ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಮೊತ್ತದಲ್ಲಿ ಜಾಗ ಖರೀದಿಗೆ ವಿರೋಧ

ಶಿರಸಿಯಲ್ಲಿ ಟಿಎಸ್‌ಎಸ್‌ ಸರ್ವಸಾಧಾರಣ ಸಭೆ
Last Updated 11 ಸೆಪ್ಟೆಂಬರ್ 2019, 14:13 IST
ಅಕ್ಷರ ಗಾತ್ರ

ಶಿರಸಿ: ಗ್ರೀನ್ ಗೋಲ್ಡ್ ಪ್ಯಾಕಿಂಗ್ ಮತ್ತಿತರ ಚಟುವಟಿಕೆಗಳ ವಿಸ್ತರಣೆಯ ಉದ್ದೇಶಕ್ಕಾಗಿ ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯು (ಟಿಎಸ್‌ಎಸ್‌) ತಾಲ್ಲೂಕಿನ ಕಡವೆಯಲ್ಲಿ 6.20 ಎಕರೆ ಜಾಗವನ್ನು ₹ 3.25 ಕೋಟಿ ಮೊತ್ತಕ್ಕೆ ಖರೀದಿಸಲು ಮುಂದಾಗಿದೆ.

ಬುಧವಾರ ಇಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಕೆಲವು ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಸಂಸ್ಥೆ ಅಧ್ಯಕ್ಷ ಶಾಂತಾರಾಮ ಹೆಗಡೆ ಶಿಗೇಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ವಿಷಯ ಪ್ರಸ್ತಾಪಿಸಿದಾಗ, ಸಂಸ್ಥೆಯ ಸದಸ್ಯ ಇಟಗುಳಿ ಎಂ.ಎಸ್.ಹೆಗಡೆ ತೀವ್ರ ವಿರೋಧ ವ್ಯಕ್ತಪಡಿಸಿದರು.

‘ಕೃಷಿಯೇತರ ಅಲ್ಲದ ಮಾಲ್ಕಿ ಭೂಮಿಗೆ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರ ಕೊಡುವ ಸಂಸ್ಥೆಯ ನಿರ್ಧಾರ ಸರಿಯಲ್ಲ. ಎಕರೆಯೊಂದಕ್ಕೆ ₹ 40 ಲಕ್ಷ ಮೊತ್ತ ನೀಡುವುದು ಸಂಸ್ಥೆಗೆ ಭಾರವಾಗುತ್ತದೆ. ಈ ಮೊತ್ತದಲ್ಲಿ ಬೇರೆ ಕಡೆ ಇನ್ನೂ ಹೆಚ್ಚಿನ ಜಾಗ ಖರೀದಿಸಬಹುದು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರವೀಶ ಹೆಗಡೆ, ‘ಖರೀದಿಗೆ ಉದ್ದೇಶಿಸಿದ ಜಾಗದಲ್ಲಿ ಈಗಾಗಲೇ ಮೂರು ಎಕರೆ ಕೃಷಿಯೇತರವಾಗಿ ಪರಿವರ್ತಿತವಾಗಿದೆ. ಉಳಿದದ್ದನ್ನೂ ಕೈಗಾರಿಕಾ ಬಿನ್ ಶೇತ್ಕಿಯಾಗಿ ಪರಿವರ್ತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದು ಪೂರ್ಣಗೊಂಡ ನಂತರ ಸಂಘದ ಹೆಸರಿಗೆ ನೋಂದಣಿ ಮಾಡಲಾಗುವುದು. ಖರೀದಿಸಲು ಉದ್ದೇಶಿಸಿರುವ ಭೂಮಿ ಶ್ರೀಪಾದ ಹೆಗಡೆ ಕಡವೆ ಕುಟುಂಬಕ್ಕೆ ಸೇರಿದ್ದು, ಒಂದೊಮ್ಮೆ ಹೆಚ್ಚು ಮೊತ್ತ ನೀಡಿದರೂ ಕಡವೆಯವರ ಕುಟುಂಬಕ್ಕೆ ನೀಡಿದಂತಾಗುತ್ತದೆ’ ಎಂದು ಸಮಜಾಯಿಷಿ ನೀಡಿದರು.

‘ಸಿಹಿ ಅಡಿಕೆ ಪುಡಿ ಪ್ಯಾಕಿಂಗ್ ಘಟಕದಲ್ಲಾದ ತಾಂತ್ರಿಕ ತೊಂದರೆಯಿಂದ ಸುಮಾರು 900 ಕ್ವಿಂಟಲ್ ಅಡಿಕೆ ಸಂಸ್ಥೆಯ ಲೆಕ್ಕಕ್ಕೆ ಸಿಗದೆ ಗ್ರಾಹಕರ ಕೈಸೇರಿದೆ. ಈಗ ಎಲ್ಲವನ್ನೂ ಸರಿಪಡಿಸಲಾಗುತ್ತಿದ್ದು, ಪ್ರಸಕ್ತ ವರ್ಷ ಸಿಹಿ ಅಡಿಕೆ ಪುಡಿ ಲಾಭದಾಯವಾಗಲಿದೆ. ಅಧ್ಯಕ್ಷರ ಅನಾರೋಗ್ಯ ಸಮಸ್ಯೆಯಿಂದ ಒಂದು ವರ್ಷದಿಂದ ಸಂಸ್ಥೆ ನಷ್ಟದಲ್ಲಿ ಸಾಗುತ್ತಿದೆ. ನೌಕರರು, ಸಿಬ್ಬಂದಿ ಮೇಲೆ ಆಡಳಿತಕ್ಕೆ ಹಿಡಿತ ಇಲ್ಲದಂತಾಗಿದೆ. ಹಾಗಾಗಿ ಉಪಾಧ್ಯಕ್ಷರು ಸರಿಯಾದ ನಾಯಕತ್ವ ಪ್ರದರ್ಶಿಸಬೇಕು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕನಾಗಿ ನನಗೆ ಆರ್ಥಿಕ ವ್ಯವಸ್ಥೆ ಹಾಗೂ ನೌಕರರ ಮೇಲೆ ಹಿಡಿತ ಸಾಧಿಸಲು ಅಧಿಕಾರವಿಲ್ಲ. ಹೀಗಾದರೆ ಸಂಸ್ಥೆಯನ್ನು ನೈತಿಕವಾಗಿ ಮುನ್ನಡೆಸಲು ಕಷ್ಟ. ಹಾಗಾಗಿ ಭವಿಷ್ಯದಲ್ಲಿ ಸಂಸ್ಥೆಯ ಲಾಭ- ನಷ್ಟಗಳಿಗೆ ಎಲ್ಲರೂ ಜವಾಬ್ದಾರರು’ ಎಂದು ರವೀಶ ಹೆಗಡೆ ಹೇಳಿದರು.

ಸಂಘದ ಎಲ್ಲ ಕಾರ್ಯಚಟುವಟಿಕೆಗಳು, ವಿಭಾಗಗಳ ಮಾಹಿತಿ, ಸದಸ್ಯರ ಖಾತೆ ವಿವರ, ಕೃಷಿ ಸಲಹೆಗಳು, ಅಡಿಕೆ, ಕಾಳುಮೆಣಸು, ಯಾಲಕ್ಕಿಯ ನಿತ್ಯದ ಮಾರುಕಟ್ಟೆ ವಿವರ ದೊರೆಯುವ ಟಿಎಸ್ಎಸ್ ವೆಬ್ ಸೈಟ್ ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಲು ಟಿ.ಎಸ್.ಎಸ್ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು. ಟಿ.ಎಸ್.ಎಸ್. ಸಿಬ್ಬಂದಿಯಿಂದ ಸಂಗ್ರಹಿಸಿದ ₹ 1ಲಕ್ಷ ಮೊತ್ತವನ್ನು ಸ್ವರ್ಣವಲ್ಲಿ ಮಠದ ನೆರೆ ಸಂತ್ರಸ್ತರ ನಿಧಿಗೆ ಹಸ್ತಾಂತರಿಸಲಾಯಿತು.

ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ನಿರ್ದೇಶಕರಾದ ಚಂದ್ರಶೇಖರ ಹೆಗಡೆ, ಸೀತಾರಾಮ ಹೆಗಡೆ, ಗಣಪತಿ ರಾಯ್ಸದ್, ಕೆ.ಎಂ.ಹೆಗಡೆ, ಅಣ್ಣಪ್ಪ ಗೌಡ, ಶಾರದಾ ಹೆಗಡೆ, ಶಶಾಂಕ ಹೆಗಡೆ ಇದ್ದರು. ಸಭೆಯ ನಂತರ ಸಿದ್ದಾಪುರದ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಲಾವಿದರಿಂದ ‘ಕೀಚಕ ವಧೆ’ ಆಖ್ಯಾನ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT