ಸೋಮವಾರ, ಏಪ್ರಿಲ್ 12, 2021
22 °C
ಬಿ.ಜೆ.ಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಟೀಕೆ

ಪರಿಶಿಷ್ಟ ಜಾತಿಯವರನ್ನು ತುಳಿದಿದ್ದೇ ಸಿದ್ದರಾಮಯ್ಯ: ಚಲವಾದಿ ನಾರಾಯಣ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ ಪರಿಶಿಷ್ಟ ಜಾತಿಯವನ್ನು ಸಂಪೂರ್ಣವಾಗಿ ತುಳಿದು ಹಾಕಿರುವುದೇ ಸಿದ್ದರಾಮಯ್ಯ ಅವರು. ಜನತಾದಳದಲ್ಲಿ ಇದ್ದಾಗ ಹಾಗೂ ಕಾಂಗ್ರೆಸ್ ಸೇರಿದ ನಂತರವೂ ಅವರು ಅದನ್ನೇ ಮಾಡುತ್ತಿದ್ದಾರೆ. ಕಾಂಗ್ರೆಸ್ಸೇ ನಿಜವಾದ ಪರಿಶಿಷ್ಟ ಜಾತಿ ವಿರೋಧಿ, ಅಂಬೇಡ್ಕರ್ ವಿರೋಧಿ’ ಎಂದು ಬಿ.ಜೆ.ಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತಿ ಗಣತಿ ವರದಿಯನ್ನು ಅಂದು ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾರ್ವಜನಿಕರಿಗೆ ಬಿಡುಗಡೆ ಮಾಡಲಿಲ್ಲ. ಅದು ಅವರ ತಪ್ಪು. ಅವರಿಗೆ ಅವಕಾಶ ಇದ್ದರೂ ಬಹಿರಂಗ ಪಡಿಸದೇ ಈಗ ಬಿ.ಜೆ.ಪಿ ಸರ್ಕಾರದ ವಿರುದ್ಧ ಆರೋಪಿಸುತ್ತಿರುವುರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮೊದಲಿಂದಲೂ ದಲಿತರು ಬಿ.ಜೆ.ಪಿ.ಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತಿತ್ತು. ಅಲ್ಲದೇ ಬಿ.ಜೆ.ಪಿ.ಯು ದಲಿತ ವಿರೋಧಿ ಎಂಬ ಹಣೆಪಟ್ಟಿಯನ್ನು ಬೇರೆಯವರು ಕಟ್ಟಿದ್ದರು. ಆದರೆ, ನಿಜವಾದ ಪರಿಸ್ಥಿತಿ ಆ ರೀತಿಯಿಲ್ಲ. ಕಾಂಗ್ರೆಸ್‌ನವರು ದಲಿತ ಮುಖ್ಯಮಂತ್ರಿ ವಿಚಾರವನ್ನು ಹಿಮ್ಮೆಟ್ಟಿದರು. ಸಮಾವೇಶವೊಂದರಲ್ಲಿ ಡಾ.ಜಿ.ಪರಮೇಶ್ವರ ಕಣ್ಣೀರು ಹಾಕಿದ್ದಕ್ಕೆ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಕಾಂಗ್ರೆಸ್‌ನವರು ಕೇವಲ ಬಾಯಿ ಮಾತಲ್ಲಿ ಸಾಮಾಜಿಕ ನ್ಯಾಯ ಅಂತಾರೆ. ಆದರೆ, ನಾವು ಮಾಡಿ ತೋರಿಸಿದ್ದೇವೆ. ಯಾವುದೇ ಬೇಡಿಕೆ ಇಲ್ಲದಿದ್ದರೂ ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ಇದಕ್ಕೆ ಉದಾಹರಣೆ’ ಎಂದು ಹೇಳಿದರು.

ಏ.14ರಂದು ಅಂಬೇಡ್ಕರ್ ಜಯಂತಿ ಅಂಗವಾಗಿ ರಾಜ್ಯ ಬಿ.ಜೆ.ಪಿ.ಯ ಎಲ್ಲ 310 ಮಂಡಲಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿದೆ. ಅಂದು ಬೆಳಿಗ್ಗೆ 10ಕ್ಕೆ ಅಂಬೇಡ್ಕರ್ ಪ್ರತಿಮೆಗೆ ಎರಡು ಕಿಲೋಮೀಟರ್ ದೂರದಿಂದ ಪಾದಯಾತ್ರೆಯಲ್ಲಿ ಬಂದು ಗೌರವ ಸಲ್ಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಸತ್ಯಾಂಶ ಹೊರಬರಲಿ’

‘ಸಿ.ಡಿ ವಿಚಾರದಲ್ಲಿ ರಮೇಶ ಜಾರಕಿಹೊಳಿ ಮತ್ತು ಯುವತಿ ಇಬ್ಬರೂ ದಲಿತರೇ. ಈ ಪ್ರಕರಣದ ವಿಚಾರಣೆಯು ಕಾನೂನಿನ ಅಡಿಯಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ. ವಿಶೇಷ ತನಿಖಾ ದಳದ ತನಿಖೆಗೆ ಎಲ್ಲರೂ ಸಹಕರಿಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರ ಬರಲಿ’ ಎಂದು ಚಲವಾದಿ ನಾರಾಯಣ ಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೋರ್ಚಾದ ಪ್ರಭಾರಿ ಪ್ರವೀಣ ಪವಾರ್, ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಉದಯ ಬ ಶೆಟ್ಟಿ
ರಾಜ್ಯಕಾರಿಣಿ ಸದಸ್ಯ ಸೂರ್ಯಪ್ರಕಾಶ, ಜಿಲ್ಲಾ ಪಂಚಾಯಿತಿ ಸದಸ್ಯ ಜಗದೀಶ ನಾಯಕ ಮೊಗಟಾ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು