ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್ ಸೇರಿ 9 ಇಲಾಖೆಗಳ ಅಧಿಕಾರಿಗಳ ಗೈರು; ತಾಪಂ ಸಭೆ ಮೊಟಕು

ಗೈರಿಗೆ ಸಭೆಯಲ್ಲಿ ಸದಸ್ಯರ ಅಸಮಾಧಾನ, ಗೈರಾದವರಿಗೆ ಷೋಕಾಸ್ ನೋಟಿಸ್‌ಗೆ ಸೂಚನೆ
Last Updated 25 ಸೆಪ್ಟೆಂಬರ್ 2018, 14:27 IST
ಅಕ್ಷರ ಗಾತ್ರ

ತುಮಕೂರು: 9 ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರಿಂದ ತುಮಕೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಲಾಯಿತು.

ಹನ್ನೊಂದು ಗಂಟೆಗೆ ನಡೆಯಬೇಕಿದ್ದ ಸಭೆ 11.30ಕ್ಕೆ ಪ್ರಾರಂಭವಾಯಿತು. ಸಭೆಗೆ ಹಾಜರಾಗಬೇಕಿದ್ದ ತಹಶೀಲ್ದಾರ್ ಸೇರಿದಂತೆ 9 ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು.

ಕೇವಲ ಒಂದು ಗಂಟೆಯಲ್ಲಿ ಸಭೆ ಮೊಟಕಾಯಿತು. ಗೈರಾದ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ನೀಡಲು ಅಧ್ಯಕ್ಷರು ಕಾರ್ಯನಿರ್ವಹಣಾಧಿಕಾರಿಗೆ ಆದೇಶಿಸಿದರು.

ಪ್ರತಿ ಸಭೆಗೂ ಅಧಿಕಾರಿಗಳ ಗೈರುಹಾಜರಿ ಇದ್ದೇ ಇರುತ್ತದೆ. ಕೆಲ ಅಧಿಕಾರಿಗಳು ತಮ್ಮ ಬದಲಿಗೆ ಕಿರಿಯ ಅಧಿಕಾರಿ, ಸಿಬ್ಬಂದಿ ಕಳಿಸುತ್ತಾರೆ. ಕಳೆದ ಮೂರ್ನಾಲ್ಕು ಸಭೆಗಳಿಗೆ ತಹಶೀಲ್ದಾರರನ್ನು ಗೋಗರೆದು ಕರೆಸಿಕೊಳ್ಳಬೇಕಾಗಿದೆ. ಇದು ಸದಸ್ಯರು ಮತ್ತು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಮಾಡಿದ ಅವಮಾನ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯಾವ ಇಲಾಖೆಗಳ ಅಧಿಕಾರಿಗಳು ಬಂದಿಲ್ಲವೊ ಅವರೆಲ್ಲರನ್ನು ಮೊದಲು ಸಭೆ ಕರೆಸಿ ನಂತರ ಸಭೆ ನಡೆಸಿ ಎಂದು ಸದಸ್ಯರು ಒತ್ತಾಯ ಮಾಡಿದರು.

ದನಿಗೂಡಿಸಿದ ಅಧ್ಯಕ್ಷ: ಸದಸ್ಯರ ಒತ್ತಾಯಕ್ಕೆ ದನಿಗೂಡಿಸಿದ ಅಧ್ಯಕ್ಷ ಗಂಗಾಂಜನೇಯ ಅವರು ಸದಸ್ಯರು ಪ್ರಶ್ನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸಾಮಾನ್ಯ ಸಭೆ ನಡೆಯುವ ಬಗ್ಗೆ ಮಾಹಿತಿ ಕೊಡಲಾಗಿರುತ್ತದೆ. ಸಭೆಗೆ ಅಧಿಕಾರಿಗಳು ಗೈರು ಹಾಜರಿ ಆಗುತ್ತಿರುವ ಬಗ್ಗೆ ಕೆಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಆದಾಗ್ಯೂ ಅಧಿಕಾರಿಗಳು ಗೈರು ಮುಂದುವರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಮಾತನಾಡಿ, ‘ನನಗೆ ಇದು ಮೊದಲ ಸಭೆಯಾಗಿದ್ದು, 28 ಇಲಾಖೆಗಳ ಪೈಕಿ 19 ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಈ ಬಾರಿ ಸಭೆ ಮುಂದುವರಿಸಲು ಅವಕಾಶ ಕೊಡಿ. ಮುಂದಿನ ಸಭೆಯಲ್ಲಿ ಅಧಿಕಾರಿಗಳು ಗೈರು ಹಾಜರಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ಮನವಿ ಮಾಡಿದರು.

ನೀವು ಹೊಸದಾಗಿ ಬಂದಿರಬಹುದು. ಆದರೆ, ಇಲಾಖೆಗಳ ಅಧಿಕಾರಿಗಳು ಅವರೇ ಇದ್ದಾರಲ್ಲ. ಸಾಮಾನ್ಯ ಸಭೆಗೆ ಬರಬೇಕು ಎಂಬುದು ಅವರಿಗೆ ಗೊತ್ತಿಲ್ಲವೇ. ಪ್ರತಿ ಸಭೆಯಲ್ಲೂ ಇದೇ ಸಮಸ್ಯೆ. ಅಧಿಕಾರಿಗಳು ಬರದೇ ಇದ್ದರೆ ಸಭೆ ನಡೆಸುವುದೇ ಬೇಡ ಎಂದು ಒಕ್ಕೊರಲಿನಿಂದ ಸದಸ್ಯರು ಒತ್ತಾಯ ಮಾಡಿದರು.

ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗಳ ಅನುಷ್ಠಾನ ಮಾಡಲು ಗೊಂಚಲು ಗ್ರಾಮ ಆಯ್ಕೆ ಪ್ರಕ್ರಿಯೆಯಲ್ಲೂ ಲೋಪವಾಗಿದೆ. ಈ ಬಗ್ಗೆಯೂ ಉತ್ತರ ನೀಡಲು ಅಧಿಕಾರಿಗಳು ಇಲ್ಲವಲ್ಲ ಎಂದು ಹೆಗ್ಗೆರೆ ಸದಸ್ಯೆ ವಿಶಾಲಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

’ಮನೆ ಹಂಚಿಕೆಯಾದರೂ ಫಲಾನುಭವಿಗೆ ದಕ್ಕಿಲ್ಲ: ಕೋರಾ ಹೋಬಳಿಯಲ್ಲಿ ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡಿ ಘೋಷಣೆ ಮಾಡಲಾಗಿದೆ. ಆದರೆ, ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿಲ್ಲ’ ಎಂದು ಸದಸ್ಯೆ ಕವಿತಾ ರಮೇಶ್ ದೂರಿದರು.

‘ಮನೆ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರಿಂದ ಆಯ್ಕೆಯಾದ ಫಲಾನುಭವಿಗಳು ಹಳೆಯ ಮನೆ ತೊರೆದು ಎಲ್ಲೆಲ್ಲೋ ವಾಸ ಮಾಡಬೇಕಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಆಗ್ರಹಿಸಿದರು.

‘ಕೋರಾ ಕ್ಷೇತ್ರ ಉಪಮುಖ್ಯಮಂತ್ರಿಯವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಇಲ್ಲಿಯೇ ಈ ಗತಿಯಾದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.
ಸದಸ್ಯೆಯ ಪ್ರಶ್ನೆಗೆ ಅಧ್ಯಕ್ಷ ಗಂಗಾಂಜನೇಯ ಅಧಿಕಾರಿಗಳು ಉತ್ತರ ಕೊಡಬೇಕು ಎಂದು ಹೇಳಿದಾಗ, ಸಭೆಯಲ್ಲಿ ಅಧಿಕಾರಿ ಕಾಣಲಿಲ್ಲ. ಗೈರಾಗಿದ್ದಕ್ಕೆ ಇನ್ನಷ್ಟು ಸಿಟ್ಟುಕೊಂಡ ಪ್ರಶ್ನೆ ಕೇಳಿದ ಸದಸ್ಯೆ ಅಧಿಕಾರಿಗಳೇ ಬರದೇ ಇರುವ ಇಂತಹ ಸಭೆಯನ್ನು ಯಾಕೆ ನಡೆಸುತ್ತೀರಿ’ ಅಧ್ಯಕ್ಷರ ವಿರುದ್ಧವೇ ಹರಿಹಾಯ್ದರು.

ವಸತಿ ಫಲಾನುಭವಿಗಳಿಗೆ ಮನೆ ಕೊಡದೇ ಇರುವುದು ಕೇವಲ ಕೋರಾ ಹೋಬಳಿ ಸಮಸ್ಯೆಯಲ್ಲ. ರಾಜ್ಯವ್ಯಾಪಿ ಇದೇ ರೀತಿ ಇದೆ. ಕಾರ್ಯನಿರ್ವಹಣಾಧಿಕಾರಿಗಳು ನಿಗಮದ ರಾಜ್ಯ ಮಟ್ಟದ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಫಲಾನುಭವಿಗಳಿಗೆ ಬೇಗ ಮನೆ ದೊರಕಿಸುವ ವ್ಯವಸ್ಥೆ ಮಾಡಬೇಕು ಎಂದು ಊರುಕೆರೆ ಕ್ಷೇತ್ರದ ಸದಸ್ಯ ವಿಜಯಕುಮಾರ್ ಒತ್ತಾಯ ಮಾಡಿದರು.

ಯೋಜನಾಧಿಕಾರಿ ರಂಗಸ್ವಾಮಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ವೇದಿಕೆಯಲ್ಲಿದ್ದರು. ಸದಸ್ಯರಾದ ವಿಜಯಕುಮಾರ್, ರೇಣುಕಮ್ಮ, ರಂಗಸ್ವಾಮಯ್ಯ, ಶಿವಕುಮಾರ್ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT