ಶೆಟ್ಟರ ಅಂಗಡಿ ಗರಿಗರಿ ಗಿರ್ಮಿಟ್

ಮಂಗಳವಾರ, ಏಪ್ರಿಲ್ 23, 2019
25 °C
ಯಲ್ಲಾಪುರದಲ್ಲಿ 30 ವರ್ಷಗಳಿಂದ ವಿಭಿನ್ನ ಸ್ವಾದ ನೀಡುತ್ತಿರುವ ಹೆಗ್ಗಳಿಕೆ

ಶೆಟ್ಟರ ಅಂಗಡಿ ಗರಿಗರಿ ಗಿರ್ಮಿಟ್

Published:
Updated:
Prajavani

ಯಲ್ಲಾಪುರ: ಮಂಡಕ್ಕಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೂ ಮಂಡಕ್ಕಿ ಇಷ್ಟವೇ. ಕಾಳುಗಳನ್ನು ಬಾಯಲ್ಲಿ ಹಾಕುತ್ತಾ ಕುಳಿತರೆ ಸಮಯ ಕಳೆದದ್ದೇ ಗೊತ್ತಾಗದು. ಇನ್ನು ಗರಿಗರಿಯಾದ ಗಿರ್ಮಿಟ್ ಸಿಕ್ಕರೆ ಇನ್ನೆಷ್ಟು ಖುಷಿಯಾಗಲಿಕ್ಕಿಲ್ಲ!

30 ವರ್ಷಗಳಿಂದ ಯಲ್ಲಾಪುರದ ಜನರಿಗೆ ಗಿರ್ಮಿಟ್ ರುಚಿ ಹಚ್ಚಿದವರು ನಾಗಪ್ಪ ಶೆಟ್ಟಿ ಹಾಗೂ ಸುಭಾಸ್ ಶೆಟ್ಟಿ. ‘ಶೆಟ್ಟರ ಅಂಗಡಿ ಗಿರ್ಮಿಟ್’ ಎಂದೇ ಪಟ್ಟಣದಲ್ಲಿ ಪ್ರಸಿದ್ಧವಾಗಿದೆ.

ಮೂರು ದಶಕಗಳ ಹಿಂದೆ ನಾಗಪ್ಪ ಶೆಟ್ರು ಪಟ್ಟಣದ ಮಾದರಿ ಶಾಲೆಯ ಪಕ್ಕದಲ್ಲಿ ಗೂಡಂಗಡಿ ಒಂದರಲ್ಲಿ ಚಹಾದ ಚಿಕ್ಕ ಅಂಗಡಿ ಪ್ರಾರಂಭಿಸಿದ್ದರು. ಚಹಾ, ಬನ್ಸ್, ಅವಲಕ್ಕಿ, ಚಕ್ಕುಲಿ, ಶಂಕರ ಪೋಳೆ, ಖಾರಾ, ಮಂಡಕ್ಕಿ ಹೀಗೆ ಕೆಲವೇ ತಿಂಡಿಗಳನ್ನು ಸಿದ್ಧಪಡಿಸಿ ವ್ಯಾಪಾರ ಮಾಡುತ್ತಿದ್ದರು.

ಕೈ ಹಿಡಿದ ಗಿರ್ಮಿಟ್ ವ್ಯಾಪಾರ: ಚಹಾ, ತಿಂಡಿ, ವ್ಯಾಪಾರ ಸಾಕಷ್ಟಿದ್ದರೂ ಹೆಚ್ಚು ಬೇಡಿಕೆ ಕುದುರಿದ್ದು ಗಿರ್ಮಿಟ್ ಮಂಡಕ್ಕಿಗೆ. ಹೀಗಾಗಿ ಶೆಟ್ರ ಅಂಗಡಿ ಗಿರ್ಮಿಟ್ ಹೆಚ್ಚೆಚ್ಚು ಪ್ರಚಾರಕ್ಕೆ ಬಂತು. ಮೊದಲು ಬಸ್ ನಿಲ್ದಾಣದ ಸಮೀಪ ಗೂಡಂಗಡಿಯಲ್ಲಿ ಮಾರಾಟ ಮಾಡುತ್ತಿದ್ದರು. ಗೂಡಂಗಡಿಗಳನ್ನು ತೆರವುಗೊಳಿಸಿದ ನಂತರ ಬೆಲ್ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಸ್ಥಳಾಂತರವಾದರು. ಮೊದಲು ನಾಗಪ್ಪ ಶೆಟ್ಟರು ಉದ್ಯೋಗ ಆರಂಭಿಸಿದ್ದರೂ ಈಗ ಅವರಿಗೆ ಮಗ ಸುಭಾಸ ಜತೆಯಾಗಿದ್ದಾರೆ.

ವಿಭಿನ್ನ ಸ್ವಾದ: ಸಾಮಾನ್ಯವಾಗಿ ಗಿರ್ಮಿಟ್ ಎಂದರೆ ಬಯಲುಸೀಮೆಯಲ್ಲಿ ತಯಾರಿಸುವ ರುಚಿ ನೆನಪಾಗುತ್ತದೆ. ಎಣ್ಣೆಯಲ್ಲಿ ಈರುಳ್ಳಿ ಹಾಕಿ ಸಿದ್ಧ ಪಡಿಸಿದ ಮಸಾಲೆ, ಪುಟಾಣಿ ಹಿಟ್ಟು ಹಾಕಿ ತಯಾರಿಸುವ ಪ್ರಕ್ರಿಯೆ ಕಣ್ಣಮುಂದೆ ಬರುತ್ತದೆ. ಆದರೆ, ಇವರು ಹಸಿಕೊಬ್ಬರಿ, ಎಣ್ಣೆ, ವಿಶೇಷವಾಗಿ ತಯಾರಿಸಿದ ಮಸಾಲಪುಡಿ, ಲಿಂಬೇರಸ, ಹಸಿ ಈರುಳ್ಳಿ, ಟೊಮೆಟೋ ಹಾಕಿ ಸಿದ್ಧಪಡಿಸುತ್ತಾರೆ. ಇದರ ಜೊತೆಗೆ ಅವರು ನೀಡುವ, ಉಪ್ಪಿನಲ್ಲಿ ಬೇಯಿಸಿದ ಮೆಣಸಿನಕಾಯಿ ಗಿರ್ಮಿಟ್ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

‘ವಿಶಿಷ್ಟ ಸ್ವಾದ, ಶುದ್ಧ ಪರಿಕರ, ಸ್ವಚ್ಛ ಪರಿಸರ ಇರುವ ಕಾರಣ ಗ್ರಾಹಕರು ನಮ್ಮ ಉದ್ಯೋಗಕ್ಕೆ ಬೆಂಬಲ ನೀಡುತ್ತಿದ್ದಾರೆ’ ಎನ್ನುತ್ತಾರೆ ಅಂಗಡಿ ಮಾಲೀಕ ಸುಭಾಸ ಶೆಟ್ಟಿ.

‘ಬೇರೆ ಬೇರೆ ಊರುಗಳಲ್ಲಿ ಗಿರ್ಮಿಟ್ ತಿಂದಿದ್ದೇವೆ. ಆದರೆ, ಶೆಟ್ಟರ ಅಂಗಡಿ ಗಿರ್ಮಿಟ್‌ನ ಸ್ವಾದವೇ ವಿಭಿನ್ನವಾಗಿದೆ. ಒಮ್ಮೆ ತಿಂದರೆ ಮತ್ತೆ ತಿನ್ನಬೇಕು ಎನಿಸುತ್ತದೆ’ ಎನ್ನುತ್ತಾರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್ ನಾಯಕ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !