ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ವಿಶ್ವ ಕರಡಿ ದಿನಾಚರಣೆ ಕಾರ್ಯಕ್ರಮ

Published 24 ಮಾರ್ಚ್ 2024, 14:03 IST
Last Updated 24 ಮಾರ್ಚ್ 2024, 14:03 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ಕನ್ನಡ ಭವನದ ಕೆ.ಎನ್. ರಾಜಣ್ಣ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮಧುಗಿರಿ ವಲಯದಿಂದ ವಿಶ್ವ ಕರಡಿ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ಪ್ರತಿಯೊಬ್ಬರು ವನ್ಯ ಪ್ರಾಣಿಗಳ ಉಳಿಯುವಿಕೆ ಹಾಗೂ ಸಂರಕ್ಷಣೆ ಕಡೆ ಗಮನಹರಿಸಬೇಕು. ಅರಣ್ಯ ಪ್ರದೇಶಗಳನ್ನು ರಕ್ಷಿಸಿದರೆ ಅಲ್ಲಿ ವಾಸಿಸುವ ಪ್ರಾಣಿ, ಪಕ್ಷಿಗಳನ್ನು ಉಳಿಸಿದಂತಾಗುತ್ತದೆ. ಕಾಡು ಇದ್ದರೆ ಪ್ರಾಣಿಗಳು ನಾಡಿನ ಕಡೆ ಬರುವುದಿಲ್ಲ ಎಂದರು.

ವಲಯ ಅರಣ್ಯ ಅಧಿಕಾರಿ ಸುರೇಶ್ ಮಾತನಾಡಿ, ತಿಮ್ಲಾಪುರ ಅರಣ್ಯ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸುವ ಮೂಲಕ ವನ್ಯಜೀವಿ ಮತ್ತು ಸಸ್ಯ ಸಂಪತ್ತಿನ ಸಂರಕ್ಷಣೆ ಪ್ರಾರಂಭವಾಯಿತು. ಈ ಅರಣ್ಯ ಪ್ರದೇಶ ಕರಡಿಗಳ ಬದುಕಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಚಿರತೆ, ಕಿರುಬ, ಮುಳ್ಳಹಂದಿ, ಕಾಡುಹಂದಿ ಸೇರಿದಂತೆ 25 ದೊಡ್ಡ ಪ್ರಾಣಿಗಳ ಪ್ರಭೇದಗಳನ್ನು ಪೋಷಿಸುತ್ತದೆ. 165ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯಗಳನ್ನು 250ಕ್ಕೂ ಹೆಚ್ಚು ಔಷಧಿ ಸಸ್ಯ ಪ್ರಭೇದಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

ಕೊರಟಗೆರೆ ವಲಯ ಅರಣ್ಯ ಅಧಿಕಾರಿ ರವಿ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಎರಡು ಲಕ್ಷ ಕರಡಿಗಳಿದ್ದವು. ಪ್ರಸ್ತುತ 20 ಸಾವಿರ ಕರಡಿಗಳಿವೆ. 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ. ಎಲ್ಲ ವಿದ್ಯಾರ್ಥಿಗಳು ಗಿಡ ನೆಡುವ ಮೂಲಕ ಅರಣ್ಯ ಸಂಪತ್ತನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಅರಣ್ಯ ಸಂಪತ್ತು ಮತ್ತು ಕಾಡುಪ್ರಾಣಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ನಾಟಕ, ನೃತ್ಯ ಪ್ರದರ್ಶನ ಮತ್ತು ಕರಡಿ ವೇಷಧಾರಿ ನೃತ್ಯ ಮೆಚ್ಚುಗೆ ಪಡೆದವು. ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅರಣ್ಯ ಇಲಾಖೆಯಿಂದ ಬಹುಮಾನ ವಿತರಿಸಲಾಯಿತು.

ಉಪವಲಯ ಅರಣ್ಯ ಅಧಿಕಾರಿ ಬಿ.ಎನ್. ಮುತ್ತುರಾಜು, ಸರ್ಕಾರಿ ನೌಕರರ ಸಂಘದ ಖಜಾಂಚಿ ಚಿಕ್ಕರಂಗಯ್ಯ, ಪ್ರಾಂಶುಪಾಲ ರಂಗಪ್ಪ, ಮಹರಾಜು, ನಾರಾಯಣ ರಾಜು, ಅರಣ್ಯ ಇಲಾಖೆಯ ನಾಗರಾಜು, ಚಂದ್ರಶೇಖರ್, ದಾಸಪ್ಪ, ರಾಜಣ್ಣ, ಶ್ರೀಧರ್, ಹರಿಹರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT