ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರ್ವ | ಬಾಡಿಗೆ ಉಳುಮೆ ಯಂತ್ರ ದುಬಾರಿ: ರೈತರು ಕಂಗಾಲು

ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿವೆ ಎರಡೇ ರೈತರ ಬಾಡಿಗೆ ಸೇವಾ ಕೇಂದ್ರ, ಮಧ್ಯವರ್ತಿಗಳ ಕಾಟ
ಪ್ರಕಾಶ ಸುವರ್ಣ ಕಟಪಾಡಿ
Published 26 ಮೇ 2024, 5:37 IST
Last Updated 26 ಮೇ 2024, 5:37 IST
ಅಕ್ಷರ ಗಾತ್ರ

ಶಿರ್ವ: ಕರಾವಳಿಯಲ್ಲಿ ತುಂತುರು ಮಳೆ ಆರಂಭಗೊಳ್ಳುತ್ತಿದ್ದಂತೆ ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತಿದೆ. ಆದರೆ ಖಾಸಗಿ ಕೃಷಿ ಉಳುಮೆ ಯಂತ್ರಗಳ ದುಬಾರಿ ಬಾಡಿಗೆಯಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಕೆಲ ಮಧ್ಯವರ್ತಿಗಳು ಉತ್ತರ ಕನ್ನಡ ಭಾಗದಿಂದ ಖಾಸಗಿ ಉಳುಮೆ ಯಂತ್ರಗಳನ್ನು ಜಿಲ್ಲೆಗೆ ತರಿಸಿಕೊಂಡು ಗಂಟೆಗೆ ₹1,100ರಿಂದ ₹1,200ರಂತೆ ಕೃಷಿಕರಿಂದ ಬಾಡಿಗೆ ಪೀಕುತ್ತಿದ್ದಾರೆ.

ಜಿಲ್ಲೆಯಲ್ಲಿ ಸರ್ಕಾರಿ ಅನುದಾನದಡಿ ಕಾರ್ಯಾಚರಿಸುತ್ತಿದ್ದ 6 ರೈತರ ಬಾಡಿಗೆ ಸೇವಾ ಕೇಂದ್ರಗಳ ಪೈಕಿ ಸದ್ಯ 2 ಕೇಂದ್ರಗಳು ಮಾತ್ರ ಕಾರ್ಯಾಚರಿಸುತ್ತಿರುವುದರಿಂದ ಸಮಸ್ಯೆ ತಲೆದೋರಿದೆ.

ಕೃಷಿ ಇಲಾಖೆ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಬಾಡಿಗೆ ಸೇವಾ ಕೇಂದ್ರಗಳಿಂದ ಕೃಷಿಕರು ಉಳುಮೆ ಯಂತ್ರ ತರಿಸಿಕೊಂಡಲ್ಲಿ ಗಂಟೆಗೆ ₹200ರಿಂದ ₹800 ಸಬ್ಸಿಡಿ ದರ ಮಾತ್ರ ಪಾವತಿಸಿದರೆ ಸಾಕು. ಖಾಸಗಿ ಉಳುಮೆ ಯಂತ್ರಕ್ಕೆ ಗಂಟೆಗೆ ₹400 ಹೆಚ್ಚುವರಿ ಪಾವತಿಸಬೇಕಿದೆ. ದಲ್ಲಾಳಿಗಳ ಕಾಟದಿಂದಾಗಿ ಕೃಷಿಕರಿಗೆ ಅನ್ಯಾಯವಾಗುತ್ತಿದೆ ಎಂದು ಅನೇಕ ಕೃಷಿಕರು ದೂರಿದ್ದಾರೆ.

ಜಿಲ್ಲೆಯಲ್ಲಿ ಬಾಡಿಗೆ ಕೇಂದ್ರಗಳು ತಾಲ್ಲೂಕಿಗೆ ಒಂದರಂತೆ 6 ಕಡೆ ಕಾರ್ಯನಿರ್ವಹಿಸುತ್ತಿದ್ದವು. ಈಗ ಉಡುಪಿ ಮತ್ತು ವಂಡ್ಸೆಯ ಕೇಂದ್ರ ಮಾತ್ರ ಕಾರ್ಯಾಚರಿಸುತ್ತಿದ್ದು, ಅಲ್ಲಿ 6 ವರ್ಷ ಹಳೆಯ ಉಳುಮೆ ಯಂತ್ರಗಳಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿಕರ ಬೇಡಿಕೆ ಪೂರೈಸಲು ಈ 2 ಕೇಂದ್ರಗಳಲ್ಲಿ ಬೆರಳೆಣಿಕೆಯ ಯಂತ್ರಗಳು ರೈತರ ಸೇವೆಗೆ ಲಭ್ಯವಿದೆ.

ಕೃಷಿ ಇಲಾಖೆಯ ಬಾಡಿಗೆ ಕೇಂದ್ರದಲ್ಲಿ ಲಭ್ಯವಿರುವ ಬೆರಳೆಣಿಕೆಯ ಯಂತ್ರಗಳಿಂದ ಜಿಲ್ಲೆಯಲ್ಲಿ ಸಕಾಲದಲ್ಲಿ ಉಳುಮೆ ಕಾರ್ಯ ಮಾಡಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನ ಕೃಷಿಕರು ಬಾಡಿಗೆ ದರ ಹೆಚ್ಚಾದರೂ ಖಾಸಗಿ ಉಳುಮೆ ಯಂತ್ರಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಕರಾವಳಿಯಲ್ಲಿ ಭತ್ತದ ಕೃಷಿ ಅಭಿವೃದ್ದಿ ಪಡಿಸಬೇಕು ಎನ್ನುವ ಸರ್ಕಾರ ಕೃಷಿಕರಿಗೆ ಕೃಷಿ ಇಲಾಖೆ ಮೂಲಕ ಅಗತ್ಯ ಅನುಕೂಲತೆಗಳನ್ನು ಕಲ್ಪಿಸಿಕೊಡಬೇಕಾಗಿದೆ.

ದಲ್ಲಾಳಿ ಕಾಟ ತಪ್ಪಿಸಿ: ಕರಾವಳಿಯ ಕೃಷಿಕರು ಮುಂಗಾರು ಮಳೆ ನಂಬಿಕೊಂಡು ಸಕಾಲದಲ್ಲಿ ಉಳುಮೆ ಮಾಡಿ ಭತ್ತ ನಾಟಿ ಮಾಡಬೇಕಾಗುವುದರಿಂದ ಖಾಸಗಿ ಉಳುಮೆಯಂತ್ರವನ್ನು ಅವಲಂಬಿಸಬೇಕಾದುದು ಅನಿವಾರ್ಯವೆನಿಸಿದೆ. ಬಾಡಿಗೆ ಸೇವಾ ಕೇಂದ್ರಗಳು ಪೂರಕವಾಗಿ ಸ್ಪಂದಿಸದೆ ಇರುವುದೇ ಕೃಷಿಕರು ಖಾಸಗಿಯತ್ತ ಮುಖಮಾಡಲು ಕಾರಣ. ಲಾಭದಾಯಕವಾಗಿ ಭತ್ತ ಕೃಷಿ ನಡೆಯಬೇಕಾದರೆ ಕೃಷಿ ಇಲಾಖೆ, ಜಿಲ್ಲಾಡಳಿತ ದಲ್ಲಾಳಿಗಳ ಕಾಟ ತಪ್ಪಿಸಿ ಕೃಷಿಕರಿಗೆ ಕೈಗೆಟಕುವ ದರದಲ್ಲಿ ಖಾಸಗಿ ಅಥವಾ ಸರ್ಕಾರಿ ಉಳುಮೆ ಯಂತ್ರಗಳನ್ನು ಪೂರೈಸಬೇಕು ಎಂದು ಯುವ ಪ್ರಗತಿಪರ ಕೃಷಿಕ ಸಂತೋಷ್ ಶೆಟ್ಟಿ ಪಂಜಿಮಾರು ಆಗ್ರಹಿಸಿದ್ದಾರೆ.

ಬಾಡಿಗೆ ಸೇವಾ ಕೇಂದ್ರಗಳಲ್ಲಿ ಸರ್ಕಾರಿ ದರ:

ಜಿಲ್ಲೆಯಲ್ಲಿ ಬಾಡಿಗೆ ಸೇವಾ ಕೇಂದ್ರಗಳ ಮೂಲಕ ಕೃಷಿಕರಿಗೆ ಉಳುಮೆ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಬಾಡಿಗೆ ಕೊಡಲಾಗುತ್ತದೆ. ಆದರೆ ಪ್ರಸ್ತುತ ಎರಡೇ ಕೇಂದ್ರಗಳು ಇರುವುದರಿಂದ ಜಿಲ್ಲೆಯ ಎಲ್ಲಾ ಭಾಗದ ರೈತರ ಬೇಡಿಕೆ ಈಡೇರಿಸಲು ಉಳುಮೆ ಯಂತ್ರಗಳ ಕೊರತೆಯಿದೆ. ಒಪ್ಪಂದದ ಅವಧಿ ಮುಗಿದಿದ್ದರಿಂದ 4 ಸೇವಾ ಕೇಂದ್ರಗಳು ಮುಚ್ಚಿವೆ. ಉಡುಪಿ ಮತ್ತು ವಂಡ್ಸೆಯಲ್ಲಿರುವ ಬಾಡಿಗೆ ಸೇವಾ ಕೇಂದ್ರಗಳಲ್ಲಿ ಸರ್ಕಾರಿ ದರದಲ್ಲಿ ಉಳುಮೆ ಯಂತ್ರಗಳನ್ನು ಹಂತ ಹಂತವಾಗಿ ಕೃಷಿಕರಿಗೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT