ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಪೂರೈಕೆ ಪಾತಾಳಕ್ಕೆ; ಬೆಲೆ ಗಗನಕ್ಕೆ

Last Updated 9 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ತುಮಕೂರು: ಕನಕದಾಸರಿಂದ ಶ್ರೀಸಾಮಾನ್ಯನ ಆಹಾರ ಎಂದೇ ಹೆಗ್ಗಳಿಕೆ ಪಡೆದ ರಾಗಿ ಬೆಲೆ ಈಗ ಗಗನಮುಖಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ದುಪ್ಪಟ್ಟಾಗಿದೆ. ಆದರೂ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ರಾಗಿ ದೊರೆಯುತ್ತಿಲ್ಲ.

ಈ ವರ್ಷ ನಿರಂತರ ಬರದ ಪರಿಣಾಮ ರಾಗಿ ಬೆಳೆ ಬಂದಿಲ್ಲ. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ರಾಗಿ ಸರಬರಾಜು ಆಗುತ್ತಿಲ್ಲ. ರಾಗಿಯನ್ನು ಅತಿ ಹೆಚ್ಚಾಗಿ ಬಳಸುವ ಹಳೆ ಮೈಸೂರು ಪ್ರದೇಶದಲ್ಲಿ ಪ್ರತಿನಿತ್ಯ ರಾಗಿ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ತುಮಕೂರು ಎಪಿಎಂಸಿ ಮಾರುಕಟ್ಟೆಗೆ ಸೆಪ್ಟೆಂಬರ್‌ನಲ್ಲಿ ಕೇವಲ 6 ದಿನ ಮಾತ್ರ ರಾಗಿ ಸರಬರಾಜು ಆಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕ್ವಿಂಟಲ್ ರಾಗಿಗೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸರಾಸರಿ ರೂ. 850ರಿಂದ 1000 ಬೆಲೆ ಇತ್ತು. ಈಗ ರೂ. 1500ರಿಂದ 1800 ಬೆಲೆ ಇದೆ. ಚಿಲ್ಲರೆ ವ್ಯಾಪಾರಿಗಳು ಕೆ.ಜಿ.ಗೆ ರೂ. 20ರಿಂದ 25ಕ್ಕೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಮಾರುಕಟ್ಟೆಗೆ ರಾಗಿ ಬಾರದೆ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು.

ಕಳೆದ ಸೆಪ್ಟೆಂಬರ್ 2011ರಲ್ಲಿ ತುಮಕೂರು ಮಾರುಕಟ್ಟೆಯಲ್ಲಿ (ಎಪಿಎಂಸಿ) ಸಗಟು ದರ (ಸರಾಸರಿ) ಕ್ವಿಂಟಲ್‌ಗೆ ರೂ. 950- 1050, ದಾವಣಗೆರೆಯಲ್ಲಿ ರೂ. 1000, ಬೆಂಗಳೂರಿನಲ್ಲಿ 900- 1050, ಮೈಸೂರು ಮಾರುಕಟ್ಟೆಯಲ್ಲಿ ರೂ. 880ರಿಂದ 990ಕ್ಕೆ ಮಾರಾಟವಾಗಿತ್ತು.

ಈ ವರ್ಷ ಸೆಪ್ಟೆಂಬರ್‌ನಲ್ಲಿ ತುಮಕೂರು ಮಾರುಕಟ್ಟೆಯಲ್ಲಿ ರೂ. 1500ರಿಂದ 1850, ಬೆಂಗಳೂರು ರೂ. 1350ರಿಂದ 1800, ಮೈಸೂರು 1300ರಿಂದ 1600, ದಾವಣಗೆಯಲ್ಲಿ ರೂ. 1500 ಬೆಲೆ ಇದೆ. ಅಕ್ಟೋಬರ್‌ನಲ್ಲಿ ಇದುವರೆಗೆ ಕ್ವಿಂಟಲ್ ರಾಗಿ ಸರಾಸರಿ ರೂ. 1750ಕ್ಕೆ ಮಾರಾಟವಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸರಬರಾಜು ಸುಮಾರು ಅರ್ಧದಷ್ಟು ಕುಸಿತವಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆ (ಎಪಿಎಂಸಿ) ಸೇರಿದಂತೆ ಕಳೆದ 2011ರ ಜೂನ್‌ನಲ್ಲಿ 75,000 ಕ್ವಿಂಟಲ್, ಜುಲೈನಲ್ಲಿ 63000 ಕ್ವಿಂಟಲ್, ಆಗಸ್ಟ್‌ನಲ್ಲಿ 69400 ಕ್ವಿಂಟಲ್, ಸೆಪ್ಟೆಂಬರ್‌ನಲ್ಲಿ 63800 ಕ್ವಿಂಟಲ್, ಅಕ್ಟೋಬರ್‌ನಲ್ಲಿ 64800 ಕ್ವಿಂಟಲ್ ರಾಗಿ ಸರಬರಾಜು ಆಗಿತ್ತು.

ಈ ವರ್ಷದ ಜುಲೈನಲ್ಲಿ 38800 ಕ್ವಿಂಟಲ್,  ಆಗಸ್ಟ್‌ನಲ್ಲಿ 33000 ಕ್ವಿಂಟಲ್, ಸೆಪ್ಟೆಂಬರ್‌ನಲ್ಲಿ 38000 ಕ್ವಿಂಟಲ್ ರಾಗಿ ಸರಬರಾಜು ಆಗಿದೆ. ಆಕ್ಟೋಬರ್‌ನಲ್ಲಿ ಇದುವರೆಗೆ ರಾಜ್ಯದ ಎಲ್ಲ ಮಾರುಕಟ್ಟೆಗಳಿಂದ ಕೇವಲ 5 ಸಾವಿರ ಕ್ವಿಂಟಲ್ ರಾಗಿ ಸರಬರಾಜು ಆಗಿದೆ. ಪೂರೈಕೆ ಕನಿಷ್ಠ ಮಟ್ಟಕ್ಕೆ ಇಳಿದಿರುವುದರಿಂದ ಬೆಲೆಯಲ್ಲಿ ಅಗಾಧ ಪ್ರಮಾಣದ ಹೆಚ್ಚಳ ಕಂಡುಬಂದಿದೆ.

ಹಿಟ್ಟು ಸಿಗುತ್ತಿಲ್ಲ: ರಾಗಿಯನ್ನು ಹಿಟ್ಟು ಮಾಡಿ ಸರಬರಾಜು ಮಾಡುತ್ತಿದ್ದ ಸಾಕಷ್ಟು ಗಿರಣಿಗಳು ಸ್ಥಗಿತಗೊಂಡಿವೆ. ರಾಗಿ ಬೆಲೆ ನಿತ್ಯ ಹೆಚ್ಚಳವಾಗುತ್ತಿರುವುದರಿಂದ ಹಿಟ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ತುಮಕೂರಿಗೆ ಬೆಂಗಳೂರಿನ ಹಲವು ಗಿರಣಿಗಳು ಹಿಟ್ಟು ಸರಬರಾಜು ಮಾಡುತ್ತಿದ್ದವು.
 
ಕಳೆದ ತಿಂಗಳಿಂದ ಚಿಲ್ಲರೆ ಅಂಗಡಿಗಳಿಗೆ ಹಿಟ್ಟು ಪೂರೈಕೆ ನಿಲುಗಡೆಯಾಗಿದೆ. ಅಲ್ಲದೆ ಅಂಗಡಿಗಳಲ್ಲಿ ಚಿಲ್ಲರೆ ಪ್ರಮಾಣದಲ್ಲಿ ಸಿಗುವ ರಾಗಿ ಗುಣಮಟ್ಟ ಸಹ ಕಳಪೆಯಾಗಿದೆ. ಇಂತಹ 1 ಕೆ.ಜಿ. ರಾಗಿಯನ್ನು ಸಂಸ್ಕರಣೆ ಮಾಡಿದರೆ 800 ಗ್ರಾಂ ಹಿಟ್ಟು ದೊರೆಯುತ್ತದೆ ಎನ್ನುತ್ತಾರೆ ಗ್ರಾಹಕರು.

ಅಕ್ಕಿ, ಬೇಳೆಕಾಳು, ಎಣ್ಣೆ ಸೇರಿದಂತೆ ದಿನನಿತ್ಯ ಬಳಕೆಯ ಆಹಾರ ಧಾನ್ಯಗಳ ಬೆಲೆ ಪ್ರತಿ ನಿತ್ಯ ಹೆಚ್ಚಳವಾಗುತ್ತಿದ್ದು, ರಾಗಿಯ ಬೆಲೆ ಸಹ ದುಪ್ಪಟ್ಟಾಗಿರುವುದರಿಂದ ಜನಸಾಮಾನ್ಯರಿಗೆ ಹೊಡೆತ ಬಿದ್ದಂತಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT