ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ಇಲ್ಲದೆ ಮೋದಿ ಸ್ಪರ್ಧಿಸಿದ್ದಾರೆಯೆ?– ಮೀನಾಕ್ಷಿ ಸುಂದರಂ

ಪ್ರಜಾಪ್ರಭುತ್ವ ಉಳಿಸಲು, ಬಿಜೆಪಿ ಸೋಲಿಸಿ– ಸಿಪಿಎಂ ಮನವಿ
Published 14 ಏಪ್ರಿಲ್ 2024, 4:51 IST
Last Updated 14 ಏಪ್ರಿಲ್ 2024, 4:51 IST
ಅಕ್ಷರ ಗಾತ್ರ

ತುಮಕೂರು: ಪ್ರಜಾಪ್ರಭುತ್ವ ಉಳಿಸಲು, ಸಮಾನತೆ, ಸಹಬಾಳ್ವೆ ಬೆಳೆಸಲು ಬಿಜೆಪಿಯನ್ನು ಸೋಲಿಸಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸಿಪಿಎಂ ವತಿಯಿಂದ ಆಯೋಜಿಸಿದ್ದ ದುಡಿಯುವ ಜನರ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಸರ್ಕಾರ ಸಾಮಾನ್ಯರ ಹಿತ ಕಾಯದೆ ಕಾರ್ಪೊರೇಟ್‌ ಕಂಪನಿಗಳ ಲಾಭಕ್ಕೆ ಮಾರಾಟವಾಗಿದೆ. 10 ವರ್ಷ ಕೇಂದ್ರದ ಹಣಕಾಸು ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್‌ ಅವರು ‘ನಾನು ಹಣ ಇಲ್ಲದ ಕಾರಣಕ್ಕೆ ಚುನಾವಣೆಗೆ ಸ್ವರ್ಧಿಸುತ್ತಿಲ್ಲ’ ಎಂದು ಹೇಳಿದ್ದಾರೆ. ಹಾಗಾದರೆ ವಿಶ್ವಗುರು ಮೋದಿ ಅವರು ಹೇಗೆ ಸ್ಪರ್ಧೆ ಮಾಡುತ್ತಾರೆ? ಅವರ ಬಳಿ ಹಣ ಇದೆಯೇ? ಎಂದು ಪ್ರಶ್ನಿಸಿದರು.

ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನ. ಹಣವಂತರಷ್ಟೇ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಅಲಿಖಿತ ಶಾಸನ ಮುರಿಯಬೇಕು. ದುಡಿಯುವ ಜನ ರಾಜಕೀಯ ತಿಳಿವಳಿಕೆ ಪಡೆದುಕೊಳ್ಳಬೇಕು. ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಬೇಕು’ ಎಂದು ಕೇಳಿಕೊಂಡರು.

ಲೇಖಕಿ ಬಾ.ಹ.ರಮಾಕುಮಾರಿ, ‘ಮಹಿಳಾ ಪರ ಚಿಂತನೆ ಇಲ್ಲದ, ದೌರ್ಜನ್ಯ, ದಬ್ಬಾಳಿಕೆ ನಡೆಸಿದವರನ್ನು ಜನ ಬೆಂಬಲಿಸಬಾರದು. ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿಯ ಕನ್ನಡ ವಿರೋಧಿತನವನ್ನು ಜನತೆ ಅರಿತು ಮತ ಚಲಾಯಿಸಬೇಕು’ ಎಂದು ತಿಳಿಸಿದರು.

ಚಿಂತಕ ಸಿ.ಯತಿರಾಜು, ‘ಸುಳ್ಳನ್ನು ಸತ್ಯ ಎಂದು ನಂಬಿಸುವ ಕಾರ್ಖಾನೆಗಳಿವೆ. ಬಲಪಂಥೀಯ ರಾಜಕೀಯ ಶಕ್ತಿಗಳು ಚುನಾವಣೆಯ ಸಮಯದಲ್ಲಿ ಸಾವಿರಾರು ಸುಳ್ಳುಗಳನ್ನು ಸಮಾಜದಲ್ಲಿ ಹರಡುತ್ತಿವೆ. ಇದನ್ನು ಸಂಯಮ, ವಿವೇಕದಿಂದ ವಿಮರ್ಶಿಸಿ ಮತ ನೀಡಬೇಕು’ ಎಂದು ಸಲಹೆ ಮಾಡಿದರು.

ಸಿಪಿಎಂ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ, ವಿವಿಧ ಸಂಘಟನೆಗಳ ಮುಖಂಡರಾದ ಆರ್.ಎಸ್.ಚನ್ನಬಸಣ್ಣ, ಅಜ್ಜಪ್ಪ, ದೊಡ್ಡನಂಜಪ್ಪ, ರಾಜಮ್ಮ, ಪಂಡಿತ್ ಜವಾಹರ್, ಅಪ್ಸರ್‌ಖಾನ್‌, ಬಸವರಾಜು, ಕಲ್ಪನಾ, ಮಂಜುಳಾ, ಖಲೀಲ್, ಇಂತಿಯಾಜ್, ವಸೀಂ, ಕಿಶೋರ್‌, ಶಿವಕುಮಾರ್‌ ಸ್ವಾಮಿ, ರಂಗಧಾಮಯ್ಯ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT