ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಹ್ಮಾವರ | ಕೃಷಿ ಡಿಪ್ಲೊಮಾ ಕೋರ್ಸ್‌ ಸ್ಥಗಿತ: ವಿದ್ಯಾರ್ಥಿಗಳು ಅತಂತ್ರ

ಕೃಷಿ ಪ್ರಧಾನ ದೇಶದಲ್ಲಿ ಕೃಷಿಗೆ ಸರ್ಕಾರದ ನಿರುತ್ಸಾಹ
ಶೇಷಗಿರಿ ಭಟ್‌
Published 7 ಮೇ 2024, 6:10 IST
Last Updated 7 ಮೇ 2024, 6:10 IST
ಅಕ್ಷರ ಗಾತ್ರ

ಬ್ರಹ್ಮಾವರ: ಕೃಷಿ ವಿಶ್ವವಿದ್ಯಾಲಯಗಳಲ್ಲಿ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸಿ 1 ವರ್ಷ ಕಳೆದರೂ ಮತ್ತೆ ಕೋರ್ಸ್‌ ಆರಂಭಿಸುವ ಬಗ್ಗೆಯಾಗಲೀ ಅಥವಾ ಹೊಸ ಕೃಷಿ ಕಾಲೇಜು ತೆರೆಯುವ ಬಗ್ಗೆಯಾಗಲಿ ಸರ್ಕಾರ ಆದೇಶ ನೀಡದಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ.

ಸರ್ಕಾರದ ನಿರ್ಲಕ್ಷ್ಯದಿಂದ ಯುವ ಜನತೆ ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಕೃಷಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಬೋಧಕೇತರ ಸಿಬ್ಬಂದಿಗಳ ಉದ್ಯೋಗಕ್ಕೆ ಕುತ್ತು ಬಂದಿದೆ.

ಎಸ್ಸೆಸ್ಸೆಲ್ಸಿ ನಂತರ ಗ್ರಾಮೀಣ ಭಾಗಗಳ ಅದರಲ್ಲೂ ಕೃಷಿ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಸೇರಿದಂತೆ ಕೃಷಿ ಕ್ಷೇತ್ರ ಸಂಬಂಧಿತ ಇತರ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಡಿಪ್ಲೊಮಾ ಕೋರ್ಸ್ ಹೆಚ್ಚು ಸಹಕಾರಿಯಾಗಿತ್ತು. ಕೋರ್ಸ್‌ ಮುಗಿಸಿ ಸ್ವ ಉದ್ಯೋಗ ಅಥವಾ ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗ ಗಿಟ್ಟಿಸಿಕೊಳ್ಳಲು ಡಿಪ್ಲೊಮಾ ಕೋರ್ಸ್‌ ನೆರವಾಗಿತ್ತು. 

ಯುವ ಜನತೆಯಲ್ಲಿ ಕೃಷಿ ಆಸಕ್ತಿ ಮೂಡಿಸಲು ನೆರವಾಗಿದ್ದ ಡಿಪ್ಲೊಮಾ ಕೋರ್ಸ್‌ಗಳಿಗೆ ಕಳೆದ ವರ್ಷದಿಂದ ಪ್ರವೇಶಾತಿಯೇ ನಡೆದಿಲ್ಲ.

ದಾರವಾಡ ವಿಶ್ವವಿದ್ಯಾಲಯದಲ್ಲಿ ಕೃಷಿ ಹಾಗೂ ಅರಣ್ಯ ಡಿಪ್ಲೊಮಾ ಕೋರ್ಸ್‌, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮಂಡ್ಯದ ಕೃಷಿ ಕಾಲೇಜಿನಲ್ಲಿ ಕೃಷಿ ಕೋರ್ಸ್‌, ಚಿಂತಾಮಣಿ ಕೃಷಿ ಕಾಲೇಜಿನಲ್ಲಿ ರೇಷ್ಮೆ ವಿಷಯದ ಬಗ್ಗೆ ಡಿಪ್ಲೋಮಾ ಕೋರ್ಸ್‌ ಹಾಗೂ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿ ಕೆವಿಕೆ ಬ್ರಹ್ಮಾವರದಲ್ಲಿ ಕೃಷಿ ವಿಷಯಕ್ಕೆ ಸಂಬಂಧಿಸಿದ ಡಿಪ್ಲೊಮಾ ಕೋರ್ಸ್‌ ಕಲಿಕೆಗೆ ಅವಕಾಶವಿತ್ತು.

ಬೀದರ್‌ ವಿಶ್ವವಿದ್ಯಾಲಯದಲ್ಲಿ ಹೈನುಗಾರಿಕೆ ಹಾಗೂ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಷಯದ ಡಿಪ್ಲೊಮಾ ಕೋರ್ಸ್‌ಗಳಿದ್ದವು. ಈ ಎಲ್ಲ ಕೃಷಿ ವಿಶ್ವವಿದ್ಯಾಲಯಗಳು ಅಧಿಸೂಚನೆ ಹಿಂಪಡೆದಿರುವ ಬಗ್ಗೆ ಸ್ಪಷ್ಟವಾದ ಕಾರಣ ತಿಳಿಸಿಲ್ಲ.

ಕೃಷಿ ಸಹಾಯಕರ ನೇಮಕದ ಉದ್ದೇಶದಿಂದ ವಿವಿಧ ವಿಷಯಗಳ ಡಿಪ್ಲೊಮಾ ಕೋರ್ಸ್‌ಗಳನ್ನು 10 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಆರಂಭವಾಗಿತ್ತು. ಎಸ್ಸೆಸ್ಸೆಲ್ಸಿ ಮುಗಿಸಿದ ತಲಾ 50 ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರವೇಶ ನೀಡುವುದರೊಂದಿಗೆ ಮಾಸಿಕ ₹1 ಸಾವಿರ ಶಿಷ್ಯ ವೇತನ ಸಹ ನೀಡಲಾಗುತ್ತಿತ್ತು.

ಡಿಪ್ಲೊಮಾದ ನಂತರ ಬಿಎಸ್ಸಿ (ಕೃಷಿ) ಪದವಿಗೆ ಸೇರಲು ಮೀಸಲಾತಿ ಸಹ ನೀಡಲಾಗಿತ್ತು. ಆದರೆ, ಇತ್ತೀಚೆಗೆ ಈ ಕೋರ್ಸ್‌ಗಳಿಗೆ ಸರ್ಕಾರವು ಆರ್ಥಿಕ ನೆರವು ನೀಡುತ್ತಿಲ್ಲ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಹ ನೀಡುತ್ತಿಲ್ಲ.

ಕರಾವಳಿಯ ಕಥೆ: ಉಡುಪಿ ಜಿಲ್ಲೆಯ ಬ್ರಹ್ಮಾವರ ಕೆವಿಕೆಯಲ್ಲಿ ಕೃಷಿ ಡಿಪ್ಲೊಮಾ ಸ್ಥಗಿತಗೊಳಿಸಿದ್ದರ ಬಗ್ಗೆ ಕರಾವಳಿ ಜಿಲ್ಲೆಗಳಲ್ಲಿ ವಿರೋಧ ವ್ಯಕ್ತವಾಗಿದೆ. ಬ್ರಹ್ಮಾವರದಲ್ಲಿ ಕೃಷಿ ಪದವಿ ಆರಂಭಿಸಲು ಯಾವುದೇ ತೊಂದರೆ ಇಲ್ಲ. ಸುಮಾರು ಇಪ್ಪತೈದಕ್ಕೂ ಹೆಚ್ಚು ವಿಜ್ಞಾನಿಗಳು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಕೇಂದ್ರದಲ್ಲಿ 300 ಎಕರೆ ಜಾಗವೂ ಇದೆ.

ಮಂಗಳೂರಿನಲ್ಲಿ ಬಿಎಸ್ಸಿ ಫಿಶರಿಷ್ ಕಾಲೇಜು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶಿರಸಿಯಲ್ಲಿ ಬಿಎಸ್ಸಿ ಫಾರೆಸ್ಟರಿ ಕೋರ್ಸ್‌ ಹೊರತುಪಡಿಸಿದರೆ ಕೃಷಿಗೆ ಸಂಬಂಧಪಟ್ಟ ಕಾಲೇಜುಗಳಿಲ್ಲ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದ್ದ ಏಕೈಕ ಕೃಷಿ ಡಿಪ್ಲೊಮಾ ಕಾಲೇಜು ಸಹ ಮುಚ್ಚುತ್ತಿರುವುದು ಬೇಸರದ ಸಂಗತಿಯಾಗಿದೆ.

ಅತಂತ್ರ ಸ್ಥಿತಿಯಲ್ಲಿ ಬೋಧಕೇತರ ಸಿಬ್ಬಂದಿ

ರಾಜ್ಯದ ಆಯ್ದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೃಷಿ ಡಿಪ್ಲೊಮಾ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದಲ್ಲಿ ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಕಚೇರಿ, ವಾಚನಾಲಯ, ಲ್ಯಾಬ್‌, ಕಂಪ್ಯೂಟರ್‌ ವಿಭಾಗ, ಹಾಸ್ಟೆಲ್‌ ಹೀಗೆ ವಿವಿಧೆಡೆ ಗುತ್ತಿಗೆ ಆಧಾರ ಮತ್ತು ದಿನಗೂಲಿಯಲ್ಲಿ ಸಿಬ್ಬಂದಿ ದುಡಿಯುತ್ತಿದ್ದರು.

ಇದೀಗ ಇವರೆಲ್ಲ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 10ರಿಂದ 15 ವರ್ಷ ಕೆಲಸ ಮಾಡಿರುವ ಸಿಬ್ಬಂದಿಯ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿಬ್ಬಂದಿಗಳು ಜನಪ್ರತಿನಿಧಿಗಳಿಗೆ, ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಹಲವು ಮನವಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ನಿರುಪಯುಕ್ತವಾಗುವ ಕಟ್ಟಡಗಳು

ಕೋಟಿಗಟ್ಟಲೆ ವ್ಯಯ ಮಾಡಿ ಕೃಷಿ ಕಾಲೇಜು ಕಟ್ಟಡ, ಬೋಧನಾ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ವಿಚಾರ ಸಂಕಿರಣ ಕೊಠಡಿ, ಪ್ರಯೋಗ ತಾಕುಗಳು, ವಿದ್ಯಾರ್ಥಿ ನಿಲಯ, ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಇದೀಗ ಇವೆಲ್ಲವೂ ನಿರುಪಯುಕ್ತವಾಗಲಿದೆ ಎಂದು ಸ್ಥಳೀಯ ಕೃಷಿಕರು ಬೇಸರ ವ್ಯಕ್ತಪಡಿಸುತ್ತಾರೆ.

ವೀರೇಶ್‌
ವೀರೇಶ್‌
ಉಡುಪಿ ಜಿಲ್ಲೆಯ ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಕಾಲೇಜಿನ ಹೊರನೋಟ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಕಾಲೇಜಿನ ಹೊರನೋಟ.
2014ರಲ್ಲಿ ಆರಂಭವಾದ ಕೃಷಿ ಡಿಪ್ಲೊಮಾ ಕೋರ್ಸ್‌ಗಳ ಸ್ಥಗಿತ ನೂರಾರು ಗುತ್ತಿಗೆ ಮತ್ತು ದಿನಗೂಲಿ ನೌಕರರ ಭವಿಷ್ಯ ಅತಂತ್ರ ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಮೂಡಿಸಲು ಕೋರ್ಸ್‌ ಮರು ಆರಂಭಕ್ಕೆ ಆಗ್ರಹ
ಕೃಷಿ ಡಿಪ್ಲೊಮಾ ಕೋರ್ಸ್‌ ಮರು ಆರಂಭಿಸುವಂತೆ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರಲ್ಲಿ ಕೇಳಿಕೊಂಡಿದ್ದು ಸರ್ಕಾರದ ಉನ್ನತ ಸಮಿತಿ ಕಾಲೇಜಿನ ಮೂಲಸೌಕರ್ಯ ಪರಿಶೀಲಿಸಿದೆ. ಮರು ಆರಂಭಕ್ಕೆ ಶಕ್ತಿಮೀರಿ ಪ್ರಯತ್ನಿಸಲಾಗುವುದು.
–ಕೆ.ಜಯಪ್ರಕಾಶ ಹೆಗ್ಡೆ ಮಾಜಿ ಸಚಿವ
2014ರಲ್ಲಿ ಆರಂಭವಾದ ಕೃಷಿ ಡಿಪ್ಲೊಮಾ ಸಾವಿರಾರು ಯುವ ಕೃಷಿಕರನ್ನು ದೇಶಕ್ಕೆ ನೀಡಿದೆ. ಹೊಸ ಬ್ಯಾಚ್‌ಗಳ ಪ್ರವೇಶಕ್ಕೆ ಸರ್ಕಾರ ಆದೇಶ ಹೊರಡಿಸಿದರೆ ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಮೂಡಿಸಿದಂತಾಗುತ್ತದೆ.
–ಯಡ್ತಾಡಿ ಸತೀಶ ಕುಮಾರ್‌ ಶೆಟ್ಟಿ ಪ್ರಗತಿಪರ ಕೃಷಿಕ
ವಿದ್ಯಾರ್ಥಿಗಳಲ್ಲಿ ಆತಂಕ
ಕೃಷಿಯೊಂದಿಗೆ ಇತರೆ ಉಪ ಕಸುಬು ರೈತರಿಗೆ ಬೇಕಾಗಿದ್ದ ಮಾಹಿತಿಗಳನ್ನು ಡಿಪ್ಲೊಮಾ ಕೋರ್ಸ್‌ನಿಂದ ಪಡೆಯಲು ಸಾಧ್ಯವಿತ್ತು. ಡಿಪ್ಲೊಮಾ ನಂತರ ನೇರವಾಗಿ ಕೃಷಿಯಲ್ಲಿ ಬಿಎಸ್ಸಿ ಮಾಡಲು ಅನುಕೂಲವಾಗುತ್ತಿತ್ತು. ಕಳೆದ ವರ್ಷದಿಂದ ಏಕಾಏಕಿ ಡಿಪ್ಲೊಮಾ ತರಗತಿಗಳನ್ನು ನಡೆಸದಂತೆ ಸರ್ಕಾರ ಆದೇಶ ಹೊರಡಿಸಿರುವುದು ಕೃಷಿಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದೆ. ಇನ್ನಾದರೂ ಸರ್ಕಾರ ಈ ಬಗ್ಗೆ ಗಮನಹರಿಸಿ ಮತ್ತೆ ಕೃಷಿ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸುವಂತೆ ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ತೊಂಬಟ್ಟುವಿನ ಪ್ರಸನ್ನ ಉಡುಪ ಮತ್ತು ದಾವಣಗೆರೆಯ ವೀರೇಶ್‌ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT