ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುರುವೇಕೆರೆ: ನೀರು ಸಂಗ್ರಹವೇ ನಿತ್ಯದ ಬೆಳಗಿನ ಸವಾಲು

ಸೌಲಭ್ಯಗಳಿಂದ ದೂರ ಉಳಿದ ಗಡಿಭಾಗ ಢಣನಾಯಕನ ಪುರ ಕಾವಲ್‌ನ ನಿವಾಸಿಗಳು
Published 22 ಏಪ್ರಿಲ್ 2024, 7:17 IST
Last Updated 22 ಏಪ್ರಿಲ್ 2024, 7:17 IST
ಅಕ್ಷರ ಗಾತ್ರ

ತುರುವೇಕೆರೆ: ಜಿಲ್ಲೆಯ ಗಡಿಭಾಗ ಢಣನಾಯಕನ ಪುರ ಕಾವಲ್‌ (ಡಿ.ಎನ್.ಪುರ) ಕುಡಿಯುವ ನೀರು, ಸೂರು ಸೇರಿದಂತೆ ಅಗತ್ಯ ಸೌಲಭ್ಯಗಳಿಂದ ವಂಚಿತ ಗ್ರಾಮವಾಗಿದೆ.

ಡಿ.ಎನ್.ಪುರ ಕಾವಲ್ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಇಲ್ಲಿ ಭೋವಿ ಸಮುದಾಯಕ್ಕೆ ಸೇರಿದ 30 ಕುಟುಂಬಗಳಿದ್ದು, 120ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕೂಲಿ ಕೆಲಸ, ಮನೆಕಟ್ಟುವುದು, ಬಂಡೆ ಒಡೆಯುವುದು, ಕೃಷಿ ಕಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಂಟು ದಶಕದಿಂದ ಇದೇ ವೃತ್ತಿಯಲ್ಲಿ ತೊಡಗಿದ್ದರೂ, ಸರ್ಕಾರದ ಸವಲತ್ತು ಮಾತ್ರ ಕಾಣದಾಗಿದೆ.

ಫ್ಲೋರೈಡ್ ನೀರು: ಇಲ್ಲಿ ಕೊಳವೆ ಬಾವಿ, ನಲ್ಲಿ ನೀರಿನ ಸೌಕರ್ಯವಿಲ್ಲ. ಕೂಲಿ ಕೆಲಸಕ್ಕೆ ಹೊರಡುವ ಮುನ್ನ ನೀರು ಸಂಗ್ರಹಿಸುವುದೇ ಇಲ್ಲಿನ ನಿವಾಸಿಗಳ ನಿತ್ಯ ಬೆಳಗಿನ ಸವಾಲು. ಮನೆ ಮಂದಿಯಲ್ಲ ಬಿಂದಿಗೆ ಹಿಡಿದು ನೀರಿಗಾಗಿ ಅಲೆಯುತ್ತಾರೆ.

ಗ್ರಾಮದ ಸಮೀಪದ ತೆಂಗು, ತೋಟ, ಬಾಳೆ ತೋಟದ ಸಾಲುಗಳಲ್ಲಿ ಯಾರು ನೀರು ಬಿಟ್ಟಿದ್ದಾರೆ ಎಂದು ಹುಡುಕಿ, ಬಿಂದಿಗೆ ತುಂಬಿಕೊಂಡು ನೀರು ಹೊತ್ತು ತರುತ್ತಾರೆ. ಬೈಕ್ ಇರುವವರು ಮಾಯಸಂದ್ರ ಹಾಗೂ ದೂರದ ಚುಂಚನಗಿರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತರುತ್ತಾರೆ ಎನ್ನುತ್ತಾರೆ ಗೃಹಿಣಿ ಜ್ಯೋತಿ.

ಈ ಹಿಂದೆ ಗ್ರಾಮದ ಜನರಿಗೆ ಸರಬರಾಜು ಮಾಡುತ್ತಿದ್ದ ನೀರು ಕುಡಿದು ಅನಾರೋಗ್ಯ ಬೀಳುತ್ತಿದ್ದ ಕಾರಣ ಆರೋಗ್ಯ ಇಲಾಖೆ ಹಾಗು ಗ್ರಾಮ ಪಂಚಾಯಿತಿ ಅಧಿಕಾರಿಗಳು ನೀರನ್ನು ಪರೀಕ್ಷೆಗೆ ಕಳುಹಿಸಿದ್ದರು. ಇದು ಫ್ಲೋರೈಡ್ ಯುಕ್ತ ನೀರು ಎಂದು ವರದಿ ಬಂದ ನಂತರ ಈ ನೀರನ್ನು ಬಟ್ಟೆ ತೊಳೆಯಲು ಮಾತ್ರ ಬಳಸುತ್ತಾರೆ.

ಸದ್ಯಕ್ಕೆ ಜೋಡುಗಟ್ಟೆ ಸಂತೆ ಬೀದಿಯ ಕೊಳವೆ ಬಾವಿಯಿಂದ ಗ್ರಾಮದ ಸಿಸ್ಟನ್‌ಗೆ ನೀರು ಬರುತ್ತದೆ ಅದೂ ಕುಡಿಯಲು ಯೋಗ್ಯವಲ್ಲ. ಇನ್ನೂ ಸಿಸ್ಟನ್‌ನ ನಲ್ಲಿಗಳು ಹಾಳಾಗಿದ್ದು, ನೀರು ಪೋಲಾಗದಂತೆ ಗ್ರಾಮದವರೇ ನಲ್ಲಿಗೆ ಬಟ್ಟೆ ಕಟ್ಟಿದ್ದಾರೆ ಎಂದು ತಿಮ್ಮರಾಜು ಹೇಳಿದರು.

ಖಾಸಗಿ ಕೊಳವೆ ಬಾವಿಯಿಂದಲೂ ಸಿಗದ ನೀರು: ಗ್ರಾಮದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿರುವ ಕಾರಣ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಖಾಸಗಿ ವ್ಯಕ್ತಿಯ ಕೊಳವೆ ಬಾವಿಯಿಂದ ತಿಂಗಳಿಗೆ ₹18 ಸಾವಿರದಂತೆ ದಿನಕ್ಕೆ ಎರಡು ಗಂಟೆ ನೀರು ಬಿಡುವಂತೆ ಮಾಲೀಕರನ್ನು ಒಪ್ಪಿಸಿ ಈ ಬಗ್ಗೆ ಪೈಪ್‌ಲೈನ್ ಮಾಡುವಂತೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿಗಳ ಸಮ್ಮುಖದಲ್ಲಿ ಆದೇಶ ಮಾಡಿ ತಿಂಗಳುಗಳೇ ಕಳೆದಿವೆ. ಅಧಿಕಾರಿಗಳು ಈವರೆಗೆ ಕಾರ್ಯಗತ ಮಾಡಿಲ್ಲ.

ನಿವೇಶನ ಪತ್ರ ಹಂಚಿಕೆ ಯಾವಾಗ?: ರಾಷ್ಟ್ರೀಯ ಹೆದ್ದಾರಿಯ ಪೂರ್ವಕ್ಕೆ ಹೊಂದಿಕೊಂಡಂತೆ ಇರುವ ಡಿ.ಎನ್.ಪುರ ಕಾವಲ್‌ನಲ್ಲಿ 25 ಕುಟುಂಬಗಳು ನಿವೇಶ ರಹಿತವಾಗಿವೆ. ಸಣ್ಣಪುಟ್ಟ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವರಿಗೆ ಮಹದೇಶ್ವರ ದೇವಸ್ಥಾನ ವ್ಯಾಪ್ತಿಯಲ್ಲಿ ತಹಶೀಲ್ದಾರ್ ಜಾಗ ಗುರುತಿಸಿದ್ದಾರೆ. ನಿವೇಶನ ರಹಿತರು ಮಾಯಸಂದ್ರ ಪಿಡಿಒಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ನಿವೇಶನ ಹಕ್ಕು ಪತ್ರ ಹಂಚಿಲ್ಲ ಎನ್ನುವುದು ಸ್ಥಳೀಯರ ದೂರು.

ಮಹದೇಶ್ವರ ದೇವಸ್ಥಾನದ ಆಸುಪಾಸು ನಿವೇಶನ ಬೇಡ. ದೊಡ್ಡಶೆಟ್ಟಿಕೆರೆ ಜನತಾ ಕಾಲೊನಿಯಲ್ಲಿ ನಿವೇಶನ ನೀಡುವಂತೆ ತಹಶೀಲ್ದಾರ್‌ಗೆ ಗ್ರಾಮಸ್ಥರು ಮನವಿ ನೀಡಿದರು ಯಾವುದೇ ಉಪಯೋಗವಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಇಲ್ಲಿನ ಬಹುಪಾಲು ಜನರು ಮಹದೇಶ್ವರ ಬೆಟ್ಟದ ಆಸುಪಾಸಿನ ಜಮೀನು ಉಳುಮೆ ಮಾಡಿಕೊಂಡು ಬರುತ್ತಾರೆ. ಈ ಭಾಗ ಸಂಪೂರ್ಣ ಒಣ ಪ್ರದೇಶ. ಉತ್ತಮವಾಗಿ ಮಳೆಯಾದರಷ್ಟೇ ಬೆಳೆ ಬೆಳೆಯುತ್ತಾರೆ. ಇಲ್ಲವಾದರೆ ಕೂಲಿ ಕೆಲಸವೇ ಗಟ್ಟಿ.

ಸೊರಗಿದ ಶಾಲೆ: ಇಲ್ಲಿರುವ ಸರ್ಕಾರಿ ಶಾಲೆಯಲ್ಲಿ 21 ಮಕ್ಕಳು ಓದುತ್ತಿದ್ದಾರೆ. ಶಾಲೆಯ ಹೆಸರಿಗೆ 3 ಎಕರೆ 20 ಗುಂಟೆ ಜಮೀನಿದೆ. ಶಾಲೆಗೆ ಕಾಂಪೌಂಡ್ ಇಲ್ಲ. ಹೊಸದಾಗಿ ಕಟ್ಟಿದ ಅಕ್ಷರದಾಸೋಹದ ಕಟ್ಟಡ ಅರ್ಧಕ್ಕೆ ನಿಂತಿದೆ. ಸದ್ಯಕ್ಕೆ ತರಗತಿ ಕೊಠಡಿಯೊಳಗೆ ಮಕ್ಕಳಿಗೆ ಬಿಸಿಯೂಟ ತಯಾರಾಗುತ್ತಿದೆ. ಅದು ಕೂಡ ಶಿಥಲವಾಗಿದೆ. ಶೌಚಾಲಯವೂ ಅವ್ಯವಸ್ಥೆಯಿಂದ ಕೂಡಿದೆ.

ಬರ್ಹಿದೆಸೆ: ಸರ್ಕಾರ ಗ್ರಾಮ ಪಂಚಾಯಿತಿ ಮೂಲಕ ಶೌಚಾಲಯ ಕಟ್ಟಿಕೊಳ್ಳಲು ಪರಿಶಿಷ್ಟ ಜಾತಿಯವರಿಗೆ ₹14 ಸಾವಿರ ಪ್ರೋತ್ಸಾಹಧನ ಕೊಡುತ್ತದೆ. ಆದರೆ ಗ್ರಾಮದಲ್ಲಿ ಶೌಚಾಲಯ ಬಳಕೆ ಬಗ್ಗೆ ಅಧಿಕಾರಿಗಳು ಸರಿಯಾಗಿ ಜಾಗೃತಿ ಮೂಡಿಸದೆ ಬಹುಪಾಲು ಜನರು ಬರ್ಹಿದೆಸೆ ನೆಚ್ಚಿಕೊಂಡಿದ್ದಾರೆ. ಗ್ರಾಮಕ್ಕೆ ಸೂಕ್ತ ರಸ್ತೆ, ಚರಂಡಿ ಹಾಗೂ ಬಸ್‌ಗಳ ಸೌಕರ್ಯವಿಲ್ಲ.

ಸಮೀಪದಲ್ಲಿ ಆಸ್ಪತ್ರೆಗಳು ಇಲ್ಲದ ಕಾರಣ ಖಾಸಗಿ ಆಸ್ಪತ್ರಗೆ ಹೋಗಬೇಕಾದ ಅನಿವಾರ್ಯವಿದೆ. ಇಲ್ಲಿನ ನಿವಾಸಿಗಳು ಅರಿವಿನ ಕೊರತೆಯಿಂದಾಗಿ ಕಾರ್ಮಿಕರ ಸೌಕರ್ಯಗಳು ಸರಿಯಾಗಿ ತಲುಪುತ್ತಿಲ್ಲ.

ಗ್ರಾಮದಲ್ಲಿ ಸಾವಾದಾಗ ಶವಸಂಸ್ಕಾರಕ್ಕೆ ಭೂಮಿ ಇಲ್ಲ. ತಹಶೀಲ್ದಾರ್ ಅವರಿಗೆ ಅರ್ಜಿ ಕೊಟ್ಟಿದ್ದರೂ ಯಾವುದೇ ಉಪಯೋಗವಿಲ್ಲ ಎನ್ನುತ್ತಾರೆ ಇಲ್ಲಿನ ತಮ್ಮಯ್ಯ.

ಪಡಿತರ ಅಕ್ಕಿ ಪಡೆಯಲು ಗ್ರಾಮಸ್ಥರು ಐದಾರು ಕಿ.ಮೀ ದೂರದ ದೊಡ್ಡಶೆಟ್ಟಿಕೆರೆ, ಭೈತರ ಹೊಸಹಳ್ಳಿಗೆ ಕಾಲ್ನಡಿಗೆಯಲ್ಲಿಯೇ ಹೋಗಬೇಕು. ನಡೆದುಕೊಂಡು ಹೋಗಿ ಅಕ್ಕಿ ಚೀಲವನ್ನು ತಲೆ ಮೇಲೆ ಹೊತ್ತೇ ತರಬೇಕು ಎನ್ನುವುದು ತುಳಸಮ್ಮನ ಅಳಲು.

ಶೌಚಾಲಯ ಹಾಳಾಗಿದೆ. ಹೆಣ್ಣು ಮಕ್ಕಳು ಶೌಚಕ್ಕೆ ಹೋಗಲು ಕಷ್ಟ. ಅಕ್ಷರ ದಾಸೋಹಕ್ಕೆ ಹೊಸ ಕೊಠಡಿ ಮಕ್ಕಳ ಭದ್ರತೆ ಹಿತದೃಷ್ಟಿಯಿಂದ ಕಾಂಪೌಂಡ್‌ ಹಾಗೂ ಶಾಲೆಗೆ ಮೂಲಸೌಕರ್ಯದ ಅಗತ್ಯವಿದೆ.
ಮಧು ಎಸ್‌ಡಿಎಂಸಿ ಅಧ್ಯಕ್ಷೆ
ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಬೇಕು. ಶಾಶ್ವತ ಕೊಳವೆ ಬಾವಿ ಕೊರೆಸಬೇಕು ಡಾಂಬರ್ ಚರಂಡಿ ನಿವೇಶನ ಹಕ್ಕು ಪತ್ರ ಸ್ಮಶಾನ ಭೂಮಿ ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಒದಗಿಸಲಿ.
ಯತೀಶ್ ಗ್ರಾಮಸ್ಥ
ಅಧಿಕಾರಿಗಳು ಸರ್ಕಾರದ ಸವಲತ್ತು ನೀಡುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಇಲ್ಲಿನ ಜನರಿಗೆ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ಮಾನವಹಕ್ಕು ಉಲ್ಲಂಘನೆಯಾಗಿರುವ ಬಗ್ಗೆ ಆಯೋಗಕ್ಕೆ ಪತ್ರ ಬರೆಯುತ್ತೇನೆ.
ಸಿದ್ದಲಿಂಗೇಗೌಡ ವಿಶ್ವ ಮಾನವ ಹಕ್ಕು ಹೋರಾಟದ ಸಂಸ್ಥಾಪಕ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT