ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಸ್ಥಳೀಯ ಸಂಸ್ಥೆಗಳಿಗೆ ‘ಭಾರ’ವಾದ ‘ಕರ’ ವಸೂಲಿ

ಅಭಿವೃದ್ಧಿ ಚಟುವಟಿಕೆಗೆ ಅಡ್ಡಿಯಾಗುತ್ತಿರುವ ಆದಾಯ ಕೊರತೆ: ಪ್ರತಿಶತ ಸಾಧನೆ ಇಲ್ಲ
Published 25 ಮಾರ್ಚ್ 2024, 8:13 IST
Last Updated 25 ಮಾರ್ಚ್ 2024, 8:13 IST
ಅಕ್ಷರ ಗಾತ್ರ

ಕಾರವಾರ: ಆಸ್ತಿ ತೆರಿಗೆ, ನೀರಿನ ಕರ, ವಾಣಿಜ್ಯ ಮಳಿಗೆ ಬಾಡಿಗೆ, ವ್ಯಾಪಾರಿ ಶುಲ್ಕ...ಹೀಗೆ ನಾನಾ ಮೂಲಗಳಿಂದ ಆದಾಯ ಸಂಗ್ರಹಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ಬಾರಿಯೂ ತೆರಿಗೆ ಸಂಗ್ರಹದಲ್ಲಿ ಎಡವುತ್ತಿವೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಅಧಿಕೃತ ಮೂಲಗಳಿಂದ ‘ಗಳಿಕೆ’ಗಿಂತ ಅಭಿವೃದ್ಧಿಗೆ ಹೆಚ್ಚು ‘ವ್ಯಯ’ ಆಗುತ್ತಿರುವುದು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ದೂರು ಹೆಚ್ಚಿದೆ. 2023–24ನೇ ಆರ್ಥಿಕ ವರ್ಷದಲ್ಲಿಯೂ ಜಿಲ್ಲೆಯ ಯಾವೊಂದೂ ನಗರ ಸ್ಥಳೀಯ ಸಂಸ್ಥೆಗಳೂ ಎಲ್ಲ ವಿಧದ ಕರ ಸಂಗ್ರಹಣೆಯಲ್ಲಿ ಪ್ರತಿಶತ ಸಾಧನೆ ಮಾಡಿಲ್ಲದಿರುವುದು ಸ್ಪಷ್ಟವಾಗಿದೆ.

ಕಾರವಾರ ನಗರಸಭೆಯು ಆಸ್ತಿ ತೆರಿಗೆ, ನೀರಿನ ಕರ ಸಂಗ್ರಹ, ಬಾಡಿಗೆ ಸೇರಿದಂತೆ ವಿವಿಧ ಮೂಲಗಳಿಂದ ₹18.04 ಕೋಟಿ ಆದಾಯದ ಗುರಿ ಇಟ್ಟುಕೊಂಡಿತ್ತು. ಮಾರ್ಚ್ ಅಂತ್ಯ ಮುಗಿಯುವ ಹೊತ್ತಿನಲ್ಲಿಯೂ ಕೇವಲ ₹10.49 ಕೋಟಿ ಮಾತ್ರ ಸಂಗ್ರಹವಾಗಿದೆ. ₹5.30 ಕೋಟಿ ಆಸ್ತಿ ತೆರಿಗೆಯಲ್ಲಿ ₹4.89 ಕೋಟಿ ಮಾತ್ರ ವಸೂಲಾಗಿದೆ. ₹3.35 ಕೋಟಿ ಬಾಡಿಗೆ ಗುರಿಯಲ್ಲಿ ₹7.72 ಲಕ್ಷ ಮಾತ್ರ ವಸೂಲಾಗಿದೆ.

ಕಳೆದ ಎರಡು ವರ್ಷಗಳಿಂದ ನಗರಸಭೆ ನಿಧಿಯಡಿ ಕೈಗೊಂಡ ಕಾಮಗಾರಿಗಳಿಗೆ ₹12 ಕೋಟಿಗೂ ಹೆಚ್ಚು ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸುವುದು ಬಾಕಿ ಉಳಿದಿದೆ. ಈ ಬಾರಿ ಹೊಸ ಕಾಮಗಾರಿ ಕೈಗೊಳ್ಳಲು ಆರ್ಥಿಕ ಅಡಚಣೆಯಾಗುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ. 

ಭಟ್ಕಳ ಪುರಸಭೆಯಿಂದ ₹1.23 ಕೋಟಿ ಕರ ವಸೂಲಿ ಅಂದಾಜಿಸಲಾಗಿತ್ತು. ವರ್ಷಾಂತ್ಯಕ್ಕೆ ₹1.08 ಕೋಟಿ ಕರ ವಸೂಲಾಗಿದೆ. ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ₹52.34 ಲಕ್ಷ ವಸೂಲಿಗೆ ಗುರಿ ನಿಗದಿಸಲಾಗಿತ್ತು, ವರ್ಷಾಂತ್ಯಕ್ಕೆ ₹37.47 ಲಕ್ಷ ಮಾತ್ರ ಕರ ವಸೂಲಿ ಮಾಡಲಾಗಿದೆ.

ಮುಂಡಗೋಡ ಪಟ್ಟಣ ಪಂಚಾಯಿತಿ ಕರ ವಸೂಲಾತಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತಿದೆ. ಆದರೆ, ನೀರಿನ ಕರ ವಸೂಲಾತಿಯಲ್ಲಿ ಶೇ.40ರಷ್ಟು ಹಿಂದೆ ಬಿದ್ದಿರುವುದು ಕಂಡುಬಂದಿದೆ.

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಹಕ್ಕು ಪತ್ರ ನೀಡಿದ್ದರಿಂದ, ಅವರೂ ಸಹ ಮನೆ ತೆರಿಗೆ ತುಂಬುತ್ತಿದ್ದಾರೆ. ಇದರಿಂದ ಮನೆ ತೆರಿಗೆ ವಸೂಲಿಯಲ್ಲಿ ಪಟ್ಟಣ ಪಂಚಾಯಿತಿ ನಿರೀಕ್ಷಿತ ಗುರಿಗಿಂತ ಮುಂದೆ ಇದೆ.

‘ಪಟ್ಟಣ ವ್ಯಾಪ್ತಿಯಲ್ಲಿ ಮನೆ ಕರ ವಸೂಲಾತಿಯಲ್ಲಿ ಶೇಕಡಾ ನೂರರಷ್ಟು ಪ್ರಗತಿ ಸಾಧಿಸಲಾಗಿದೆ. ನೀರಿನ ಕರ ವಸೂಲಾತಿಯಲ್ಲಿ ಶೇ 64ರಷ್ಟು ಸಾಧನೆ ಆಗಿದೆ’ ಎಂದು ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಹೇಳಿದರು.

ಯಲ್ಲಾಪುರ ಪಟ್ಟಣ ಪಂಚಾಯಿತಿ ಪ್ರಸಕ್ತ ಆರ್ಥಿಕ ವರ್ಷ ಒಟ್ಟು ₹68 ಲಕ್ಷ ತೆರಿಗೆ ಸಂಗ್ರಹಣೆ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ ₹50 ಲಕ್ಷ ವಸೂಲಾಗಿದೆ. ಬಾಕಿ ಇರುವ ₹18 ಲಕ್ಷ ಸಂಗ್ರಹಕ್ಕೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಹಳಿಯಾಳ ಪಟ್ಟಣದ ಪುರಸಭೆಯು ₹1.33 ಕೋಟಿ ತೆರಿಗೆ ಸಂಗ್ರಹಣೆ ಗುರಿ ಹೊಂದಿದ್ದು ಈಗಾಗಲೇ ₹1.15 ಕೋಟಿ ವಸೂಲಾಗಿದೆ. ನೀರಿನ ತೆರಿಗೆಯಲ್ಲಿ ₹2.30 ಕೋಟಿ ಗುರಿ ಹೊಂದಿದ್ದು ₹2.08 ಕೋಟಿ ವಸೂಲಿಯಾಗಿದೆ. ಪುರಸಭೆಯಿಂದ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣಗಳಿಂದ ₹79 ಲಕ್ಷ ಬಾಡಿಗೆ ವಸೂಲಿಯ ಗುರಿ ಇದ್ದು, ₹64.23 ಲಕ್ಷ ವಸೂಲಾಗಿದೆ. ಬಾಡಿಗೆ ಪಾವತಿಸದ ಸುಮಾರು 23 ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ವ್ಯಾಪಾರ ಪರವಾನಿಗೆಯಿಂದ ₹17.82 ಲಕ್ಷ ಬರಬೇಕಿದ್ದು, ಈವರೆಗೆ ₹13.15 ಲಕ್ಷ ಮಾತ್ರ ವಸೂಲಾಗಿದೆ. ನೀರಿನ ಕರ ತುಂಬದ 58 ನಲ್ಲಿ ಜೋಡಣೆಯನ್ನು ಸ್ಥಗಿತಗೊಳಿಸಲಾಗಿದೆ.

‘ತೆರಿಗೆ ಸಂಗ್ರಹ ಸಮಾಧಾನಕರವಾಗಿದೆ. ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನದ ಕೊರತೆ ಆಗಿಲ್ಲ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ.

ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಶೇ 95 ರಷ್ಟಾಗಿದೆ. ₹2.64 ಕೋಟಿ ಗುರಿ ಇದ್ದು, ಅರ್ಧದಷ್ಟು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಿಂದಲೇ ಪಾವತಿಯಾಗುತ್ತಿದೆ.

ಸಿದ್ದಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರತಿಶತ ಸಾಧನೆಯಾಗಿದೆ. ನೀರಿನ ಕರ ಸಂಗ್ರಹಣೆ ಕುಂಠಿತವಾಗಿದೆ. ₹31 ಲಕ್ಷ ಸಂಗ್ರಹಿಸುವ ಗುರಿ ಇದ್ದು, ಈವರೆಗೆ ₹17 ಲಕ್ಷ ಪಾವತಿಯಾಗಿದೆ. ಮಳಿಗೆಗಳಿಂದ ಬರಬೇಕಾದ ₹10 ಲಕ್ಷ ಬಾಡಿಗೆ ಮೊತ್ತವೂ ಬಾಕಿ ಇದೆ.

‘ಸರಿಯಾದ ಸಮಯಕ್ಕೆ ತೆರಿಗೆ ಪಾವತಿಯಾದರೆ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲು ಅನುಕೂಲವಾಗುತ್ತದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗದೀಶ ನಾಯ್ಕ ಹೇಳುತ್ತಾರೆ.

ಅಂಕೋಲಾ ಪುರಸಭೆಯು ₹1.27 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ಈವರೆಗೆ ₹1.06 ಕೋಟಿ ತೆರಿಗೆ ಸಂಗ್ರಹಿಸಿದೆ. ₹1.21 ಕೋಟಿ ನೀರಿನ ಕರ ಸಂಗ್ರಹಣೆಯಲ್ಲಿ ₹1.01 ಕೋಟಿ ಸಂಗ್ರಹಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಪ್ರಗತಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿ ದಿಲೀಪ್ ನಾಯ್ಕ ಹೇಳುತ್ತಾರೆ.

ಕುಮಟಾ ಪುರಸಭೆಯ ವಿವಿಧ ಕರ ವಸೂಲಿಯಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ.95 ರಷ್ಟು ಪ್ರಗತಿಯಾಗಿದ್ದು, ಮಳಿಗೆಗಳ ಬಾಡಿಗೆ ಸಂಗ್ರಹ ಪ್ರಮಾಣ ಶೇ.88 ರಷ್ಟಾಗಿದೆ. ಆಸ್ತಿ ತೆರಿಗೆಯಿಂದ ₹1.43 ಕೋಟಿ ಸಂಗ್ರಹಗೊಂಡಿದೆ ಎಂದು ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಮಾಹಿತಿ ನೀಡಿದ್ದಾರೆ.

–0– 

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ, ಎಂ.ಜಿ.ನಾಯ್ಕ.

ಹಳಿಯಾಳದ ಪುರಸಭೆ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ
ಹಳಿಯಾಳದ ಪುರಸಭೆ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ
ದಾಂಡೇಲಿ ನಗರಸಭೆಯಲ್ಲಿ ತೆರಿಗೆ ವಿಭಾಗದಲ್ಲಿ ಸಾರ್ವಜನಿಕರು ತೆರಿಗೆ ಪಾವತಿಗಾಗಿ ನಿಂತಿರುವುದು
ದಾಂಡೇಲಿ ನಗರಸಭೆಯಲ್ಲಿ ತೆರಿಗೆ ವಿಭಾಗದಲ್ಲಿ ಸಾರ್ವಜನಿಕರು ತೆರಿಗೆ ಪಾವತಿಗಾಗಿ ನಿಂತಿರುವುದು
ಕಾರವಾರ ನಗರಸಭೆಯ ಕಚೇರಿ
ಕಾರವಾರ ನಗರಸಭೆಯ ಕಚೇರಿ
ಸಿಬ್ಬಂದಿ ಕೊರತೆಯಿಂದಾಗಿ ತೆರಿಗೆ ಸಂಗ್ರಹಕ್ಕೆ ಸ್ಪಲ್ಪ ಹಿನ್ನಡೆಯಾಗಿದ್ದರೂ ಅಭಿವೃದ್ಧಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಉಂಟಾಗಿಲ್ಲ.
ಜ್ಯೋತಿ ಉಪ್ಪಾರ ಯಲ್ಲಾಪುರ ಪ.ಪಂ. ಮುಖ್ಯಾಧಿಕಾರಿ
ಮುಂಡಗೋಡ ಪಟ್ಟಣ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆಯಿಂದ ಕರ ತುಂಬಲು ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ. ಮನೆ ಕರ ತುಂಬಲೂ ವಾರಗಟ್ಟಲೇ ಅಲೆದಾಡಬೇಕು. ಮನೆ ಕರ ತುಂಬಲು ಚಲನ್‌ ಪಡೆದುಕೊಳ್ಳಲು ಹರಸಾಹಸ ಪಡಬೇಕು.
ಪ್ರಕಾಶ್ ಮುಂಡಗೋಡ ನಿವಾಸಿ
₹1.30 ಕೋಟಿ ಬಾಕಿ: ಆರ್ಥಿಕ ತೊಡಕು
ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ಹಾಗೂ ನೀರಿನ ಕರ ₹1.30 ಕೋಟಿ ವಸೂಲಿ ಬಾಕಿಯಿದ್ದು ವಸೂಲಾತಿಯೇ ನಗರಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ನಗರಸಭೆ ವ್ಯಾಪ್ತಿಯಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚು ಆಸ್ತಿಗಳಿದ್ದು ₹2 ಕೋಟಿ ಆಸ್ತಿ ತೆರಿಗೆ ಗುರಿಯಿತ್ತು. ಇದರಲ್ಲಿ ₹1.82 ಕೋಟಿ ವಸೂಲಿಯಾಗಿದ್ದು ₹18 ಲಕ್ಷ ಬಾಕಿಯಿದೆ. ಅದರಂತೆ ನೀರಿನ ಕರ ₹1.80 ಕೋಟಿ ಗುರಿಯಿದ್ದು ₹1.12 ಕೋಟಿ ವಸೂಲಿ ಆಗಬೇಕಿದೆ.  ‘ತೆರಿಗೆ ಸಂಗ್ರಹ ಸಂಬಂಧ ಹಲವು ಬಾರಿ ಜಾಗೃತಿ ಮೂಡಿಸಲಾಗಿದೆ. ತಮಟೆ ಅಭಿಯಾನ ಮಾಡಲಾಗಿದೆ. ಇನ್ನೂ ತೆರಿಗೆ ತುಂಬದಿದ್ದರೆ ನಳ ಸಂಪರ್ಕ ಕಡಿತ ಮಾಡಲು ಸೂಚಿಸಲಾಗುವುದು’ ಎಂದು ಪೌರಾಯುಕ್ತ ಕಾಂತರಾಜ್ ಹೇಳಿದರು.
ನೀರಿನ ಕರ: ಶೇ 31ರಷ್ಟು ಪ್ರಗತಿ
ಹೊನ್ನಾವರ ಪಟ್ಟಣ ಪಂಚಾಯಿತಿ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ವಾಣಿಜ್ಯ ಬಳಕೆಯ 40 ನಲ್ಲಿಗಳು ಸೇರಿದಂತೆ ಒಟ್ಟೂ 3012 ನಲ್ಲಿ ಸಂಪರ್ಕ ನೀಡಲಾಗಿದ್ದು ಇವುಗಳಿಂದ ಶುಲ್ಕ ವಸೂಲಾತಿಯಲ್ಲಿ ಶೇ 31 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ₹95.19 ಲಕ್ಷ ನೀರಿನ ತೆರಿಗೆ ಸಂಗ್ರಹಿಸುವ ಗುರಿ ಇದೆಯಾದರೂ ಆರ್ಥಿಕ ವರ್ಷದ ಕೊನೆಯಲ್ಲಿ ₹29.40 ಲಕ್ಷ ಸಂಗ್ರಹವಾಗಿದೆ. ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ 96 ರಷ್ಟು ಪ್ರಗತಿ ಸಾಧಿಸಲಾಗಿದೆ. ‘ಪೊಲೀಸ್ ಮತ್ತಿತರ ವಸತಿ ಗೃಹಗಳ ನಿರ್ಮಾಣ ಕಾರ್ಯ ನಡೆದಿದ್ದು ಅವುಗಳಿಂದ ತೆರಿಗೆ ಸಂಗ್ರಹ ಸಾಧ್ಯವಾಗಿಲ್ಲ’ ಎಂದು ತೆರಿಗೆ ಸಂಗ್ರಹ ಕಾರ್ಯ ನಿರ್ವಹಿಸುತ್ತಿರುವ ಪಟ್ಟಣ ಪಂಚಾಯಿತಿ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT