ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ನಕಲಿ ಗೊಬ್ಬರ ಮಾರಾಟದ ಮೇಲೆ ನಿಗಾ

ತಾ.ಪಂ. ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ
Last Updated 19 ಜನವರಿ 2022, 16:50 IST
ಅಕ್ಷರ ಗಾತ್ರ

ಶಿರಸಿ: ಆಕರ್ಷಕ ಕೊಡುಗೆಯ ಆಮಿಷವೊಡ್ಡಿ ರೈತರಿಗೆ ಗುಣಮಟ್ಟ ರಹಿತ ಗೊಬ್ಬರ ಮಾರಾಟ ನಡೆಸುವ ಜಾಲದ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿಯೂ ಆಗಿರುವ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಾಸಿಕ ಪ್ರಗತಿ ಪರಿಶಿಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಮಣ್ಣು ಮಿಶ್ರಣ ಮಾಡಿರುವ ಗೊಬ್ಬರ ಮಾರಾಟ ನಡೆಸಿದ ಬಗ್ಗೆ ದೂರುಗಳಿದ್ದವು. ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಪರವಾನಿಗೆ ಹೊಂದಿರುವ ಅಧಿಕೃತ ಮಾರಾಟಗಾರರಿಂದ ಗೊಬ್ಬರ ಖರೀದಿಸಲು ಸೂಚಿಸಲಾಗುತ್ತಿದೆ’ ಎಂದರು.

‘ಭತ್ತ ಖರೀದಿ ಕೇಂದ್ರಕ್ಕೆ ಬನವಾಸಿಯ ಎರಡು ಮಿಲ್ ಗುರುತಿಸಲಾಗಿದ್ದು, ಭತ್ತ ಬೆಳೆಗಾರರ ನೊಂದಣಿ ಪ್ರಕ್ರಿಯೆ ನಡೆಯುತ್ತಿದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ 12 ಸಾವಿರ ರೈತರ ಭೂಮಿ ದೃಢೀಕರಣ ಮಾಡಲಾಗುತ್ತಿದೆ’ ಎಂದರು.

‘ಕೋವಿಡ್ ನಿಯಮಾವಳಿ ಪಾಲಿಸಿ ತರಗತಿ ನಡೆಸಲಾಗುತ್ತಿದೆ. ಶೇ.25 ಪುಸ್ತಕ ಕೊರತೆ ಇದೆ. ಬುಕ್ ಬ್ಯಾಂಕ್ ಮೂಲಕ ಈ ಕೊರತೆ ನೀಗಿಸಲಾಗಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

‘ಅಂಗನವಾಡಿ ಮಕ್ಕಳಿಗೆ ರೋಗನಿರೋಧಕ ಶಕ್ತಿ ವೃದ್ಧಿಸುವ ಬೂಸ್ಟರ್ ವಿತರಿಸಲಾಗಿದೆ. ಆಧಾರ್ ಕಾರ್ಡ್ ಮಾಹಿತಿ ಪಡೆದು ಸಾರ್ವಜನಿಕರಿಗೂ ಇವುಗಳನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದು ಆಯುಷ್ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ತಿಳಿಸಿದರು.

‘ನರೇಗಾ ಅಡಿ 26 ಸಾವಿರ ಮಾನವ ದಿನ ನಿಗದಿಯಾಗಿದೆ. ಈ ಪೈಕಿ 22 ಸಾವಿರ ಮಾನವದಿನ ಪೂರೈಸಲಾಗಿದೆ. ಯಾಂತ್ರೀಕರಣ ಯೋಜನೆಗೆ ₹54 ಲಕ್ಷ ಅನುದಾನ ಬೇಡಿಕೆ ಇಡಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾಹಿತಿ ನೀಡಿದರು.

‘ಶಿರಸಿ ತಾಲ್ಲೂಕಿನಲ್ಲಿ ಪ್ರತಿನಿತ್ಯ ಸರಾಸರಿ 650ರಷ್ಟು ಗಂಟಲುದ್ರವ ತಪಾಸಣೆ ನಡೆಸಲಾಗುತ್ತಿದೆ. ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಕಡಿಮೆ ಇದೆ. 15 ರಿಂದ 18 ವರ್ಷದವರೆಗಿನ 7575 ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಮುಗಿದಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಇಓ ದೇವರಾಜ ಹೊತ್ತಲಕೊಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT