ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟಗಾರ: ಪ್ರಯೋಗಶಾಲೆಯಾದ ತೋಟ

ಕಸಿ ಕಟ್ಟಿ ಬಗೆಬಗೆಯ ಬೆಳೆ ತೆಗೆಯುವ ರವೀಂದ್ರ ಭಟ್
ವಿಶ್ವೇಶ್ವರ ಗಾಂವ್ಕರ
Published 16 ಫೆಬ್ರುವರಿ 2024, 4:54 IST
Last Updated 16 ಫೆಬ್ರುವರಿ 2024, 4:54 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ತಟಗಾರ ಗ್ರಾಮದಲ್ಲಿರುವ ಐದು ಎಕರೆ ವಿಸ್ತಾರದ ತೋಟವೊಂದು ಕೇವಲ ಕೃಷಿಭೂಮಿಯಲ್ಲ. ಬದಲಾಗಿ ಪ್ರಯೋಗಶಾಲೆಯಂತೆ ಕಾಣುತ್ತದೆ. ಒಂದೇ ಮಾವಿನ ಮರದಲ್ಲಿ ಐದು ತಳಿಯ ಕಾಯಿಗಳು, ಅಲ್ಪ ಅವಧಿಯ ಬದನೆ ಗಿಡಕ್ಕೆ ಕಸಿ ಕಟ್ಟಿ ದೀರ್ಘಾವಧಿಗೆ ಬೆಳೆಸುವ ಪದ್ಧತಿಯು ಅಚ್ಚರಿ ಮೂಡಿಸುತ್ತದೆ.

ಇಂತಹ ಪ್ರಯೋಗದ ಮೂಲಕ ಕೃಷಿಯಲ್ಲಿ ಹೊಸತನ ಸಾಧಿಸುತ್ತಿರುವುದು ರವೀಂದ್ರ ವಿ.ಭಟ್ ಕಣ್ಣಿ ಎಂಬ ಪ್ರತಿಪರ ರೈತ.

ಮಲೆನಾಡು ಭಾಗದ ಸಾಂಪ್ರದಾಯಿಕ ಬೆಳೆಯಾಗಿರುವ ಅಡಿಕೆಯ ಜತೆಗೆ ಅವರು ಕಾಳು ಮೆಣಸು, ತೆಂಗು, ದಾಲ್ಚಿನ್ನಿ, ಕಾಡು ರುದ್ರಾಕ್ಷಿ, ಅಮಟೆಕಾಯಿ, ಲವಂಗ ಸೇರಿ ಹಲವು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಮೂಲಕ ವಾರ್ಷಿಕ ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ.

ಐದು ಎಕರೆ ತೋಟದ ಸುತ್ತಮುತ್ತ ಹರಳೆ ಗಿಡ ಬೆಳೆಯುವ ಮೂಲಕ ಅಡಿಕೆ ಸಸಿಯ ರಕ್ಷಣೆಗೆ ವಿನೂತನ ಕ್ರಮ ಅನುಸರಿಸುವುದು ಇನ್ನೊಂದು ವಿಶೇಷ. ಭೂರಮೆ ಅಥವಾ ಜೌಡಲ ಗಿಡ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ಹರಳೆ ಗಿಡದ ಬೀಜದಿಂದ ತಯಾರಿಸುವ ಹರಳೆಣ್ಣೆ ಅನೇಕ ಔಷಧೀಯ ಗುಣ ಹೊಂದಿದ್ದು, ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.‌

‘ಬಿಸಿಲಿನ ತಾಪಕ್ಕೆ ತೋಟದಲ್ಲಿ ಎಳೆಯ ಅಡಿಕೆ ಸಸಿಗಳು ಸುಡುತ್ತಿದ್ದವು. ಅಡಿಕೆ ಸಸಿಗೆ ಬಿಸಿಲಿನ ತಾಪ ತಾಗದಂತೆ ಬೇಗನೆ ಬೆಳೆಯುವ ಹರಳೆ ಗಿಡ ನೆಡುವ ಯೋಚನೆ ಬಂತು. ಬಯಲು ಸೀಮೆಯಿಂದ ಹರಳೆ ಬೀಜ ತಂದು ಅಡಿಕೆ ಸಸಿಯ ಪಕ್ಕ ನಾಟಿ ಮಾಡಿದೆ. ಕೇವಲ ಒಂದು ವರ್ಷದೊಳಗೆ ಆರರಿಂದ ಎಂಟು ಅಡಿಯಷ್ಟು ಎತ್ತರ ಬೆಳೆದು ಉತ್ತಮ ಕಾಯಿ ಬಿಟ್ಟಿತು. ಅಡಿಕೆ ಸಸಿಗೂ ತಂಪು ದೊರೆಯಿತು’ ಎನ್ನುತ್ತಾರೆ ರವೀಂದ್ರ ಕಣ್ಣಿ.

‘ಬೆಳೆಯ ಇಳುವರಿಯನ್ನು ದುಪ್ಪಟ್ಟುಗೊಳಿಸಲು, ರೋಗಗಳನ್ನು ಹತೋಟಿಗೆ ತರಲು ಕಸಿ ಕಟ್ಟುವ ಪ್ರಯೋಗಗಳನ್ನು ನಡೆಸುತ್ತಿದ್ದೇನೆ. ಮಾವು, ಕೆಲ ಬಗೆಯ ತರಕಾರಿ ಗಿಡಗಳನ್ನು ಕಸಿ ಕಟ್ಟಿ ಬೆಳೆಸಿದ್ದೇನೆ. ಇವು ಉತ್ತಮ ಫಸಲನ್ನೂ ನೀಡುತ್ತಿವೆ’ ಎನ್ನುತ್ತಾರೆ ಅವರು.

ತೋಟದಲ್ಲಿ ಹರಳೆ ಗಿಡದ ಜೊತೆ ರವೀಂದ್ರ ಕಣ್ಣಿ
ತೋಟದಲ್ಲಿ ಹರಳೆ ಗಿಡದ ಜೊತೆ ರವೀಂದ್ರ ಕಣ್ಣಿ
ರವೀಂದ್ರ ಕಣ್ಣಿ
ರವೀಂದ್ರ ಕಣ್ಣಿ

ಕೆಲ ವರ್ಷಗಳ ಹಿಂದೆ ಅಧ್ಯಯನಕ್ಕೆ ಚೀನಾಕ್ಕೆ ಹೋಗಿದ್ದ ವೇಳೆ ಅಲ್ಲಿನ ಕೃಷಿ ಕ್ಷೇತ್ರದ ಪ್ರಯೋಗ ಇಲ್ಲಿಯೂ ನಡೆಸುವ ಯೋಚನೆ ಬಂತು. ಹಂತ ಹಂತವಾಗಿ ಅದರಲ್ಲಿ ಯಸಸ್ಸು ಸಾಧಿಸುತ್ತಿರುವೆ- ರವೀಂದ್ರ ಭಟ್ ಕಣ್ಣಿ ಕೃಷಿಕ

ಬಂಜರು ಭೂಮಿಯಲ್ಲೂ ಬೆಳೆಯಬಹುದು ‘ಹರಳೆ ಗಿಡಕ್ಕೆ ನೀರು ಬೇಕಿಲ್ಲ. ನೀರಿಲ್ಲದೆ ಪಾಳುಬಿದ್ದ ಒಣ ಭೂಮಿಯಲ್ಲಿ ಇದರ ಬೀಜವನ್ನು ಹಾಗೆ ಒಗೆದರೂ ಇದು ಹುಟ್ಟಿಕೊಳ್ಳುತ್ತದೆ. ಇದನ್ನು ಹಾಕುವುದರಿಂದ ತೋಟದಲ್ಲಿ ಕಳೆ ಪ್ರಮಾಣ ಕಡಿಮೆ ಆಗುವುದಲ್ಲದೆ ಕುರುಚಲು ಗಿಡ ಹುಟ್ಟುವುದಿಲ್ಲ. ರೈತರು ಖಾಲಿಬಿಟ್ಟ ತಮ್ಮ ಜಮೀನಿನಲ್ಲಿ ಶ್ರಮವೇ ಇಲ್ಲದ ಈ ಹರಳೆ ಗಿಡ ಬೆಳೆಯಬಹುದು. ಮನೆಬಳಕೆಗೆ ಹರಳೆ ಬೀಜದಿಂದ ಹರಳೆ ಎಣ್ಣೆ ತಯಾರಿಸಿಕೊಳ್ಳುತ್ತಿದ್ದೇವೆ. ರೈತರು ಖಂಡಿತ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಬಹುದು’ ಎನ್ನುತ್ತಾರೆ ರೈತ ರವೀಂದ್ರ ಭಟ್ ಕಣ್ಣಿ. ‘ಹರಳೆಣ್ಣೆ ತೆಗೆಯುವುದು ಅತ್ಯಂತ ಸುಲಭ. ಹರಳು ಬೀಜ ಹುರಿದು ಕುಟ್ಟಿ ಪುಡಿಮಾಡಿ ಬೇಯಿಸಿದರೆ ಹರಳೆಣ್ಣೆ ರೆಡಿಯಾಗುತ್ತದೆ. ಮೂರು ಕೆ.ಜಿ ಹರಳೆ ಬೀಜದಿಂದ ಒಂದು ಕೆ.ಜಿ ಎಣ್ಣೆ ತಯಾರಾಗುತ್ತದೆ. ಇದರಿಂದ ಉಪಾದಾಯವನ್ನೂ ಕಂಡುಕೊಳ್ಳಬಹುದು’ ಎನ್ನುತ್ತಾರೆ ಅಪರ್ಣಾ ರವೀಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT