ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಯಂತ್ರ ಕೊಠಡಿಗೆ ಬಿಗಿ ಭದ್ರತೆ

ಸ್ಟ್ರಾಂಗ್ ರೂಮ್‌ ಗೆ ಮೊಹರು ಹಾಕಿದ ಚುನಾವಣಾಧಿಕಾರಿಗಳು
Last Updated 19 ಏಪ್ರಿಲ್ 2019, 20:05 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆ ಮತದಾನ ಗುರುವಾರ ಮುಗಿದ ಬಳಿಕ ಕಳೆದ ಒಂದು ತಿಂಗಳಿಂದ ಇದ್ದ ಚುನಾವಣಾ ಚಟುವಟಿಕೆ ತಾತ್ಕಾಲಿಕ ನಿಂತಿದೆ.

ಜಿಲ್ಲೆಯ 2,684 ಮತಗಟ್ಟೆಗಳಿಂದ ಎಲ್ಲ ಮತಯಂತ್ರಗಳನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕೊಠಡಿಗಳಲ್ಲಿ (ಸ್ಟ್ರಾಂಗ್ ರೂಮ್) ಇರಿಸಲಾಗಿದೆ. ಕೇಂದ್ರ ಸಶಸ್ತ್ರ ಮೀಸಲು ಪಡೆ, ಮೀಸಲು ಪೊಲೀಸ್ ಹಾಗೂ ನಾಗರಿಕ ಪೊಲೀಸ್ ಹೀಗೆ ಮೂರು ಹಂತದ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಮತ ಎಣಿಕೆ ನಡೆಯುವ ಮೇ 23ರವರೆಗೂ ಈ ಭದ್ರತೆ ಇರಲಿದೆ. ಪಾಳಿ ಪ್ರಕಾರ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಕಟ್ಟೆಚ್ಚರದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಮತದಾನ ಪ್ರಕ್ರಿಯೆ ಮುಗಿಸಿದ ಚುನಾವಣಾ ವಿಭಾಗದ ಆಡಳಿತ ಯಂತ್ರ ಮತಯಂತ್ರ ಸ್ಟ್ರಾಂಗ್ ರೂಮ್ ಕೊಠಡಿಗಳ ಭದ್ರತೆ, ನಿರ್ವಹಣೆಗೆ ಗಮನಹರಿಸಿತು.

ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ವೀಕ್ಷಕರಾದ ಬಿ.ಕೆ.ಉಪಾಧ್ಯಾಯ ಅವರ ಸಮ್ಮುಖದಲ್ಲಿ ಮತಯಂತ್ರ ಕೊಠಡಿಗಳಿಗೆ ಬೀಗ ಹಾಕಿ ಮೊಹರು (ಸೀಲ್) ಒತ್ತಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಇದ್ದರು.

ಅಭ್ಯರ್ಥಿಗಳ ದಿನಚರಿ ಏನು?: ಚುನಾವಣೆ ಘೋಷಣೆಯಾದ ಬಳಿಕ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರ ಸುತ್ತಿ ಪ್ರಚಾರ, ಸಭೆ, ರ್‍ಯಾಲಿಗಳಲ್ಲಿ ಸುತ್ತಿ, ಮತಕ್ಕಾಗಿ ಮತದಾರರ ಮನೆಗಳಿಗೆ ಅಲೆದು ಮನವಿ ಮಾಡಿದ್ದ ಅಭ್ಯರ್ಥಿಗಳು ಮತದಾನ ಮರುದಿನವಾದ ಶುಕ್ರವಾರ ಬೇರೆ ಚಟುವಟಿಕೆಗಳಲ್ಲಿ ತೊಡಗಿದರು.

ದಣಿವರಿಯದ ರಾಜಕಾರಣಿ ಎಂದೇ ಕರೆಯಲಾಗುವ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರು ಗುರುವಾರ ರಾಜ್ಯದ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ತೆರಳಿದರು. ಮಧ್ಯಾಹ್ನ ರಾಯಚೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರೊಂದಿಗೆ ಪಾಲ್ಗೊಂಡರು.

ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು ಮನೆಯಲ್ಲಿಯೇ ಆಪ್ತರು, ಬೆಂಬಲಿಗರೊಂದಿಗೆ ಉಪಾಹಾರ ಸೇವಿಸಿ ಗೆಲುವಿನ ಲೆಕ್ಕಾಚಾರದಲ್ಲಿ ಕಾಲ ಕಳೆದರು.

ಪೆನ್ನು, ಪೇಪರ್ ಹಿಡಿದು ಕುಳಿತ ಬಸವರಾಜ್, 8 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ತಮಗೆ ಎಷ್ಟೆಷ್ಟು ಮತಗಳು ಲಭಿಸಿರಬಹುದು ಎಂಬುದರ ಬಗ್ಗೆ ಲೆಕ್ಕಾಚಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT