ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಹೆಯ ಮಾತುಗಳು!

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ವೃತ್ತಿನಿಷ್ಠೆ ಹಾಗೂ ಹೊಣೆಗಾರಿಕೆಯ ನಡುವೆ’
(‍ಪ್ರ.ವಾ., ಏ. 13) ಎಂಬ ರಾಮಚಂದ್ರ ಗುಹಾ ಅವರ ಲೇಖನವು ಆಸಕ್ತಿಯಿಂದ ಓದಿಸಿಕೊಳ್ಳುವಂಥದ್ದು. ಲೇಖನದ ನಡುವೆ ಒಂದು ಮಾತು ಬರುತ್ತದೆ. ಈ ಮಾತಿಗೆ ಹಿನ್ನೆಲೆಯಾಗಿದೆ ನ್ಯಾಯಮೂರ್ತಿ ಚೆಲಮೇಶ್ವರ್ ಅವರಿಗೆ ಕರಣ್ ಥಾಪರ್ ಕೇಳಿದ ಪ್ರಶ್ನೆ ಮತ್ತು ಅದಕ್ಕೆ ನ್ಯಾಯಮೂರ್ತಿ ಉತ್ತರಿಸಿದ ವೈಖರಿ. ಪ್ರಶ್ನೆ ಮತ್ತು ಉತ್ತರ ಹೀಗಿವೆ: ‘ಈಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಬಳಿಕ ಆ ಹುದ್ದೆಗೆ ಬಡ್ತಿ ಪಡೆಯುವವರು ಯಾರು’ ಇದು ಥಾಪರ್ ಪ್ರಶ್ನೆ. ನ್ಯಾಯಮೂರ್ತಿ ರಂಜನ್ ಗೊಗೊಯ್ ಸಹಜವಾಗಿ ಈ ಹುದ್ದೆಗೆ ಏರಬೇಕು, ಆದರೆ ತಾವು ನಾಲ್ವರು ಬರೆದ ಪತ್ರಕ್ಕೆ ಗೊಗೊಯ್ ಅವರೂ ಸಹಿ ಮಾಡಿರುವುದರಿಂದ ಸರ್ಕಾರ ಬಡ್ತಿಯನ್ನು ತಡೆಯಲು ಪ್ರಯತ್ನಿಸಬಹುದು– ಇದು ಚೆಲಮೇಶ್ವರ್ ಉತ್ತರ. ‘ಈ ಸಾಧ್ಯತೆ ಇದೆಯೇ’ ಎಂದು ಥಾಪರ್ ಕೇಳಿದಾಗ

ಚೆಲಮೇಶ್ವರ್, ‘ಇದು ಬಹಳ ವಿರಳ ಸಾಧ್ಯತೆ’ ಎಂದರು. ಬಡ್ತಿಯನ್ನು ತಡೆಹಿಡಿಯುವ ಸಾಧ್ಯತೆ ಇಲ್ಲದಿಲ್ಲ ಎನ್ನುವುದು ಉತ್ತರದ ಒಳದನಿ!

ಸರ್ಕಾರದ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಖಚಿತವಾಗಿ ಅರಿಯದೇ ಊಹೆಯನ್ನು ಸಾರ್ವಜನಿಕವಾಗಿ ಹರಿಯಬಿಡುವುದು ಎಷ್ಟು ಉಚಿತ? ಗುಹಾ ಅವರು ಪ್ರಾರಂಭದಲ್ಲಿ ಪ್ರಸ್ತಾಪಿಸುವ ಐಎಎಸ್ ಅಧಿಕಾರಿಯು ಬಹುಶಃ ಹೀಗೆ ಉತ್ತರ ಕೊಡುತ್ತಿರಲಿಲ್ಲ! ಪ್ರಶ್ನೋತ್ತರವನ್ನು ಪ್ರಸ್ತಾಪಿಸಿ ಗುಹಾ ಹೇಳುತ್ತಾರೆ: ‘...ಮೋದಿ ನೇತೃತ್ವದ ಸರ್ಕಾರ ಕೂಡ ಇಂದಿರಾ ಗಾಂಧಿ ಅವರ ರೀತಿಯಲ್ಲೇ ನ್ಯಾಯಾಂಗವನ್ನು ತನ್ನ ಮುಷ್ಟಿಯಲ್ಲಿ ಇರಿಸಿಕೊಳ್ಳಲು ಯತ್ನಿಸುತ್ತಿರುವಂತೆ ಕಾಣಿಸುತ್ತಿರುವುದರಿಂದ ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡುವ ನಿಟ್ಟಿನಲ್ಲಿ ಇದೊಂದು ಪೂರ್ವಭಾವಿ ಹೆಜ್ಜೆ’.

ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬಂದ ನಂತರದಲ್ಲಿ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ‘ನ್ಯಾಯಾಂಗವನ್ನು ತನ್ನ ಮುಷ್ಟಿಯಲ್ಲಿ’ ಹಿಡಿದಿಟ್ಟುಕೊಳ್ಳಲು ಅನುವಾಗುವಂಥ ನೇಮಕಾತಿಗಳನ್ನು ಮಾಡಿದ್ದರೆ, ಅಂಥವನ್ನು ಗುಹಾ ಪ್ರಸ್ತಾಪಿಸಿದ್ದರೆ, ಅವರ ಮಾತಿಗೆ ಬೆಲೆ ಇರುತ್ತಿತ್ತು. ಇಂದಿರಾ ಗಾಂಧಿಗೆ ಹಾಗೆ ವರ್ತಿಸುವ ತುರ್ತು ಇತ್ತು. ಅಂಥ ಪರಿಸ್ಥಿತಿ ಈಗ ಇದೆಯೇ?

ಗುಹಾ ಅವರಿಗೆ ಬಿಜೆಪಿ ಬಗ್ಗೆ, ಅದರಲ್ಲೂ ಮೋದಿಯವರ ಬಗ್ಗೆ ಅಸಮಾಧಾನ. ಇನ್ನು ಕೆಲವರು ಈಗ ‘ಮೂಲಭೂತ ಸ್ವಾತಂತ್ರ್ಯದ ದಮನವಾಗುತ್ತಿದೆ’ ಎಂದು ಗುಲ್ಲೆಬ್ಬಿಸುತ್ತಾರೆ. ಬಿಜೆಪಿಯನ್ನು, ಮೋದಿ ಹಾಗೂ ಅಮಿತ್‌ ಶಾ ಅವರನ್ನು ದ್ವೇಷಿಸಿ ಮಾತನಾಡುವುದು, ಬರೆಯುವುದು ಎಲ್ಲವೂ ಅವ್ಯಾಹತವಾಗಿ ನಡೆಯುತ್ತವೆ. ಎಲ್ಲವನ್ನೂ ‘ಊಹಾ ಸಾಮ್ರಾಜ್ಯ’ದಲ್ಲೇ ಕಂಡು ಅವು ಸತ್ಯ ಎಂದು ಹೇಳಿಬಿಡುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT