ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ: ಹಾಸ್ಟೆಲ್‌ ವಾರ್ಡನ್‌ ವಿರುದ್ಧ ಡಿ.ಸಿ ಗರಂ

ಸ್ನಾತಕೋತ್ತರ ವಿದ್ಯಾರ್ಥಿ ನಿಲಯದ ವಾರ್ಡನ್‌ ವಿರುದ್ಧ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗರಂ
Published 8 ಜನವರಿ 2024, 7:13 IST
Last Updated 8 ಜನವರಿ 2024, 7:13 IST
ಅಕ್ಷರ ಗಾತ್ರ

ತುಮಕೂರು: ಕುವೆಂಪು ನಗರದಲ್ಲಿರುವ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪುರುಷರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶನಿವಾರ ರಾತ್ರಿ ವಿ.ವಿಯ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದ್ದರು. ಹಾಸ್ಟೆಲ್‌ನಿಂದ ಎಸ್‌.ಎಸ್‌.ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು.

ಭಾನುವಾರ ಬೆಳಗ್ಗೆ ಶುಭ ಕಲ್ಯಾಣ್‌ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಮುಂದಿನ ಹತ್ತು ದಿನಗಳ ಒಳಗಡೆ ಎಲ್ಲ ಸಮಸ್ಯೆ ಬಗೆಹರಿಸಬೇಕು. ಶೌಚಾಲಯ ಸರಿ ಪಡಿಸಬೇಕು. ಗುಣಮಟ್ಟದ ಅಡುಗೆ ಎಣ್ಣೆ, ತರಕಾರಿ, ಅಕ್ಕಿ ಬಳಸಬೇಕು. ಇಡ್ಲಿ ಬೇಯಿಸಲು ಕಾಟನ್‌ ಬಟ್ಟೆಯ ಬದಲಾಗಿ ಪ್ಲಾಸ್ಟಿಕ್‌ ಹಾಳೆ ಬಳಸುತ್ತಿದ್ದಾರೆ. ಪ್ಲಾಸ್ಟಿಕ್‌ ಉಪಯೋಗಿಸುವುದರಿಂದ ಕ್ಯಾನ್ಸರ್‌ ಬರಬಹುದು. ಕೂಡಲೇ ಇದನ್ನು ನಿಲ್ಲಿಸಬೇಕು. ಬಟ್ಟೆಯನ್ನೇ ಬಳಸಬೇಕು ಎಂದು ವಾರ್ಡನ್‌ಗೆ ಸೂಚಿಸಿದರು.

ನಂತರ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಕೈಗಾರಿಕಾ ಪ್ರದೇಶದ 4ನೇ ಹಂತದಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಯರಿಗೆ ಹಸ್ತಾಂತರಿಸಬೇಕಾದ 1,700 ಎಕರೆ ಜಮೀನಿನ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ, ಆದಷ್ಟು ಬೇಗ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ತುಮಕೂರಿನ ಕುವೆಂಪು ನಗರದಲ್ಲಿರುವ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪುರುಷರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯದಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಸುತ್ತಿರುವುದನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ವೀಕ್ಷಿಸಿದರು
ತುಮಕೂರಿನ ಕುವೆಂಪು ನಗರದಲ್ಲಿರುವ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪುರುಷರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯದಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಸುತ್ತಿರುವುದನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ವೀಕ್ಷಿಸಿದರು

ರೈಲು ನಿಲ್ದಾಣದ ಬಳಿಯ ಕೆಳ ಸೇತುವೆ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿದರು. ಇಲ್ಲಿ ಜನರ ಓಡಾಟಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಕಾಮಗಾರಿಯ ವಿಳಂಬಕ್ಕೆ ಏನು ಕಾರಣ? ಸೇತುವೆಯ ಕೆಲಸ ಮುಗಿಸಲು ಇರುವ ತೊಡಕುಗಳು ಏನು? ಎಂಬುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT