ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಪರೀಕ್ಷೆ ನಾಳೆಯಿಂದ: ಕಟ್ಟುನಿಟ್ಟಿನ ನಿಯಮ

ಅಭ್ಯರ್ಥಿಗಳಿಗೆ ಸರಳ ಉಡುಗೆ ಧರಿಸಲು ಸೂಚನೆ, ಆಭರಣ ನಿಷಿದ್ಧ
Published 17 ಏಪ್ರಿಲ್ 2024, 13:29 IST
Last Updated 17 ಏಪ್ರಿಲ್ 2024, 13:29 IST
ಅಕ್ಷರ ಗಾತ್ರ

ಕಾರವಾರ: ವೃತ್ತಪರ ಕೋರ್ಸ್‌ಗಳಿಗೆ ಪ್ರವೇಶಾತಿಗೆ ಅಭ್ಯರ್ಥಿಗಳ ಆಯ್ಕೆಗೆ ನಡೆಸಲಾಗುವ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿ.ಇ.ಟಿ) ಜಿಲ್ಲೆಯ 11 ಕೇಂದ್ರಗಳಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯಲಿದೆ. ಸುಗಮ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯ ಕಾರವಾರ ಮತ್ತು ಶಿರಸಿಯಲ್ಲಿ ತಲಾ ಮೂರು, ಹೊನ್ನಾವರ ಮತ್ತು ಕುಮಟಾದಲ್ಲಿ ತಲಾ ಎರಡು ಹಾಗೂ ಹಳಿಯಾಳದಲ್ಲಿ ಒಂದು ಪರೀಕ್ಷೆ ಕೇಂದ್ರ ಇರಲಿದೆ. ಒಟ್ಟು 4,395 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ಕೆಲ ದಿನಗಳ ಹಿಂದಷ್ಟೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿರುವ ಹಿನ್ನೆಲೆಯಲ್ಲಿ ವ್ಯವಸ್ಥೆಗಳು ಈಗಾಗಲೆ ಇವೆ. ಆದರೂ, ಪದವಿ ಪೂರ್ವ ಶಿಕ್ಷಣ ಇಲಾಖೆ ಇನ್ನಷ್ಟು ಸುಧಾರಿತ ವ್ಯವಸ್ಥೆಗಳನ್ನು ಕೈಗೊಂಡಿದೆ. ಸೆಕೆ ವಿಪರೀತವಾಗಿರುವ ಹಿನ್ನೆಲೆಯಲ್ಲಿ ತರಗತಿ ಕೊಠಡಿಗಳಲ್ಲಿ ಫ್ಯಾನ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ಮೊದಲ ದಿನ ಜೀವಶಾಸ್ತ್ರ ಮತ್ತು ಗಣಿತ, ಎರಡನೇ ದಿನ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಕೇಂದ್ರಗಳ 200 ಮೀ. ಸುತ್ತಮುತ್ತ ಪರೀಕ್ಷೆ ನಡೆಯುವ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ.

‘ಸಿ.ಇ.ಟಿ ಪರೀಕ್ಷೆ ಸುಗಮವಾಗಿ ನಡೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಪೆನ್, ಪ್ರವೇಶಾತಿ ಪತ್ರದ ಹೊರತಾಗಿ ಬೇರೆ ಯಾವುದೇ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ. ಉದ್ದ ತೋಳಿನ ಅಂಗಿ, ಹೆಚ್ಚು ಜೇಬುಗಳಿರುವ ಪ್ಯಾಂಟ್ ಸೇರಿದಂತೆ ಆಡಂಬರದ ವಸ್ತ್ರ ಧರಿಸುವ ಬದಲು ಸರಳ ಉಡುಗೆ ತೊಟ್ಟು ಬರಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಎಲೆಕ್ಟ್ರಾನಿಕ್ ಉಪಕರಣ, ವಾಚುಗಳು, ಆಭರಣ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸತೀಶ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT