ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರುಪ್ರಜ್ಞೆ ಬೆಳೆಸುವ ಸರಗುಪ್ಪ ಶಾಲೆ: ಓದಿನೊಂದಿಗೆ ಗಿಡಗಳ ಆರೈಕೆಗೆ ಒತ್ತು

ಓದಿನೊಂದಿಗೆ ಗಿಡಗಳ ಆರೈಕೆಗೆ ಒತ್ತು ನೀಡುವ ವಿದ್ಯಾರ್ಥಿಗಳು
Last Updated 17 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಶಿರಸಿ: ‘ಶಾಲೆ ಆವರಣದಲ್ಲಿ ನನ್ನ ಹೆಸರಿನಲ್ಲಿ ಗಿಡ ನೆಟ್ಟಿದ್ದೇನೆ. ಅದಕ್ಕೆ ನಿಯಮಿತವಾಗಿ ನೀರು, ಗೊಬ್ಬರ ನೀಡಿ ಆರೈಕೆ ಮಾಡುವಾಗ ನನಗೆ ಖುಷಿ ಸಿಗುತ್ತದೆ’...

ತಾಲ್ಲೂಕಿನ ಸರಗುಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೆ ತರಗತಿಯ ವಿದ್ಯಾರ್ಥಿ ಹರೀಶ ಗೌಡ ಶಾಲೆಯ ವಾತಾವರಣ ತನ್ನಲ್ಲಿ ಹಸಿರುಪ್ರಜ್ಞೆ ಬೆಳೆಸಿದೆ ಎಂಬುದನ್ನು ವಿವರಿಸಿದ ಪರಿ ಇದು.

‘ಶಾಲೆಯಲ್ಲಿ ಪ್ರತಿದಿನ ಕನಿಷ್ಠ ಅರ್ಧ ಗಂಟೆಯನ್ನು ಗಿಡಗಳ ಆರೈಕೆಗೆ ಮೀಸಲಿಡುತ್ತೇವೆ. ಬೆಳಿಗ್ಗೆ ಮತ್ತು ಸಂಜೆ ಗಿಡಕ್ಕೆ ನೀರು ಹಾಯಿಸುತ್ತೇವೆ. ವಾರಕ್ಕೊಮ್ಮೆ ಗೊಬ್ಬರವನ್ನೂ ಹಾಕುತ್ತೇವೆ. ಅವುಗಳ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ಶಿಕ್ಷಕರು ಹೇಳಿಕೊಟ್ಟಿದ್ದಾರೆ. ಹೀಗಾಗಿಯೇ ಗಿಡಗಳು ಚೆನ್ನಾಗಿ ಬೆಳೆದಿವೆ’ ಎಂದು ಶಾಲೆಯ ಅಂಗಳದಲ್ಲಿ ಆಳೆತ್ತರಕ್ಕೆ ಬೆಳೆದ ತರಕಾರಿ ಗಿಡಗಳು, ಸೊಪ್ಪಿನ ಸಸಿಗಳತ್ತ ಕೈತೋರಿಸಿದ.

‘ಶಾಲೆಯ ಅಂಗಳದಲ್ಲಿ ಹರಿವೆ ಸೊಪ್ಪು, ಬಸಳೆ ಸೊಪ್ಪು, ಮೂಲಂಗಿ, ಟೊಮೆಟೊ, ನವಿಲಕೋಸು, ಮೆಣಿಸಿನಗಿಡ ಮುಂತಾದ ತರಕಾರಿ ಬೆಳೆಸಿದ್ದೇವೆ. ಕೆಲವು ಹಣ್ಣಿನ ಗಿಡವನ್ನೂ ನೆಡಲಾಗಿದೆ’ ಎಂದು ಇನ್ನೋರ್ವ ವಿದ್ಯಾರ್ಥಿನಿ ಕಾವ್ಯ ಗೌಡ ಹೇಳಿದರು.

24 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದಾರೆ. ಅವರ ಮಾರ್ಗದರ್ಶನ, ಮಕ್ಕಳ ಆಸಕ್ತಿಯಿಂದ ಹತ್ತಾರು ಬಗೆಯ ತರಕಾರಿ ಬೆಳೆಯಲಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿಯೂ ಈ ಕೆಲಸಕ್ಕೆ ಕೈಜೋಡಿಸಿದೆ.

‘ತರಗತಿ ಬಿಡುವಿನ ವೇಳೆ ಮಕ್ಕಳನ್ನು ಕೈತೋಟದಲ್ಲಿ ಚಟುವಟಿಕೆಗೆ ಕರೆದೊಯ್ಯಲಾಗುತ್ತದೆ. ಕಳೆದ ಐದಾರು ವರ್ಷದಿಂದ ತೋಟವನ್ನು ಅಚ್ಚುಕಟ್ಟಾಗಿ ಬೆಳೆಸಲಾಗುತ್ತಿದೆ. ಇಲ್ಲಿ ಬೆಳೆದ ತರಕಾರಿ, ಸೊಪ್ಪನ್ನು ಬಿಸಿಯೂಟಕ್ಕೆ ಬಳಸಲಾಗುತ್ತಿದೆ’ ಎಂದು ವಿವರಿಸುತ್ತಾರೆ ಮುಖ್ಯ ಶಿಕ್ಷಕಿ ನಯನಾ ಕುಮಾರಿ.

‘ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೇ ಸ್ವಂತ ಶ್ರಮದಿಂದ ತೋಟಕ್ಕೆ ಬೇಲಿ ಹಾಕಿಕೊಟ್ಟಿದ್ದಾರೆ. ಕೆಲವು ಪಾಲಕರು ತರಕಾರಿ, ಹಣ್ಣುಗಳ ಗಿಡಗಳನ್ನು ನೀಡುತ್ತಿದ್ದಾರೆ. ಸಹ ಶಿಕ್ಷಕ ಜನಾರ್ಧನ ಮೊಗೇರ ಕೂಡ ತೋಟ ನಿರ್ವಹಣೆಗೆ ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ವಿದ್ಯಾರ್ಥಿ ಹೆಸರಲ್ಲಿ ಗಿಡ

ಸರಗುಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದೇವನಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಹಣ್ಣಿನ ಗಿಡಗಳನ್ನು ಒದಗಿಸಲಾಗಿದೆ. ಪ್ರತಿ ವಿದ್ಯಾರ್ಥಿ ಹೆಸರಲ್ಲಿ ತಲಾ ಒಂದೊಂದು ಗಿಡ ನೆಟ್ಟು ಅದರ ನಿರ್ವಹಣೆ ಮಾಡಲು ಆಯಾ ವಿದ್ಯಾರ್ಥಿಗೆ ಸೂಚಿಸಲಾಗಿದೆ. ತಾವು ನೆಟ್ಟ ಗಿಡ ಉತ್ತಮವಾಗಿ ಬೆಳೆಸಬೇಕು ಎಂದು ಪಣತೊಟ್ಟು ಮಕ್ಕಳು ನಿತ್ಯವೂ ಗಿಡಗಳ ಕಾಳಜಿ ವಹಿಸುತ್ತಿದ್ದಾರೆ.

---------

ಕೈತೋಟದಲ್ಲಿ ಬೆಳೆಸಲಾದ ಸೊಪ್ಪು, ತರಕಾರಿ ಬಳಸಿ ವಾರದಲ್ಲಿ ಮೂರು ದಿನ ವಿದ್ಯಾರ್ಥಿಗಳಿಗೆ ಊಟಕ್ಕೆ ಪಲ್ಯೆ ಮಾಡಿ ಬಡಿಸಲಾಗುತ್ತಿದೆ. ಇದರಿಂದ ಅವರಿಗೆ ಪೌಷ್ಟಿಕಾಂಶ ಸಿಗುತ್ತಿದೆ.

-ನಯನಾ ಕುಮಾರಿ

ಮುಖ್ಯ ಶಿಕ್ಷಕಿ

-------------

ಕೈತೋಟ ಆರೈಕೆ ಮೂಲಕ ಮಕ್ಕಳು ಗಿಡಗಳ ಆರೈಕೆಯ ಪ್ರಾಯೋಗಿಕ ಅರಿವು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಒಳ್ಳೆಯ ಚಟುವಟಿಕೆಗೆ ಸಹಕಾರ ನೀಡುತ್ತಿದ್ದೇವೆ.

ಅಣ್ಣಪ್ಪ ಗೌಡ

-ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT