ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಾಪುರ-ಮಡಕಶಿರಾ ರಸ್ತೆ ಅವ್ಯವಸ್ಥೆ

ಸಮಸ್ಯೆಯ ಸುಳಿಯಲ್ಲಿ ಗಡಿಭಾಗದ ಜನತೆ: ಮಡಕಶಿರಾಕ್ಕೆ ಹೋಗಲೂ, ವೆಂಕಟಾಪುರಕ್ಕೆ ಬರಲೂ ಹರಸಾಹಸ
ಜಯಸಿಂಹ ಕೆ.ಆರ್.
Published 16 ಫೆಬ್ರುವರಿ 2024, 5:40 IST
Last Updated 16 ಫೆಬ್ರುವರಿ 2024, 5:40 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ವೆಂಕಟಾಪುರದಿಂದ ಆಂಧ್ರದ ಮಡಕಶಿರಾ, ತುಮಕೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ವೆಂಕಟಾಪುರದಿಂದ ಶ್ರೀನಿವಾಸಪುರ, ಜಮ್ಮೇನಹಳ್ಳಿ ಮಾರ್ಗವಾಗಿ ಆಂಧ್ರದ ಮಡಕಶಿರಾ, ತುಮಕೂರಿಗೆ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಪಟ್ಟಣಕ್ಕಿಂತಲೂ ಆಂಧ್ರದ ಮಡಕಶಿರಾ ಸಮೀಪವಿರುವುದರಿಂದ ಇಲ್ಲಿನ ಜನತೆ ಮಡಕಶಿರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಶ್ರೀನಿವಾಸಪುರ, ಜಮ್ಮೇನಹಳ್ಳಿ ಗ್ರಾಮದ ಜನತೆ ಅತ್ತ ಮಡಕಶಿರಾಕ್ಕೆ ಹೋಗಲೂ, ಇತ್ತ ವೆಂಕಟಾಪುರಕ್ಕೆ ಬರಲೂ ಹರಸಾಹಸ ಪಡಬೇಕಿದೆ.

ಜಮೀನು, ತೋಟಗಳಿಗೆ ಕೃಷಿ ಚಟುವಟಿಕೆಗಳಿಗಾಗಿ ಎತ್ತಿನಬಂಡಿ, ಟ್ರಾಕ್ಟರ್, ಇತ್ಯಾದಿ ವಾಹನಗಳು ಓಡಾಡಲೂ ಸಾಧ್ಯವಾಗದ ಸ್ಥಿತಿ ಇದೆ. ಮುರಾರಾಯನಹಳ್ಳಿ ಮೂಲಕ ಮಡಕಶಿರಾಕ್ಕೆ ಹೋಗುವ ರಸ್ತೆ ಸ್ಥಗಿತಗೊಂಡಲ್ಲಿ ಆಂಧ್ರ, ರಾಜ್ಯದ ವಿವಿಧೆಡೆಯಿಂದ ಹಿಂದೂಪುರ, ಪೆನುಗೊಂಡಕ್ಕೆ ಹೋಗುವ ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.

ಆಸ್ಪತ್ರೆ, ಶಾಲಾ, ಕಾಲೇಜು, ಕೂಲಿ, ನೌಕರಿ ಸೇರಿದಂತೆ ವಿವಿಧೆಡೆಗೆ ಹೋಗುವ ಸಾವಿರಾರು ಮಂದಿಗೆ ಇದೇ ರಸ್ತೆ ಆಸರೆಯಾಗಿದೆ. ಆದರೆ ಕಳೆದ ಆರು ವರ್ಷಗಳಿಂದ ಈ ರಸ್ತೆ ಹಾಳಾಗಿದ್ದು, ನಿತ್ಯ ಒಂದಿಲ್ಲೊಂದು ಅಪಘಾತ ನಡೆಯುತ್ತಿವೆ. ಈ ರಸ್ತೆಯಲ್ಲಿ ಓಡಾಡಲೂ ಭಯಪಡಬೇಕಾದ ಸ್ಥಿತಿಯಲ್ಲಿ ಇಲ್ಲಿನ ಜನರಿದ್ದಾರೆ.

ಕೆಲ ದಿನಗಳ ಹಿಂದೆ ಕಾನೂನು ಪದವಿ ವಿದ್ಯಾರ್ಥಿ ಗಣೇಶ್ ದ್ವಿಚಕ್ರ ವಾಹನದಲ್ಲಿ ಬಿದ್ದು ಇದೇ ಮಾರ್ಗದಲ್ಲಿ ಮೃತಪಟ್ಟಿದ್ದರು. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ರೈತರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಪಘಾತಗಳಿಗೆ ತುತ್ತಾಗಿ ಸಾಕಷ್ಟು ಮಂದಿ ಕೈ ಕಾಲು ಮುರಿದುಕೊಂಡಿದ್ದಾರೆ. ಗ್ರಾಮದ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದೊಯ್ಯುವಾಗ ಮಹಿಳೆಯರು, ರೋಗಿಗಳು ರಸ್ತೆ ಅವ್ಯವಸ್ಥೆಯಿಂದಾಗಿ ವ್ಯಥೆ ಅನುಭವಿಸುತ್ತಿದ್ದಾರೆ. ಅದೆಷ್ಟೋ ಮಂದಿ ಸಕಾಲಕ್ಕೆ ಆಸ್ಪತ್ರೆಗೆ ಹೋಗಲಾಗದೆ ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಗ್ರಾಮದಿಂದ ಆಂಧ್ರ, ಮಧುಗಿರಿ, ಕೊರಟಗೆರೆಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಹಲವು ವರ್ಷಗಳಿಂದ ಹಾಳಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಈ ಭಾಗದ ಜನತೆ ಬೇಸತ್ತಿದ್ದಾರೆ. ಕಳೆದ ತಿಂಗಳು ಇಬ್ಬರು ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಸಂಬಂಧಿಸಿದವರು ಶೀಘ್ರ ರಸ್ತೆ ದುರಸ್ತಿ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಧ್ಯಕ್ಷ ಇ.ಶಿವಣ್ಣ ಎಚ್ಚರಿಸಿದ್ದಾರೆ.

ಪಾವಗಡ ತಾಲ್ಲೂಕು ವೆಂಕಟಾಪುರದಿಂದ ಮಡಕಶಿರಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಿತಿ
ಪಾವಗಡ ತಾಲ್ಲೂಕು ವೆಂಕಟಾಪುರದಿಂದ ಮಡಕಶಿರಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT