ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಕೋಟಿ ಮೌಲ್ಯದ ಬೋಯ್ ಕಳವು

ಕಾರವಾರದಿಂದ ಮುಂಬೈ ಕಡೆಗೆ ಒಯ್ದಿರುವ ಶಂಕೆ
Published 25 ಫೆಬ್ರುವರಿ 2024, 4:32 IST
Last Updated 25 ಫೆಬ್ರುವರಿ 2024, 4:32 IST
ಅಕ್ಷರ ಗಾತ್ರ

ಕಾರವಾರ: ಹವಾಮಾನ ವೈಪರಿತ್ಯ, ಬದಲಾವಣೆಯ ಮುನ್ಸೂಚನೆ ಅರಿಯಲು ಇಲ್ಲಿನ ದೇವಗಡ ಲೈಟ್‍ಹೌಸ್‍ ಸಮೀಪ ಕೇಂದ್ರ ಭೂವಿಜ್ಞಾನ ಸಚಿವಾಲಯದ ಅಧೀನದ ರಾಷ್ಟ್ರೀಯ ಸಾಗರ ಮಾಹಿತಿ ಕೇಂದ್ರದಿಂದ ಅಳವಡಿಸಲಾಗಿದ್ದ ₹ 1 ಕೋಟಿ ಮೌಲ್ಯದ ‘ವೇವ್ ರೈಡರ್ ಬೋಯ್’ ಒಂದು ವಾರದಿಂದ ಕಾಣೆಯಾಗಿದೆ.

2012ರಲ್ಲಿ ಮೊದಲ ಸಲ ಕಾರವಾರದಿಂದ ಅರಬ್ಬಿ ಸಮುದ್ರದಲ್ಲಿ 6 ಕಿ.ಮೀ ದೂರದಲ್ಲಿ ‘ಬೋಯ್’ ಅಳವಡಿಸಲಾಗಿತ್ತು.  ಕಳೆದ ವರ್ಷ ಎಂ.ಕೆ–04 ಎಂಬ ಸುಧಾರಿತ ಬೋಯ್‌ ಅಳವಡಿಸಿ, ಅದನ್ನು ಬದಲಿಸಲಾಗಿತ್ತು. ಇಲ್ಲಿನ ಕೋಡಿಬಾಗದಲ್ಲಿ ಇರುವ ಕರ್ನಾಟಕ ವಿಶ್ವವಿದ್ಯಾಲಯದ ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಅದನ್ನು ನಿರ್ವಹಿಸುತ್ತದೆ.

‘ಅತ್ಯಾಧುನಿಕ ಜಿಪಿಎಸ್, ಸೆನ್ಸಾರ್ ಒಳಗೊಂಡಂತೆ ಸುಧಾರಿತ ಸೌಲಭ್ಯವುಳ್ಳ ರೈಡರ್ ಬೋಯ್‍ನ್ನು ಕಾರವಾರ ಸೇರಿ ದೇಶದ 6 ಕಡೆ ಮಾತ್ರ ಕೇಂದ್ರ ಭೂ ವಿಜ್ಞಾನ ಸಚಿವಾಲಯವು ಅಳವಡಿಸಿದೆ. ಸಮುದ್ರದಲ್ಲಿ ಉಂಟಾಗುವ ಪ್ರತಿ ಕ್ಷಣದ ಬದಲಾವಣೆಯ ಮಾಹಿತಿ ನಿಖರವಾಗಿ ಪಡೆಯಬಹುದು. ರಾಜ್ಯದ ಪಶ್ಚಿಮ ಕರಾವಳಿ ಭಾಗದ ಮೀನುಗಾರರಿಗೆ ಚಂಡಮಾರುತ, ಸಮುದ್ರ ಪ್ರಕ್ಷುಬ್ಧತೆ ಮಾಹಿತಿ ನೀಡಬಹುದು. ಅದು ಕಳ್ಳತನವಾಗಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಜೆ.ಎಲ್.ರಾಠೋಡ್ ತಿಳಿಸಿದರು.

‘ಸಮುದ್ರದ 20 ಮೀಟರ್‌ ಆಳದಲ್ಲಿ 400 ಕೆಜಿ ತೂಕದ ಭಾರದ ವಸ್ತು ಇಟ್ಟು, ಅದನ್ನು ಹಗ್ಗದ ಮೂಲಕ ಬೋಯ್‍ಗೆ ಜೋಡಿಸಿ ಸ್ಥಿರವಾಗಿ ನಿಲ್ಲುವಂತೆ ಮಾಡಲಾಗಿತ್ತು. ಹಗ್ಗವನ್ನು ತುಂಡರಿಸಿ ಬೋಯ್ ತೇಲಿ ಹೋಗುವಂತೆ ಮಾಡಲಾಗಿದೆ. ಆನ್‌ಲೈನ್‌ ಶೋಧನೆ ಪ್ರಕಾರ, ಮುಂಬೈ ಬಳಿ ಬೋಯ್ ಇರುವುದು ಪತ್ತೆಯಾಗಿದೆ. ಅದು ಸಾಗಿದ ಮಾರ್ಗ ಗಮನಿಸಿದರೆ ಹಡಗು ಅಥವಾ ಬೋಟ್ ಮೂಲಕ ಕಳವು ಮಾಡಿರುವ ಸಾಧ್ಯತೆ ಇದೆ’ ಎಂದರು.

ಕಾರವಾರದಿಂದ ಕಣ್ಮರೆಯಾಗಿರುವ ವೇವ್ ರೈಡರ್ ಬೋಯ್ ಅರಬ್ಬಿ ಸಮುದ್ರದಲ್ಲಿ ಸಾಗಿದ ಮಾರ್ಗ
ಕಾರವಾರದಿಂದ ಕಣ್ಮರೆಯಾಗಿರುವ ವೇವ್ ರೈಡರ್ ಬೋಯ್ ಅರಬ್ಬಿ ಸಮುದ್ರದಲ್ಲಿ ಸಾಗಿದ ಮಾರ್ಗ

ರೈಡರ್ ಬೋಯ್ ಕಳ್ಳತನವಾಗಿರುವ ಸಾಧ್ಯತೆ ಹೆಚ್ಚಿದ್ದು ಪತ್ತೆಗೆ ನೌಕಾದಳಕ್ಕೆ ತಟರಕ್ಷಕ ಪಡೆಗೆ ಮನವಿ ಮಾಡಲಾಗಿದೆ. ಪೊಲೀಸ್ ದೂರನ್ನೂ ನೀಡಲಾಗುವುದು.

-ಜೆ.ಎಲ್.ರಾಠೋಡ್ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT