ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ‘ಆಪದ್ ಮಿತ್ರ'ರಿಗೆ ಎದುರಾದ ಆಪತ್ತು!

Published 19 ಡಿಸೆಂಬರ್ 2023, 4:41 IST
Last Updated 19 ಡಿಸೆಂಬರ್ 2023, 4:41 IST
ಅಕ್ಷರ ಗಾತ್ರ

ಶಿರಸಿ: ಪ್ರಕೃತಿ ವಿಕೋಪ ಸೇರಿದಂತೆ ತುರ್ತು ಸನ್ನಿವೇಶದಲ್ಲಿ ನೆರವಿಗೆ ಧಾವಿಸಲು ತರಬೇತಿ ಪಡೆದು ಸಿದ್ಧಗೊಂಡಿರುವ 'ಆಪದ್ ಮಿತ್ರ'ರಿಗೆ ವರ್ಷ ಕಳೆದರೂ ಅತ್ಯಗತ್ಯ ನೆರವಿನ ಕಿಟ್ ವಿತರಣೆಯಾಗಿಲ್ಲ. ಇದರಿಂದ ತುರ್ತು ಪರಿಸ್ಥಿತಿ ನಿಭಾಯಿಸಲು ಸ್ವಯಂ ಸೇವಕರು ಹಿಂದೇಟು ಹಾಕುವಂತಾಗಿದೆ.

ಕಟ್ಟಡ ಕುಸಿತ, ಪ್ರವಾಹ, ಅತಿವೃಷ್ಟಿಯಂಥ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅಗ್ನಿ ಶಾಮಕ ಸಿಬ್ಬಂದಿ, ವಿಪತ್ತು ನಿರ್ವಹಣಾ ತಂಡಕ್ಕಿಂತ ಮೊದಲು ನೆರವಿಗೆ ಧಾವಿಸುವುದು ಸ್ಥಳೀಯರು. ಇಂಥ ವೇಳೆ ರಕ್ಷಣೆಗೆ ಧಾವಿಸಿದಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಹೆಚ್ಚಿರುತ್ತದೆ. ಸಂತ್ರಸ್ತರನ್ನು ಹೇಗೆ ಕಾಪಾಡಬೇಕು, ನೆರವಿಗೆ ಧಾವಿಸಿದಾಗ ತಾವೇ ಅಪಾಯದಲ್ಲಿ ಸಿಲುಕಿದರೆ ಹೇಗೆ ಪಾರಾಗಬೇಕು ಎಂಬುದು ಸ್ಥಳೀಯರಿಗೆ ತಿಳಿದಿರುವುದಿಲ್ಲ. ಹಾಗಾಗಿ ಸ್ಥಳೀಯ ಆಸಕ್ತ ಸ್ವಯಂ ಸೇವಕರನ್ನು ಗುರುತಿಸಿ ಅವರಿಗೆ ಸುಸಜ್ಜಿತವಾಗಿ ವಿಪತ್ತು ನಿರ್ವಹಣೆ ತರಬೇತಿ ನೀಡಿದರೆ ತುರ್ತು ಸಂದರ್ಭದಲ್ಲಿ ಕೂಡಲೇ ನೆರವಾಗುವರು ಎಂಬ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೂಚನೆ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ 300 ಸ್ವಯಂ ಸೇವಕರಿಗೆ 12 ದಿನಗಳ ತರಬೇತಿ ನೀಡಲಾಗಿತ್ತು. ಜಿಲ್ಲಾಡಳಿತ, ಅಗ್ನಿಶಾಮಕ ದಳ, ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಜಂಟಿ ಆಶ್ರಯದಲ್ಲಿ ಈ ತರಬೇತಿ ಕೊಡಲಾಗಿತ್ತು. ಅಗತ್ಯ ಸಂದರ್ಭದಲ್ಲಿ ನೆರವಿಗೆ ಮುಂದಾದಾಗ ಸ್ವಯಂ ಸೇವಕರಿಗೆ ಅನುಕೂಲವಾಗುವಂತೆ ಮುನ್ನೆಚ್ಚರಿಕೆಯಾಗಿ ಜೀವರಕ್ಷಕ ಕಿಟ್‌ ವಿತರಿಸಲಾಗುವುದು ಎಂದು ತರಬೇತಿ ವೇಳೆ ಭರವಸೆ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಕಿಟ್ ನೀಡಿಲ್ಲ. ಇದು ಹಲವು ಸ್ವಯಂ ಸೇವಕರ ಧೃತಿಗೆಡಿಸಿದೆ.

'ತುರ್ತು ಸಂದರ್ಭದಲ್ಲಿ ಕೈಗವಸು, ಕಾಲುಗವಸು, ಗರಗಸ, ಪಿಕಾಸು, ಹಗ್ಗ, ಲೈಫ್‌ ಜಾಕೆಟ್‌, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬ್ಯಾಟರಿ ಸೇರಿದಂತೆ ಪ್ರಮುಖ ಸುರಕ್ಷಾ ಉಪಕರಣಗಳು ಬೇಕಾಗುತ್ತವೆ. ಇವುಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಈಗ ಇವೆಲ್ಲವನ್ನೂ ಸ್ವಂತ ಖರೀದಿಸುವ ಸ್ಥಿತಿ ಬಂದಿದೆ' ಎನ್ನುತ್ತಾರೆ ತರಬೇತಿ ಪಡೆದ ಶಿರಸಿಯ ನರಸಿಂಹರಾಜು ಭಟ್. 

'ಜಿಲ್ಲೆಗೆ ₹20 ಲಕ್ಷ ಮೊತ್ತವನ್ನು ಸುರಕ್ಷಾ ಉಪಕರಣಗಳ ಖರೀದಿಗೆ ನೀಡಲಾಗುತ್ತದೆ. ಅದರಲ್ಲಿ ಕಿಟ್ ನೀಡಲಾಗುವುದು ಎಂನ್ನಲಾಗಿತ್ತು. ಜತೆಗೆ, ಪ್ರತಿ ಸ್ವಯಂ ಸೇವಕನಿಗೆ ಜೀವ ವಿಮಾ ಸೌಲಭ್ಯ ಕಲ್ಪಿಸಬೇಕೆಂಬ ನಿಯಮವಿದೆ. ಪ್ರಸ್ತುತ ಘೋಷಣೆ ಮಾಡಲಾಗಿದೆ ಆದರೆ ಎಷ್ಟು ಮೊತ್ತ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಒಂದು ವೇಳೆ ಇತರರಿಗೆ ಸಹಾಯ ಮಾಡುವ ಸಂದರ್ಭದಲ್ಲಿ ನಮಗೆ ಅನಾಹುತ ಸಂಭವಿಸಿದರೆ ಜವಾಬ್ದಾರರು ಯಾರು' ಎಂದು ಅವರು ಪ್ರಶ್ನಿಸಿದರು.

3400 ಸ್ವಯಂ ಸೇವಕರ ಆಯ್ಕೆ

ರಾಜ್ಯದ ಬೆಂಗಳೂರು ನಗರ ಬಾಗಲಕೋಟೆ ದಕ್ಷಿಣ ಕನ್ನಡ ಚಿಕ್ಕಮಗಳೂರು ಕಲಬುರಗಿ ಕೊಡಗು ರಾಯಚೂರು ಶಿವಮೊಗ್ಗ ಉಡುಪಿ ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳ 3400 ಸ್ವಯಂ ಸೇವಕರು ಆಪದ್ ಮಿತ್ರದಡಿ ಆಯ್ಕೆಯಾಗಿದ್ದಾರೆ.

12 ದಿನಗಳ ಕಾಲ ತರಬೇತಿ ಪಡೆದಿದ್ದಕ್ಕಾಗಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಮತ್ತು ಗುರುತಿನ ಚೀಟಿ ನೀಡಲಾಗಿದೆ. ಉಳಿದಂತೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ
ಗೋಪಾಲ ನಾಯ್ಕ ಶಿರಸಿ, ಆಪದ್ ಮಿತ್ರ ಸ್ವಯಂಸೇವಕ
ಆಪದ್ ಮಿತ್ರ ಕಿಟ್ ಪೂರೈಸುವುದು ಕೇಂದ್ರದ ಜವಾಬ್ದಾರಿ. ಯಾರಿಗೆ ಗುತ್ತಿಗೆ ನೀಡುತ್ತಾರೋ ಅವರು ಪೂರೈಸಬೇಕು. ಈಗಾಗಲೇ ಜೀವವಿಮೆ ಘೋಷಿಸಲಾಗಿದೆ. ಕಿಟ್ ಟೆಂಡರ್ ಕರೆದ ನಂತರವಷ್ಟೇ ಪೂರೈಕೆ ನಡೆಯಲಿದೆ.
ಮಂಜುನಾಥ ಸಾಲಿ, ಅಗ್ನಿಶಾಮಕ ದಳದ ವಿಭಾಗೀಯ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT