ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶಗಳ ಆಗರ ‘ಕಾಸ್ಮೆಟಿಕ್‌ ಟೆಕ್ನಾಲಜಿ’

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಪಿಯುಸಿ ನಂತರ ಮುಂದೇನು ಎಂದು ಯೋಚಿಸಿದರೆ ವಿಜ್ಞಾನ ವಿಷಯ ಆಯ್ದುಕೊಂಡ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಬಹುತೇಕರ ಮುಂದೆ ಇರುವುದು ಮೆಡಿಕಲ್ ಮತ್ತು ಎಂಜಿನಿಯರಿಂಗ್. ಕೆಲವರಷ್ಟೇ ಪದವಿ, ಪಿಎಚ್‌.ಡಿ, ಸಂಶೋಧನೆಯ ಕಡೆಗೆ ಒಲವು ಇಟ್ಟುಕೊಂಡಿರುತ್ತಾರೆ. ಆದರೆ ಈಗ ವಿಜ್ಞಾನ ವಿಷಯದಲ್ಲಿ ಪಿಯುಸಿ ಮಾಡಿದವರಿಗೆ ಮುಂದೆ ಹತ್ತಾರು ಆಸಕ್ತಿಕರ ಕೋರ್ಸ್‌ಗಳಿವೆ. ಆದರೆ ಆ ಬಗ್ಗೆ ಅರಿವು ಇರುವುದಿಲ್ಲ.

ಅಂತಹ ಕೋರ್ಸ್‌ಗಳಲ್ಲಿ ಕಾಸ್ಮೆಟಿಕ್ ಟೆಕ್ನಾಲಜಿ ಕೂಡಾ ಒಂದು. ಪಿಯುಸಿಯಲ್ಲಿ ಜೀವಶಾಸ್ತ್ರ ವಿಷಯ ಅಧ್ಯಯನ ಮಾಡಿದವರಿಗೆ ಈ ಕೋರ್ಸ್‌ ಮಾಡುವ ಅವಕಾಶವಿದೆ. ಕಾಸ್ಮೆಟಿಕ್‌ ಟೆಕ್ನಾಲಜಿ ಕೋರ್ಸ್‌ಗಳು ಭಾರತದಲ್ಲಿ ವಿರಳ. ನಾಗಪುರದ ಎರಡು ಕಾಲೇಜುಗಳಲ್ಲಿ ಈ ಕೋರ್ಸ್‌ ಇದೆ. ಅಲ್ಲಿ 1982ರಿಂದ ಈ ಕೋರ್ಸ್ ಆರಂಭವಾಗಿದ್ದರೂ ಬಹುತೇಕರಿಗೆ ಗೊತ್ತಿಲ್ಲ.

ಮಹಾರಾಷ್ಟ್ರ ಮತ್ತು ಪಕ್ಕದ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ನಾಗಪುರದ ಯುನಿವರ್ಸಿಟಿಗೆ ಒಳಪಡುವ ‘ಲೇಡಿ ಅಮರಾವತಿ ದಗ’ ಕಾಲೇಜಿನಲ್ಲಿಯೂ ಈ ಕೋರ್ಸ್‌ ಇದೆ. ಸೆಮಿಸ್ಟರ್ ಪದ್ಧತಿಯಲ್ಲಿ ಈ ಕೋರ್ಸ್‌ ಇದೆ. ಮುಂದೆ ಎಂಬಿಎ, ಪಿಎಚ್.ಡಿಗೂ ಅವಕಾಶವಿದೆ.

ಅಲ್ಲಿ ಕೋರ್ಸ್ ಮಾಡಿರುವ ದಕ್ಷಿಣ ಭಾರತೀಯರು ಬೆರಳೆಣಿಕೆಯಷ್ಟೂ ಇಲ್ಲ. ಸದ್ಯ ಬೆಂಗಳೂರಿನ ಹೆಬ್ಬಾಳದ ಹರ್ಷಿತಾ ಚಿನಿವಾಲರ್‌ ನಾಗಪುರದ ‘ಶ್ರೀಮತಿ ರತ್ನಿದೇವಿ ಪುರೋಹಿತ್‌’ ಮಹಿಳಾ ಕಾಲೇಜಿನಲ್ಲಿ ನಾಲ್ಕು ವರ್ಷದ ಬಿ.ಟೆಕ್‌ ಪದವಿ ಪಡೆದಿದ್ದಾರೆ. ಕಾಸ್ಮೆಟಿಕ್‌ ಟೆಕ್ನಾಲಜಿ ಕೋರ್ಸ್‌ ಮತ್ತು ಅವಕಾಶಗಳ ಬಗ್ಗೆ ಅವರು ‘ಮೆಟ್ರೊ’ ಜೊತೆ ಹಂಚಿಕೊಂಡಿದ್ದಾರೆ.

ಈ ಕೋರ್ಸ್‌ ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ಯಾರು?

ನಮ್ಮ ಸಂಬಂಧಿಯೊಬ್ಬರು ಕಾಸ್ಮೆಟಿಕ್‌ ಉದ್ಯಮ ನಡೆಸುತ್ತಿದ್ದಾರೆ. ಅವರು ಈ ಕೋರ್ಸ್‌ ಬಗ್ಗೆ ಹೇಳಿದ್ರು. ನಾನು ಜೀವಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡಿದ್ದರೂ ವೈದ್ಯಕೀಯ ಕೋರ್ಸ್‌ಗೆ ಸೇರುವ ಇಷ್ಟ ಇರಲಿಲ್ಲ. ನನ್ನ ಅಮ್ಮನೂ ಈ ಕೋರ್ಸ್‌ ಮಾಡುವ ಬಗ್ಗೆ ಪ್ರೋತ್ಸಾಹ ನೀಡಿದರು.

ನಾಗಪುರ  ಕಾಲೇಜನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ ?

ಭಾರತದಲ್ಲಿ ಸಾಕಷ್ಟು ಕಾಸ್ಮೆಟಿಕ್‌  ಕಂಪೆನಿಗಳಿದ್ದರೂ ಈ ಕೋರ್ಸ್‌ ನಡೆಸುವ ಕಾಲೇಜುಗಳೇ ಇಲ್ಲ. ನಾಗಪುರದಲ್ಲಿ ಎರಡು ಕಾಲೇಜು ಬಿಟ್ಟರೆ ಬೇರೆಲ್ಲೂ ಇಲ್ಲ. ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಡಿಪ್ಲೊಮಾ ಕೋರ್ಸ್‌ ಇದೆ. ನಾಗಪುರದ ಕಾಲೇಜಿನಲ್ಲೂ ಮಹಾರಾಷ್ಟ್ರ ಮತ್ತು ಸುತ್ತಲಿನ ರಾಜ್ಯಗಳ ವಿದ್ಯಾರ್ಥಿಗಳು ಮಾತ್ರವೇ ಇದ್ದಾರೆ. ಕರ್ನಾಟಕದಿಂದ ಸದ್ಯ ನಾನೊಬ್ಬಳೇ ಈ ಕೊರ್ಸ್‌ ಮಾಡುತ್ತಿದ್ದೇನೆ. ಈ ಹಿಂದೆಯೂ ಯಾರೂ ಮಾಡಿಲ್ಲ.

ಕಾಸ್ಮೆಟಿಕ್‌ ಟೆಕ್ನಾಲಜಿ ಕೋರ್ಸ್‌ನಲ್ಲಿ ಯಾವ ವಿಷಯಗಳ ಬಗ್ಗೆ ಕಲಿಕೆ ಇರುತ್ತದೆ?

ಕಾಸ್ಮೆಟಿಕ್ ಲಾ, ಗುಣಮಟ್ಟ ನಿಯಂತ್ರಣ, ಚರ್ಮ ಮತ್ತು ಕೂದಲಿನ ಆರೈಕೆ ಬಗ್ಗೆ ಮಾಹಿತಿ, ಸ್ವಂತ ಉದ್ದಿಮೆ ಆರಂಭಿಸುವ ಬಗ್ಗೆಯೂ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಪ್ರಾಯೋಗಿಕ ತರಗತಿಗಳು ಅತ್ಯಂತ ಉಪಯುಕ್ತವಾಗಿವೆ. ಪ್ರಾಯೋಗಿಕ ತರಗತಿಗಳು ನಮ್ಮ ಕೌಶಲವನ್ನು ಹೆಚ್ಚಿಸುತ್ತದೆ. ರಸಾಯನಿಕ ಪದಾರ್ಥಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು, ಯಾವುದು ಚರ್ಮಕ್ಕೆ ಹಾನಿಕಾರಕ ಮುಂತಾದ ಬಗ್ಗೆ ತಿಳುವಳಿಕೆ ಸಿಗುತ್ತದೆ. ಒತ್ತಡವಿಲ್ಲದೆ ಮಾಡಬಹುದಾದ ಕೋರ್ಸ್‌ ಇದು.

ಈ ಕೋರ್ಸ್‌ ಹೆಚ್ಚು ವೆಚ್ಚದಾಯಕವೇ?

ನಿಮಗೆ ಅಚ್ಚರಿಯಾಗುವಷ್ಟು ಕಡಿಮೆ ಶುಲ್ಕ ಈ ಕೋರ್ಸ್‌ಗೆ ತಗಲುತ್ತದೆ. ವರ್ಷಕ್ಕೆ ಕೇವಲ ₹10,000 ಶುಲ್ಕ. ಹಾಸ್ಟೆಲ್‌ ಮತ್ತಿತರ ಖರ್ಚು ಸ್ವಲ್ಪ ಹೆಚ್ಚೇ ಇದೆ. ಒಂದೆರಡು ಲಕ್ಷದೊಳಗೆ ಈ ಕೋರ್ಸ್‌ ಮುಗಿಸಬಹುದು.

ಪ್ರವೇಶ ಪ್ರಕ್ರಿಯೆ ಹೇಗಿದೆ?

ಬೇರೆಲ್ಲ ಉನ್ನತ ಶಿಕ್ಷಣ ಕೋರ್ಸ್‌ಗಳಂತೆ ಈ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಇರುವುದಿಲ್ಲ. ನೇರವಾಗಿ ಪ್ರವೇಶ ಪಡೆಯಬಹುದು. ಜೀವಶಾಸ್ತ್ರ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು.

ಎಷ್ಟು ವರ್ಷದ ಕೋರ್ಸ್‌?

ನಾಲ್ಕು ವರ್ಷದ ಬಿ.ಟೆಕ್‌ ಕೋರ್ಸ್‌. ಈಗ ಸೆಮಿಸ್ಟರ್‌ ಪದ್ಧತಿಯಿದೆ. 30 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.

ಉದ್ಯೋಗಾವಕಾಶದ ಬಗ್ಗೆ ಮಾಹಿತಿ ಇದೆಯಾ?

ಈ ಕೋರ್ಸ್ ಮಾಡಿದವರಿಗೆ ಯಾವುದೇ ಪ್ರಸಾಧನ ತಯಾರಿಕಾ ಕಂಪನಿಗಳಲ್ಲಿ ಸುಲಭವಾಗಿ ಉದ್ಯೋಗ ಸಿಗುತ್ತದೆ. ವಿಶ್ವದ ಖ್ಯಾತ ಬ್ರ್ಯಾಂಡ್ ಕಂಪೆನಿಗಳಲ್ಲಿ ಕೆಲಸ ಪಡೆಯಬಹುದು. ಈ ಕೋರ್ಸ್ ಮಾಡುವವರ ಸಂಖ್ಯೆ ಭಾರತದಲ್ಲಿ ಕಡಿಮೆ ಇರುವ ಕಾರಣ ಇಲ್ಲಿ ಸ್ಪರ್ಧೆ ಕಡಿಮೆ ಇದೆ. ಪ್ರಸಾಧನ ಸಾಮಗ್ರಿ ತಯಾರಿಕಾ ಕ್ಷೇತ್ರದಲ್ಲಿ ಸ್ವಂತ ಉದ್ದಿಮೆ ಶುರು ಮಾಡುವ ಆಸಕ್ತಿ ಇರುವವರಿಗೆ ಇದು ಹೇಳಿ ಮಾಡಿಸಿದ ಕೋರ್ಸ್.

ಸ್ವಂತ ಉದ್ದಿಮೆ ಆರಂಭಿಸುವ ಯೋಜನೆಯಿದೆಯೇ?

ಈಗಾಗಲೇ ನನ್ನ ತಾಯಿ ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಸೋಪು, ಶ್ಯಾಂಪು ಮುಂತಾದ ವಸ್ತುಗಳನ್ನು ತಯಾರಿಸುವ ಘಟಕ ಆರಂಭಿಸಿದ್ದಾರೆ. ನಾನು ಕರೆಸ್ಪಾಂಡೆನ್ಸ್‌ನಲ್ಲಿ ಎಂಬಿಎ ಮಾಡಬೇಕು ಎಂದುಕೊಂಡಿದ್ದೇನೆ. ನಂತರ ತಾಯಿಯ ಜೊತೆ ಸೇರಿ ನಮ್ಮದೇ ಬ್ರ್ಯಾಂಡ್‌ ಆರಂಭಿಸುವ ಉದ್ದೇಶವಿದೆ. ಸದ್ಯ ಅಮ್ಮನಿಗೆ ನೆರವಾಗುತ್ತ ಓದುವೆ.

ಎಂ.ಟೆಕ್‌ ಮಾಡುವ ಆಸೆ ಇದೆಯಾದರೂ ಅದು ತುಂಬಾನೇ ದುಬಾರಿ. ವಿದೇಶದಲ್ಲಿ ಮಾತ್ರ ಈ ಕೋರ್ಸ್‌ ಲಭ್ಯ ಇದೆ. ಒಂದಷ್ಟು ವರ್ಷ ದುಡಿದು, ಮತ್ತೆ ಓದು ಮುಂದುವರಿಸುವೆ. ಅಲ್ಲಿಯವರೆಗೂ ಒಂದಷ್ಟು ಅನುಭವವೂ ಜೊತೆಗಿರುತ್ತದಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT