ರದಲ್ಲಿ 15 ನಿಮಿಷ ತಡವಾಗಿ ವಿತರಣೆ ಮಾಡಲಾಗಿದ್ದು, ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯವನ್ನೂ ನೀಡಿಲ್ಲ. ಪರೀಕ್ಷೆ ಮುಕ್ತಾಯದ ಸಮಯವಾದ 1.30 ಗಂಟೆಗೆ ಉತ್ತರ ಪತ್ರಿಕೆಗಳನ್ನು ಪಡೆದುಕೊಳ್ಳಲಾಯಿತು ಎಂದು ವಿದ್ಯಾರ್ಥಿಗಳು ತಿಳಿಸಿದರು.

ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ ಸಮಯದಲ್ಲೇ ಪ್ರಶ್ನೆ ಪತ್ರಿಕೆ ವಿತರಣೆ ತಡವಾಗಿರುವುದು ಗಮನಕ್ಕೆ ಬಂದಿದೆ. ಸ್ಥಳದಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ ಅವರನ್ನು ಪ್ರಶ್ನಿಸಿದ್ದು, ಸರಿಯಾಗಿ ವಿವರಣೆ ನೀಡಿಲ್ಲ. ‘ಎಷ್ಟು ಗಂಟೆಗೆ ಪ್ರಶ್ನೆ ಪತ್ರಿಕೆ ನೀಡಬೇಕಿತ್ತು’ ಎಂದು ಕೇಳಿದ್ದಾರೆ. ‘ನನಗೂ ಗೊತ್ತಿಲ್ಲ. ಶಿಕ್ಷಕರನ್ನು ಕೇಳಿ ವಿವರಣೆ ನೀಡುವುದಾಗಿ’ ಬಿಇಒ ಹೇಳಿದ್ದಾರೆ.

ಬಿಇಒಗೆ ಸಮಯದ ಬಗ್ಗೆ ಗೊತ್ತಿಲ್ಲದಿರುವುದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸರಿಯಾದ ಪೂರ್ವ ತಯಾರಿ ಇಲ್ಲದೆ ಪರೀಕ್ಷೆ ನಡೆಸುತ್ತಿದ್ದೀರಿ. ನಿಮಗೆ ಸಮಯದ ಬಗ್ಗೆ ಗೊತ್ತಿಲ್ಲದ ಮೇಲೆ ಶಿಕ್ಷಕರಿಗೆ ಹೇಗೆ ತಿಳಿಸುತ್ತೀರಿ. ಪರೀಕ್ಷೆಗೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದೀರಿ. ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದೀರಿ’ ಎಂದು ಬಿಇಒ ಸೂರ್ಯಕಲಾ ಅವರನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪ್ರಶ್ನಿಸಿದ್ದಾರೆ.

‘ಒಂದು ಕೊಠಡಿಗೆ 15 ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ವಿತರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾಗಿದೆ. ಪರೀಕ್ಷಾ ಕೇಂದ್ರದ ಕಸ್ಟೋಡಿಯನ್ ಪಾತಣ್ಣ ಅವರನ್ನು ಪರೀಕ್ಷೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಬಿಇಒ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT