ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಅರಣ್ಯ ಅಭಿವೃದ್ಧಿಗಾಗಿ ಮಂಜೂರಾದ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಆರೋ‍ಪ

Published 8 ಜೂನ್ 2024, 13:13 IST
Last Updated 8 ಜೂನ್ 2024, 13:13 IST
ಅಕ್ಷರ ಗಾತ್ರ

ಶಿರಸಿ: ಮುಂಡಗೋಡ ತಾಲ್ಲೂಕಿನ ಕಾತೂರ ಅರಣ್ಯ ವಲಯ ಅಧಿಕಾರಿ ಕಳೆದ ಎರಡು ವರ್ಷದಿಂದ ಸರ್ಕಾರದಿಂದ ಅರಣ್ಯ ಅಭಿವೃದ್ಧಿಗಾಗಿ ಮಂಜೂರಾದ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೆಚ್ಚುವರಿ ಪ್ರಧಾನ ಅರಣ್ಯ ಜಾಗೃತ ದಳದ ಅಧಿಕಾರಿಗೆ ಕೊಪ್ಪದ ಸಾಮಾಜಿಕ ಕಾರ್ಯಕರ್ತ ಬಸವರಾಜ ಪಾಟೀಲ್ ಪತ್ರ ಬರೆದು ಆಗ್ರಹಿಸಿದ್ದಾರೆ.

ಕಾತೂರ ವಲಯ ಅರಣ್ಯ ಪ್ರದೇಶದ ಕಾತೂರ, ಚಳಗೇರಿ, ಕೂರ್ಲಿ, ರಾಮಾಪೂರ, ಪಾಳಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ಲಾಂಟೇಷನ್ ಇವೆ. ಭದ್ರಾಪೂರ ಅರಣ್ಯ ಪುದೇಶದಲ್ಲಿ ಎರಡು ಪ್ಲಾಂಟೇಷನ್ ಇವೆ. ಪ್ರತಿ ಪ್ಲಾಂಟೇಷನ್‌ಗೆ 25 ಹೆಕ್ಟೆರ್‌ನಂತೆ ಎಲ್ಲ ಪ್ಲಾಂಟೇಷನ್‌ನಲ್ಲಿ ಐದು ಸಾವಿರ ಸಸಿಗಳನ್ನು ಹಚ್ಚಿದ್ದಾರೆ. ಪಿಟ್ (ಗುಂಡಿ) ಸೈಜ್ ಕಡಿಮೆ ಮಾಡಿ ಲೂಟಿ ಮಾಡಲಾಗಿದೆ. 75X75 ಅಳತೆಯ ಪಿಟ್ ತೆಗೆಯುವ ಬದಲಾಗಿ 45X45 ಅಳತೆಯ ಪಿಟ್ ತೆಗೆದಿದ್ದಾರೆ. ಒಂದು ಗುಂಡಿಗೆ ₹25 ಖರ್ಚು ಮಾಡಿ, ₹113 ಖರ್ಚು ಹಾಕಿದ್ದಾರೆ. ಈಗಲೂ 45X45 ಅಳತೆಯ ಪಿಟ್‌ ತೆಗೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಅರಣ್ಯ ಸಸಿ ಪ್ಯಾಂಟೇಷನ್‌ನಲ್ಲಿ ಜೂನ್ ತಿಂಗಳಲ್ಲಿ ಕಳೆ ನಿಯಂತ್ರಣ ಮಾಡಬೇಕಿದೆ. ಅದನ್ನು ಮಾಡದೇ ಪ್ರತಿ ಹೆಕ್ಟೆರ್‌ಗೆ ₹3 ಸಾವಿರ ಖರ್ಚು ಹಾಕಿದ್ದಾರೆ. ಅಕ್ಟೋಬರ್‌ನಲ್ಲಿ ಎರಡನೇ ಹಂತದ ಕಳೆ ನಿಯಂತ್ರಣ ಮಾಡಬೇಕಿದೆ. ಅದನ್ನೂ ಮಾಡದೇ ಪ್ರತಿ ಹೆಕ್ಟೆರ್‌ಗೆ ₹1800 ಖರ್ಚು ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಕಾತೂರ ವಲಯ ಅರಣ್ಯ ಪ್ರದೇಶದ ಆರು ಸೆಕ್ಷನ್‌ನಲ್ಲಿ ನಿರ್ಮಿಸಿದ ಪ್ಲಾಂಟೇಷನ್‍ನಲ್ಲಿ ಹಚ್ಚಲಾದ ಅರಣ್ಯ ಸಸಿಗಳಿಗೆ ಬರಾವು ಮಾಡಿಲ್ಲ. ಆದರೆ ದಾಖಲಾತಿಯಲ್ಲಿ ಮಾತ್ರ ಬರಾವು ಮಾಡಿದ್ದನ್ನು ಸೃಷ್ಟಿಸಿ ಹಣ ನುಂಗಲಾಗಿದೆ. ಮಂಜೂರಾದ ಹಣದಲ್ಲಿ ಶೇ 30ರಷ್ಟು ಕಾಮಗಾರಿ ಮಾಡಿರುವುದು ಕಂಡು ಬಂದಿದೆ. ಹಾಗಾಗಿ ಅವರನ್ನು ಅಮಾನತ್ತು ಮಾಡಿ, ಕಾನೂನು ಕ್ರಮವಹಿಸಬೇಕು. ನುಂಗಿದ ಹಣವನ್ನು ವಸೂಲಿ ಮಾಡಿ ಸರ್ಕಾರಿ ಖಜಾನೆಗೆ ಜಮೆ ಮಾಡಿಸುವಂತೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT