ಬಿಸಿಯೂಟ ಸ್ಥಗಿತಗೊಳ್ಳುವ ಭೀತಿ

7
ಯಲ್ಲಾಪುರ: ಅಡುಗೆ ಅನಿಲ ಸಿಲಿಂಡರ್ ಹಣ ಪಾವತಿಯಾಗಿಲ್ಲ

ಬಿಸಿಯೂಟ ಸ್ಥಗಿತಗೊಳ್ಳುವ ಭೀತಿ

Published:
Updated:
ಯಲ್ಲಾಪುರ ಪಟ್ಟಣದಲ್ಲಿರುವ ಗ್ಯಾಸ್ ಏಜೆನ್ಸಿ

ಯಲ್ಲಾಪುರ: ತಾಲ್ಲೂಕಿನ ಶಾಲೆಗಳಿಗೆ ಬಿಸಿಯೂಟ ಕಾರ್ಯಕ್ರಮಕ್ಕೆ ಅಡುಗೆ ಅನಿಲ ಸಿಲಿಂಡರ್ ಪೂರೈಸುತ್ತಿರುವ ಏಜೆನ್ಸಿಗೆ ಕೆಲ ತಿಂಗಳು ಹಣ ನೀಡದೇ ಇರುವುದರಿಂದ ಸಿಲಿಂಡರ್ ನೀಡುವುದನ್ನು ಸ್ಥಗಿತಗೊಳಿಸುವ ಸ್ಥಿತಿ ಬಂದೊಗಿದೆ.

ತಾಲ್ಲೂಕಿನ 205 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪ್ರತಿ ತಿಂಗಳು ಸರಾಸರಿ 250 ಸಿಲಿಂಡರ್‌ಗಳನ್ನು ಏಜನ್ಸಿ ಪಡೆದಿರುವ ಶಮಾ ಭಾರತ್ ಗ್ಯಾಸ್ ಶಾಲೆಗಳಿಗೆ ಪೂರೈಕೆ ಮಾಡುತ್ತಿದೆ. 2017ರಿಂದ ಪ್ರತಿ ತಿಂಗಳು ₹1.75 ಲಕ್ಷದಿಂದ 2 ಲಕ್ಷದವರೆಗೆ ಹಣ ಪಾವತಿ ಮಾಡಬೇಕಿದ್ದ ಜಿಲ್ಲಾ ಪಂಚಾಯಿತಿ, ಕಳೆದ ಒಂದು ವರ್ಷದಿಂದ ಒಂದೇ ಒಂದು ರೂಪಾಯಿಯನ್ನೂ ಜಮಾ ಮಾಡಿಲ್ಲ. ಇದರಿಂದ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಶಾಲೆಗಳಿಗೆ ಸಿಲಿಂಡರ್ ನೀಡುವುದು ಕಷ್ಟವಾಗಿದೆ.

‘ಮೇನಲ್ಲಿ ಶಾಲೆಗಳಿಗೆ ರಜೆಯಾಗಿರುವುದರಿಂದ ಬಿಸಿಯೂಟ ಕಾರ್ಯಕ್ರಮ ನಡೆದಿಲ್ಲ. ಮಾರ್ಚ್, ಏಪ್ರಿಲ್ ಹಾಗೂ ಜೂನ್ ತಿಂಗಳಿನ ಹಣ ಜಮಾವಣೆಯಾಗಬೇಕಿದ್ದು, ಏಜೆನ್ಸಿಗೆ ಒಟ್ಟು ₹4 ಲಕ್ಷ ಸಂದಾಯವಾಗಬೇಕಿದೆ. ಹಣ ಪಾವತಿಯಾಗದಿದ್ದರೆ ಶಾಲೆಗಳಿಗೆ ಸಿಲಿಂಡರ್ ಪೂರೈಕೆ ಸಮಸ್ಯೆಯಾಗುತ್ತದೆ ಎನ್ನಲಾಗಿದೆ.

‘ತಾಲ್ಲೂಕಿನ ಯಾವುದೇ ಶಾಲೆಗಳಲ್ಲಿಯೂ ಬಿಸಿಯೂಟ ಬಂದ್ ಆಗಿರುವ ಮಾಹಿತಿ ದೊರೆತಿಲ್ಲ. ಗ್ಯಾಸ್ ಏಜೆನ್ಸಿ ಮಾಲೀಕರು ಮಾನವೀಯತೆ ಆಧಾರದ ಮೇಲೆ ಶಾಲೆಗಳಿಗೆ ಸಿಲಿಂಡರ್ ವಿತರಿಸುತ್ತಿದ್ದಾರೆ. ಇದೇ ರೀತಿ ಇಷ್ಟೆಲ್ಲ ಹಣ ವಿನಿಯೋಗಿಸಿ ಸಿಲಿಂಡರ್ ನೀಡುವುದು ಏಜೆನ್ಸಿಗೆ ಭಾರವಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನವಹಿಸಬೇಕಾಗಿದೆ’ ಎಂದು ಸ್ಥಳೀಯ ನಿವಾಸಿ ಧೀರಜ್ ತಿನ್ನೇಕರ ಒತ್ತಾಯಿಸಿದರು.

‘ಯಲ್ಲಾಪುರ ತಾಲ್ಲೂಕು ಪಂಚಾಯ್ತಿಯಲ್ಲಿ 2017ರಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾರಣದಿಂದ ಆಡಿಟಿಂಗ್‌ಗೆ ಬಂದವರು ಮುಂಗಡಕ್ಕೆ ತಡೆ ನೀಡಿರುವ ಕಾರಣ, ಯಲ್ಲಾಪುರ ಮತ್ತು ಜೋಯ್ಡಾ ತಾಲ್ಲೂಕಿನಲ್ಲಿ ಶಾಲೆಗಳಿಗೆ ಸಿಲಿಂಡರ್ ವಿತರಣೆ ಮಾಡುವ ಏಜೆನ್ಸಿಗಳಿಗೆ ಮುಂಗಡ ಹಣ ಹಾಗೂ ಬೇಡಿಕೆಯನ್ನು ಸ್ಥಗಿತಗೊಳಿಸಿದ್ದಾರೆ. ಉಳಿದ ತಾಲ್ಲೂಕಿನಲ್ಲಿ ಮುಂಗಡ ಹಣ ಸಂದಾಯವಾಗುತ್ತಿದೆ. ತಾಲ್ಲೂಕು ಪಂಚಾಯ್ತಿಯಲ್ಲಿ ನಡೆದ ಅವ್ಯಹಾರಕ್ಕೆ ಮತ್ತು ಅಕ್ಷರದಾಸೋಹಕ್ಕೆ ಏನು ಸಂಬಂಧ’ ಎಂದು ಧೀರಜ್ ತಿನ್ನೇಕರ ಪ್ರಶ್ನಿಸುತ್ತಿದ್ದಾರೆ.

‘ತಾಲ್ಲೂಕಿನ ಹಳ್ಳಿಯ ಶಾಲೆಗಳಿಗೆ ಮಾನವೀಯತೆ ಆಧಾರದ ಮೇಲೆ ಸಿಲಿಂಡರ್ ಒದಗಿಸುತ್ತಿದ್ದೇವೆ. ಹಣ ಪಾವತಿ ವಿಳಂಬವಾದರೆ ಮುಂದಿನ ದಿನಗಳಲ್ಲಿ ತೀರಾ ತೊಂದರೆಯಾಗುತ್ತದೆ. ಕೋಟ್ಯಂತರ ರೂಪಾಯಿ ವಿನಿಯೋಗಿಸಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದೇವೆ. ಸರ್ಕಾರದ ಹಣ ಒಂದೆರಡು ದಿನ ವಿಳಂಬವಾಗುವುದು ಸಹಜ. ತಿಂಗಳಾನುಗಟ್ಟಲೆ ವಿಳಂಬವಾದರೆ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಶಮಾ ಗ್ಯಾಸ್ ಏಜೆನ್ಸಿಯ ಮಾಲೀಕ ಅಬ್ದುಲ್ ಖಾದರ್ ಶೇಖ್.

ಶಾಲೆಗಳಿಗೆ ಮಾನವೀಯತೆ ಆಧಾರದ ಮೇಲೆ ಸಿಲಿಂಡರ್ ಒದಗಿಸುತ್ತಿದ್ದೇವೆ. ಹಣ ಪಾವತಿ ತಿಂಗಳಾನುಗಟ್ಟಲೆ ವಿಳಂಬವಾದರೆ ಸಮಸ್ಯೆ ಆಗುತ್ತದೆ
- ಅಬ್ದುಲ್ ಖಾದರ್ ಶೇಖ್, ಶಮಾ ಗ್ಯಾಸ್ ಏಜೆನ್ಸಿಯ ಮಾಲೀಕ

ಸರ್ಕಾರದಿಂದ ಬರುವ ಅನುದಾನ ವಿಳಂಬವಾಗಿ ಮಂಜೂರಾಗಿದೆ. ಬಿಲ್‍ ಅನ್ನು ಉಪಖಜಾನಗೆ ಕಳುಹಿಸಿ, ಒಪ್ಪಿಗೆ ಸಿಕ್ಕ ತಕ್ಷಣ ಗ್ಯಾಸ್ ಏಜೆನ್ಸಿಗಳಿಗೆ ಹಣ ಪಾವತಿಸಲಾಗುವುದು
- ವಿಠ್ಠಲ್ ನಾಟೇಕರ, ಯಲ್ಲಾಪುರ ತಾಲ್ಲೂಕು ಪಂಚಾಯ್ತಿ ಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !