ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಹೊರವಲಯದ ಕಾಲೇಜಿಗೆ ತೆರಳುವುದೇ ಸಮಸ್ಯೆ

ಸುಜಯ್ ಭಟ್
Published 23 ಮೇ 2024, 6:01 IST
Last Updated 23 ಮೇ 2024, 6:01 IST
ಅಕ್ಷರ ಗಾತ್ರ

ಸಿದ್ದಾಪುರ: ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಹರಸಾಹಸಪಡಬೇಕಾದ ಅನಿವಾರ್ಯತೆ ಎದುರಾಗಿದೆ. ಸೂಕ್ತ ಬಸ್ ವ್ಯವಸ್ಥೆಯ ಕೊರತೆ ಸಮಸ್ಯೆಗೆ ಕಾರಣವಾಗಿದೆ.

ಪ್ರಶಾಂತ ವಾತಾವರಣದಲ್ಲಿ ಸುಮಾರು ಏಳು ಎಕರೆಯಷ್ಟು ವಿಶಾಲ ಜಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಪಟ್ಟಣದ ಉರ್ದು ಶಾಲೆಯಲ್ಲಿ ನಡೆಯುತ್ತಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತಾಲ್ಲೂಕು ಕೇಂದ್ರದಿಂದ 6 ಕಿ.ಮೀ ದೂರದ ಬೇಡ್ಕಣಿಗೆ 2018ರಲ್ಲಿ ಸ್ಥಳಾಂತರಗೊಂಡಿತ್ತು.

ಬಿ.ಎ ಮತ್ತು ಬಿ.ಕಾಂ ಪದವಿ ತರಗತಿಗಳು ನಡೆಯುತ್ತಿದ್ದು, 665 ವಿರ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ 7 ಪೂರ್ಣಕಾಲಿಕ ಉಪನ್ಯಾಸಕರು ಮತ್ತು 12 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರು, ವಿಶಾಲವಾದ ಹೊರಾಂಗಣ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಗಣಕೀಕೃತ ಗ್ರಂಥಾಲಯ, ಕಣ್ಗಾವಲಿಗೆ 40 ಕ್ಕೂ ಹೆಚ್ಚು ಕ್ಯಾಮೇರಾ, ಸ್ಮಾರ್ಟ್ ಕ್ಲಾಸ್ ರೂಮ್ ಸೇರಿದಂತೆ ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

‘ಕಾಲೇಜು ಪಟ್ಟಣದ ಹೊರವಲಯದಲ್ಲಿರುವುದರಿಂದ ಬಸ್ಸಿನ ಸಮಸ್ಯೆ ಎದುರಾಗುತ್ತಿದೆ. ಕಳೆದ ವರ್ಷ ಸಮಸ್ಯೆಯ ಗಂಭೀರತೆಯನ್ನು ಮನದಟ್ಟು ಮಾಡಲು ರಸ್ತೆಯಲ್ಲಿ ಧರಣಿಯನ್ನೂ ಮಾಡಿದ್ದೆವು. ನಂತರ ಕೇವಲ ಒಂದು ಬಸ್ ಬಿಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಬಸ್ಸಿನಲ್ಲಿ ಕಾಲೇಜಿಗೆ ತಲುಪಲು ಹರ ಸಾಹಸ ಪಡಬೇಕಾದ ಅನಿವಾರ್ಯತೆ ಇದೆ. ಕಾಲೇಜಿನಲ್ಲಿ ಕ್ಯಾಂಟೀನ್ ವ್ಯವಸ್ಥೆ ಇಲ್ಲದಿರುವುದರಿಂದ ಬೆಳಿಗ್ಗೆ ಬೇಗ ಮನೆಯಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ಅಪೇಕ್ಷಾ ಸಮಸ್ಯೆ ವಿವರಿಸಿದರು.

‘ಆರಂಭದಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಸಮಸ್ಯೆ ಇತ್ತು. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಮಕ್ಕಳ ಮತ್ತು ಪಾಲಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ. ಈಗ ಹಾಜರಾತಿಯಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ’ ಎನ್ನುತ್ತಾರೆ ಪ್ರಾಚಾರ್ಯ ಸತೀಶ ಎನ್.ನಾಯ್ಕ.

‘ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನೂ ನೀಡಲಾಗುತ್ತಿದೆ. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಎಲ್ಲಾ ರೀತಿಯ ಪುಸ್ತಕಗಳನ್ನು ಇರಿಸಲಾಗಿದೆ. ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಹೆಚ್ಚಿಸಲು ಪ್ರತಿ ವರ್ಷ ಪುಸ್ತಕ ಮೇಳವನ್ನು ಆಯೋಜಿಸುತ್ತಿದ್ದೇವೆ’ ಎಂದು ಹಿರಿಯ ಶ್ರೇಣಿ ಗ್ರಂಥಪಾಲಕ ಜೆ.ಎಸ್.ಶಾಸ್ತ್ರಿ ಹೇಳಿದರು.

ಕಾಲೇಜಿನ ಪಕ್ಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯವನ್ನು ನಿರ್ಮಿಸಲಾಗಿದೆ. ಆದರೆ ಈ ವರೆಗೂ ಕಾಲೇಜು ಶಿಕ್ಷಣ ಇಲಾಖೆಗೆ ಹಸ್ತಾಂತರಗೊಳ್ಳದೇ ಪಾಳು ಬಿದ್ದಿದೆ.‌‌

ಸಿದ್ದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಸಜ್ಜಿತ ಕಟ್ಟಡ
ಸಿದ್ದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಸಜ್ಜಿತ ಕಟ್ಟಡ
ಬಿ.ಬಿ.ಎ ಪದವಿ ಪುನರಾರಂಭ
‘ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಬಿ.ಬಿ.ಎ ಪದವಿಯನ್ನು 2024–25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪುನಃ ಆರಂಭಿಸಲಾಗುತ್ತಿದೆ. ಇದರ ಜತೆಗೆ ಹೊಸದಾಗಿ ಬಿ.ಎಸ್‍ಸಿ ಮತ್ತು ಬಿ.ಸಿ.ಎ ಪದವಿಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿ.ಸಿ.ಎ ಪದವಿ ವಿಭಾಗ ಆರಂಭಿಸಲು 100 ಕಂಪ್ಯೂಟರ್ ಗಳು ಮತ್ತು ಅದಕ್ಕೆ ಬೇಕಾದ ಸುಜಜ್ಜಿತ ಕಂಪ್ಯೂಟರ್ ಲ್ಯಾಬ್ ಕಟ್ಟಡಕ್ಕೆ ₹1 ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು ಸದ್ಯದಲ್ಲಿಯೇ ಕಟ್ಟಡದ ಕಾರ್ಯ ಆರಂಭಗೊಳ್ಳಲಿದೆ’ ಎಂದು ಪ್ರಾಚಾರ್ಯ ಸತೀಶ ನಾಯ್ಕ ಮಾಹಿತಿ ನೀಡಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT