ಫಲಾನುಭವಿಗಳಿಗೆ ವಿತರಣೆ ಆಗದ ತಿಚಕ್ರ ವಾಹನಗಳು

7
ಭಟ್ಕಳ: ಮಳೆಯಲ್ಲಿ ನೆನೆಯುತ್ತ ನಿಂತಿವೆ

ಫಲಾನುಭವಿಗಳಿಗೆ ವಿತರಣೆ ಆಗದ ತಿಚಕ್ರ ವಾಹನಗಳು

Published:
Updated:
ಭಟ್ಕಳದ ನೂತನ ಪ್ರವಾಸಿಗೃಹದ ಆವರಣದಲ್ಲಿರುವ ತ್ರಿಚಕ್ರ ವಾಹನಗಳು

ಭಟ್ಕಳ: ಅರ್ಹ ಫಲಾನುಭವಿಗಳಿಗೆ ವಿತರಣೆ ಆಗಬೇಕಾದ ತ್ರಿಚಕ್ರ ವಾಹನಗಳು ಅನಾಥವಾಗಿ ಇಲ್ಲಿನ ನೂತನ ಪ್ರವಾಸಿಗೃಹದ ಆವರಣದಲ್ಲಿ ಎರಡು ತಿಂಗಳಿಂದ ಮಳೆಯಲ್ಲಿ ನೆನೆಯುತ್ತಿವೆ.

ಅರ್ಹ ಅಂಗವಿಕಲರು ಸ್ವಾವಲಂಬಿ ಜೀವನ ಸಾಗಿಸಲಿ ಎಂಬ ಸದುದ್ದೇಶದಿಂದ ಸರ್ಕಾದಿಂದ ಮಂಜೂರಾದ ಸುಮಾರು 24 ವಾಹನಗಳನ್ನು ಈವರೆಗೂ ವಿತರಿಸಲು ಕ್ರಮ ಕೈಗೊಳ್ಳದೇ ಇರುವ ಅಧಿಕಾರಿಗಳ ಧೋರಣೆಗೆ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸುಮಾರು ಎರಡು ತಿಂಗಳಿನಿಂದ ಬಿಸಿಲು–ಮಳೆ ಎನ್ನದೇ ನಿಂತುಕೊಂಡಿರುವ ವಾಹನಗಳನ್ನು ಇನ್ನೂ ಸ್ವಲ್ಪ ದಿನ ಹೀಗೆಯೇ ಬಿಟ್ಟರೆ ತುಕ್ಕು ಹಿಡಿಯಲಿದೆ. ಮಳೆಗೆ ವಾಹನಗಳು ಹಾಳಾಗದೇ ಇರಲಿ ಎಂದು ಟಾರ್ಪಲ್ ಮುಚ್ಚಿಡಲಾಗಿದ್ದರೂ ಕೆಲವು ವಾಹನಗಳ ಸೀಟ್‌ಗಳು ಹರಿದುಹೋಗಿವೆ.

‘ವಾಹನಗಳನ್ನು ಫಲಾನುಭವಿಗಳಿಗೆ ಹಿಂದೆಯೇ ವಿತರಿಸಬೇಕಾಗಿತ್ತು. ಆದರೆ ಚುನಾವಣೆ ಘೋಷಣೆ ಆಗಿ ನೀತಿಸಂಹಿತೆ ಅಡ್ಡಿ ಬಂದಿದ್ದರಿಂದ ವಿತರಣೆಯನ್ನು ಸ್ಥಗಿತಗೊಳಿಸಲಾಯಿತು’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ ನಾಯ್ಕ ಹೇಳಿದರು.

‘ವಾಹನಗಳನ್ನು ಕಂದಾಯ ಇಲಾಖೆಯಿಂದ ಖರೀದಿಸಲಾಗಿದ್ದು, ತಾತ್ಕಾಲಿಕ ನೋಂದಣಿ ಮಾಡಿಕೊಡಬೇಕಾಗಿದೆ. ಕಳೆದ ಕೆಡಿಪಿ ಸಭೆಯ ಸಂದರ್ಭದಲ್ಲೇ ಶಾಸಕರು ವಾಹನಗಳ ವಿತರಣೆಗೆ ಸೂಚಿಸಿದ್ದರು’ ಎಂದು ಅವರು ತಿಳಿಸಿದರು.

‘ಅಂಗವಿಕಲ ಫಲಾನುಭವಿಗಳಿಗೆ ನೀಡಬೇಕಾಗಿರುವ ಎಲ್ಲ ವಾಹನಗಳ ವಿತರಣೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದ ಶಾಸಕ ಸುನೀಲ್ ನಾಯ್ಕ, ‘ಕೂಡಲೇ ವಾಹನಗಳ ತಾತ್ಕಾಲಿಕ ನೊಂದಣಿ ಮಾಡುವಂತೆಯೂ ಹೇಳಲಾಗಿದೆ’ ಎಂದರು.

ಯಾವುದೇ ಬಡ ಅರ್ಹ ಫಲಾನುಭವಿಗಳು ಸರ್ಕಾರದ ಯೋಜನೆಯಿಂದ ವಂಚಿತರಾಗಬಾರದು. ಅದು ಅವರಿಗೆ ಶೀಘ್ರವೇ ದೊರಕಬೇಕು. ಅದಕ್ಕಾಗಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ
- ಸುನೀಲ್ ನಾಯ್ಕ , ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !