ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ₹ 9.5 ಕೋಟಿ ವೆಚ್ಚದಲ್ಲಿ ನಿರ್ಮಾಣ: ತಳ ಬಿಟ್ಟು ಮೇಲೇಳದ ಶೈತ್ಯಾಗಾರ

Published 24 ನವೆಂಬರ್ 2023, 7:00 IST
Last Updated 24 ನವೆಂಬರ್ 2023, 7:00 IST
ಅಕ್ಷರ ಗಾತ್ರ

ಶಿರಸಿ: ಕೃಷಿ ಉತ್ಪನ್ನಗಳ ಸುರಕ್ಷಿತ ದಾಸ್ತಾನು ಮಾಡುವ ಉದ್ದೇಶದಿಂದ ಉತ್ತರ ಕನ್ನಡಕ್ಕೆ ಮೊದಲ ಬಾರಿಗೆ ಮಂಜೂರಾಗಿರುವ ಕೃಷಿ ಉತ್ಪನ್ನ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಕಾಮಗಾರಿ ಹಲವು ತಿಂಗಳುಗಳಿಂದ ತಳಪಾಯದ ಹಂತದಲ್ಲಿಯೇ ಇದೆ. ಗುತ್ತಿಗೆದಾರರ ವಿಳಂಬ ನೀತಿ ರೈತರ ಸಂಕಷ್ಟ ಹೆಚ್ಚಲು ಕಾರಣವಾಗಿದೆ.

ತಾಲ್ಲೂಕಿನ ಬನವಾಸಿ ಭಾಗದಲ್ಲಿ ಅನಾನಸ್, ಶುಂಠಿ ಸೇರಿದಂತೆ ಹಣ್ಣು ಕೃಷಿ ಪ್ರಮಾಣ ಹೆಚ್ಚಿದೆ. ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರಿತ್ಯ, ದರ ಕುಸಿತದಂಥ ಸಂದರ್ಭದಲ್ಲಿ ಫಸಲು ಹಾಳಾಗದಂತೆ ದಾಸ್ತಾನಿಟ್ಟುಕೊಳ್ಳಲು ಶೈತ್ಯಾಗಾರ ಸ್ಥಾಪಿಸುವಂತೆ ಹಲವು ವರ್ಷಗಳಿಂದ ರೈತರ ಬೇಡಿಕೆ ಇತ್ತು. ಮೂರು ವರ್ಷಗಳ ಹಿಂದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಒತ್ತಾಯದ ಮೇರೆಗೆ ಆಗಿನ ಕೃಷಿ ಸಚಿವ ಬಿ.ಸಿ. ಪಾಟೀಲ್ ಶಿರಸಿಗೆ ಬಂದ ವೇಳೆ ಶೈತ್ಯಾಗಾರ ಸ್ಥಾಪಿಸುವ ಭರವಸೆ ನೀಡಿದ್ದರು. ಎರಡು ವರ್ಷಗಳ ನಿರಂತರ ಹುಡುಕಾಟದ ಬಳಿಕ 2022ರಲ್ಲಿ ಅಂಡಗಿ ಗ್ರಾಮದ ಸರ್ವೆ ನಂಬರ್ 169ರಲ್ಲಿ ಭೂಮಿ ಗುರುತಿಸಿ, ಶೈತ್ಯಾಗಾರ ಸ್ಥಾಪನೆಗೆ ₹ 9.5 ಕೋಟಿ ಬಿಡುಗಡೆ ಮಾಡಿ, ವರ್ಷದ ಹಿಂದೆ ಕಾಮಗಾರಿಗೆ ಸ್ವತಃ ಬಿ.ಸಿ. ಪಾಟೀಲ್ ಚಾಲನೆ ನೀಡಿದ್ದರು.

ಹುಬ್ಬಳ್ಳಿ ಮೂಲದ ಬಾಲಾಜಿ ಕನ್‌ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಆರಂಭವಾಗಿ ತಿಂಗಳುಗಳು ಕಳೆದರೂ ವೇಗವಿಲ್ಲ. ವಿವಿಧ ಕಾರಣಗಳಿಗೆ ಕಾಮಗಾರಿ ಆರಂಭದಲ್ಲಿ ವಿಳಂಬವಾಗಿತ್ತು. ಪ್ರಸ್ತುತ ತಳಪಾಯ ಹಂತದ ಕಾಮಗಾರಿ ನಡೆಯುತ್ತಿದೆ. ನೆಲಮಟ್ಟದ ಕಟ್ಟಡ ನಿರ್ಮಾಣ, ಸೌಲಭ್ಯಗಳ ಅಳವಡಿಕೆ ಕಾಮಗಾರಿ ಬಾಕಿಯಿದೆ. ‘ಸ್ಥಳದಲ್ಲಿ ಕಬ್ಬಿಣದ ಬೀಮ್ಸ್ (ಕಂಬ)ಗಳನ್ನು ತಂದು ಸಂಗ್ರಹಿಸಿಡಲಾಗಿದ್ದರೂ, ಅಳವಡಿಕೆ ಹಂತಕ್ಕೆ ಕಾಮಗಾರಿ ಪೂರ್ಣವಾಗಿಲ್ಲ. ಸಂಪೂರ್ಣ ಕಾಮಗಾರಿ ಮುಗಿಯಲು ಇನ್ನೂ ಹಲವು ತಿಂಗಳು ಹಿಡಿಯುವ ಸಾಧ್ಯತೆಯಿದೆ’ ಎಂಬುದು ಸ್ಥಳೀಯರ ಅಭಿಪ್ರಾಯ. 

‘ಬರಗಾಲದಂಥ ಸಂಕಷ್ಟದ ಸಂದರ್ಭ ಎದುರಾಗಿದೆ. ಇಂಥ ಸಂದರ್ಭದಲ್ಲಿ ತೋಟಗಾರಿಕಾ ಬೆಳೆಗಳಾದ ಅನಾನಸ್, ಶುಂಠಿ, ಬಾಳೆ ಮುಂತಾದವುಗಳನ್ನು ದಾಸ್ತಾನಿಡಲು, ಕೃಷಿ ಉತ್ಪನ್ನಗಳನ್ನು ಕೆಡದಂತೆ ಇಟ್ಟುಕೊಳ್ಳುವುದು ಶೈತ್ಯಾಗಾರದ ಉದ್ದೇಶವಾಗಿತ್ತು. ಆದರೆ ಕಾಮಗಾರಿ ಮಾತ್ರ ಆಮೆ ಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಇದರ ಪ್ರಯೋಜನ ಸದ್ಯ ಸಿಗುವಂತೆ ಕಾಣುತ್ತಿಲ್ಲ’ ಎನ್ನುತ್ತಾರೆ ಕೃಷಿಕ ಸೋಮನಗೌಡ. 

‘ಚುನಾವಣೆ ನೀತಿ ಸಂಹಿತೆ, ಮಳೆಗಾಲದಂಥ ಸಂದರ್ಭದಲ್ಲಿ ಕಾಮಗಾರಿ ನಡೆಸಿಲ್ಲ. ಪ್ರಸ್ತುತ ಕಾಮಗಾರಿಗೆ ವೇಗ ನೀಡಲಾಗಿದೆ. ಶೈತ್ಯಾಗಾರ ಸ್ಥಾಪನೆಯ ಬಳಿಕ ಅದನ್ನು ಕೃಷಿ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ’ ಎಂಬುದು ಕಾಮಗಾರಿಯ ಮೇಲ್ವಿಚಾರಕರ ಮಾತು.

ಹಲವು ವರ್ಷಗಳ ಬೇಡಿಕೆ ಇದಾಗಿದ್ದು ಸಮರ್ಪಕ ಅನುಷ್ಠಾನವಾದರೆ ರೈತರಿಗೆ ಅನುಕೂಲ ಆಗಲಿದೆ. ಸಂಬಂಧಪಟ್ಟವರು ತ್ವರಿತವಾಗಿ ಕಾಮಗಾರಿ ಮುಗಿಸಲು ಮುಂದಾಗಬೇಕು
ಶ್ರೀಕಾಂತ ಗೌಡ ಸ್ಥಳೀಯ ಕೃಷಿಕ
ಕಾಮಗಾರಿಗೆ ಇನ್ನಷ್ಟು ವೇಗ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಸಂಪೂರ್ಣ ಕಾಮಗಾರಿ ಮುಗಿದು ಶೈತ್ಯಾಗಾರ ರೈತರ ಬಳಕೆಗೆ ಸಿಗಲಿದೆ.
ಶಿವರಾಮ ಹೆಬ್ಬಾರ್ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT