ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಬುಗಳ್ಳ ಸರ್ಕಾರ ತೊಲಗುವವರೆಗೂ ಹೋರಾಟ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ತೈಲೆ ಬೆಲೆ ಏರಿಕೆ ವಿರೋಧಿಸಿ ಬೃಹತ್‌ ಪ್ರತಿಭಟನೆ
Last Updated 7 ಜುಲೈ 2021, 12:29 IST
ಅಕ್ಷರ ಗಾತ್ರ

ಶಿರಸಿ: ‘ತೈಲಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಸರ್ಕಾರ ಜನಸಾಮಾನ್ಯರ ಜೇಬು ಕತ್ತರಿಸುತ್ತಿದೆ. ಜೇಬುಗಳ್ಳರ ಸರ್ಕಾರ ತೊಲಗಿಸಲು ಹೋರಾಟ ಆರಂಭಿಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ಬುಧವಾರ ತೈಲೆ ಬೆಲೆ ಏರಿಕೆ ವಿರೋಧಿಸಿ ನಡೆದ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದೆ ಯುಪಿಎ ಸರ್ಕಾರ ಇದ್ದಾಗ ತೈಲಬೆಲೆ ಏರಿಕೆ ವಿರುದ್ಧ ಬಿಜೆಪಿ ನಾಯಕರು ತಲೆ ಮೇಲೆ ಸಿಲಿಂಡರ್ ಇಟ್ಟು ಪ್ರತಿಭಟಿಸಿದ್ದರು. ಈಗ ಪೆಟ್ರೋಲ್ ಬೆಲೆ ಶತಕ ದಾಟಿದೆ. ಬಿಜೆಪಿ ನಾಯಕರೆಲ್ಲ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು.

‘ಪ್ರತಿಭಟನೆ ನಡೆಸಿದರೆ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸುತ್ತಾರೆ. ಚುನಾವಣೆ ಇದ್ದರೆ ಲಕ್ಷಾಂತರ ಜನರನ್ನು ಸೇರಿಸುವ ಬಿಜೆಪಿಯವರು ಉಳಿದ ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನ್ಯಾಯಯುತ ಹಕ್ಕಿನ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಾರೆ’ ಎಂದು ಆರೋಪಿಸಿದರು.

‘ಹಳ್ಳಿ ಜನರ ಮನ ಗೆಲ್ಲುವವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆ. ಮುಖಂಡರ ಬೆನ್ನು ಸುತ್ತುವವರಿಗೆ ಮಣೆ ಹಾಕುವುದಿಲ್ಲ. ಅಂತಹವರ ರಾಜಕೀಯ ಜೀವನ ಖತಂ ಆದಂತೆ’ ಎಂದು ಎಚ್ಚರಿಸಿದರು.

ಶಿರಸಿಗೆ ಬರುವ ಮುನ್ನ ಹೊನ್ನಾವರ ಕಾಸರಕೋಡ ಬಂದರು ಪ್ರದೇಶಕ್ಕೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ ಮೀನುಗಾರರೊಂದಿಗೆ ಚರ್ಚಿಸಿದರು. ‘ಉದ್ದೇಶಿತ ಬಂದರು ಯೋಜನೆ ಕೈಬಿಟ್ಟು ಬೇರೆಡೆಗೆ ಸೂಕ್ತ ಸ್ಥಳ ಗುರುತಿಸಿ ಸ್ಥಳಾಂತರಿಸಬೇಕು. ಮೀನುಗಾರರ ಸಮಸ್ಯೆಯನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುತ್ತೇನೆ’ ಎಂದರು.

‘ಬೆಲೆ ಏರಿಕೆಯನ್ನು ಮೋದಿಯ ಅಂಧ ಭಕ್ತರು ಸಮರ್ಥಿಸಿಕೊಳ್ಳುತ್ತಾರೆ. ಬಿಜೆಪಿ ಸರ್ಕಾರದ ವೈಫಲ್ಯವನ್ನು ಕಾಂಗ್ರೆಸ್ ತಲೆಗೆ ಕಟ್ಟುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಮುಖಂಡ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯದರ್ಶಿ ವಿ.ಎಸ್.ಆರಾಧ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT