ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಟ್ಯಾಂಕರ್ ನೀರಿಗೆ ಮೊರೆ ಹೋದ ರೈತ

Published 1 ಮಾರ್ಚ್ 2024, 5:38 IST
Last Updated 1 ಮಾರ್ಚ್ 2024, 5:38 IST
ಅಕ್ಷರ ಗಾತ್ರ

ಶಿರಸಿ: ವರದಾ ನದಿಗೆ ನಿರ್ಮಿಸಿರುವ ಬಾಂದಾರಗಳಲ್ಲಿ ಇರುವ ಅಲ್ಪಸ್ವಲ್ಪ ನೀರು ಹತ್ತಾರು ಟ್ಯಾಂಕರ್‌ಗಳ ಮೂಲಕ ಕೃಷಿಕರ ಜಮೀನಿಗೆ ಸೇರುತ್ತಿದೆ. ಉಚಿತವಾಗಿ ಸಿಗುವ ನೀರನ್ನು ಅಸಹಾಯಕ ಸ್ಥಿತಿಯಲ್ಲಿರುವ ರೈತರಿಗೆ ಸಾವಿರಾರು ರೂಪಾಯಿಗೆ ಮಾರಿ ಟ್ಯಾಂಕರ್ ಮಾಲಕರು ಜೇಬು ತುಂಬಿಕೊಳ್ಳುತ್ತಿದ್ದಾರೆ.

ಪ್ರತಿವರ್ಷ ಬೇಸಿಗೆ ಅಂತ್ಯದಲ್ಲಿ ಎದುರಾಗುತ್ತಿದ್ದ ಜಲಕ್ಷಾಮ ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ ಅಂತ್ಯದಲ್ಲಿಯೇ ಬನವಾಸಿ ಭಾಗದ ರೈತರ ನಿದ್ದೆಗೆಡಿಸಿದೆ. ಮಳೆ ಕೊರತೆಯ ಕಾರಣಕ್ಕೆ ಅಲ್ಪಾವಧಿ ಬೆಳೆಗಳ ನಷ್ಟ ಅನುಭವಿಸಿದ್ದ ರೈತಾಪಿ ಸಮುದಾಯ ಈಗ ದೀರ್ಘಾವಧಿ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಹೇಗಾದರೂ ಮಾಡಿ ತಮ್ಮ ಫಸಲನ್ನು ಪಡೆಯುವ ಜತೆ ನೀರು ಖರೀದಿಸಿ ಟ್ಯಾಂಕರ್ ಮೂಲಕ ಬೆಳೆಗಳಿಗೆ ಉಣಿಸಲು ಮುಂದಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಟ್ಯಾಂಕರ್ ಮಾಲಕರು, ವರದಾ ನದಿಯ ಬಾಂದಾರ ಸಮೀಪದ ನೀರನ್ನು ಟ್ಯಾಂಕರ್‌ಗೆ ತುಂಬಿ ರೈತರಿಗೆ ಮಾರುತ್ತಿದ್ದಾರೆ. 

‘ಬೋರ್‌ವೆಲ್‌ಗಳು ಕೈಕೊಟ್ಟ ರೈತರು ವಿಧಿಯಿಲ್ಲದೇ ಬೆಳೆ ಕಾಪಾಡಿಕೊಳ್ಳಲು ಸಾಲ-ಸೋಲ ಮಾಡಿ ಟ್ಯಾಂಕರ್‌ ನೀರು ಖರೀದಿಸಿ ಹಾಕುತ್ತಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ 2500 ಹೆಕ್ಟೇರ್ ಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ತೋಟವಿದೆ. ಶೇ.30ಕ್ಕೂ ಹೆಚ್ಚು ಭಾಗದಲ್ಲಿ ರೈತರು ನೀರಿನ ಟ್ಯಾಂಕರ್ ಅವಲಂಬಿಸಿದ್ದಾರೆ. ನಮ್ಮಲ್ಲಿರುವ ಟ್ಯಾಂಕರ್‌ ತೆಗೆದುಕೊಂಡು ಹೋದರೆ ₹300 ವೆಚ್ಚವಾಗುತ್ತದೆ. ಕೆಲ ರೈತರು ಸ್ವಂತ ಟ್ರ್ಯಾಕ್ಟರ್ ನಲ್ಲಿ ಟ್ಯಾಂಕ್ ಇಟ್ಟುಕೊಂಡು ಬೋರ್‌ವೆಲ್‌ ಇರುವ ರೈತರಿಗೆ ಹಣ ನೀಡಿ ನೀರು ತುಂಬಿಕೊಂಡು ಬಂದು ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಆದರೆ, ಬಾಡಿಗೆ ಟ್ಯಾಂಕರ್ ಆದರೆ ₹800ರಿಂದ ₹1 ಸಾವಿರದವರೆಗೆ ದರವಿದೆ. ಅವರು ವರದಾ ನದಿಯ ಬಾಂದಾರ ಬಳಿಯಿಂದ ನೀರು ತರುತ್ತಾರೆ‘ ಎಂದು ಹೇಳಿದರು. 

‘ವರದಾ ನದಿಗೆ ನಿರ್ಮಿಸಿರುವ ಬಾಂದಾರಗಳ ಮೇಲ್ಭಾಗದ ಗುಂಡಿಗಳಲ್ಲಿ ಇರುವ ನೀರನ್ನು ಪಂಪ್ ಮೂಲಕ ಟ್ಯಾಂಕರ್‌‍ಗೆ ತುಂಬಿಸಿಕೊಳ್ಳುವ ಟ್ಯಾಂಕರ್ ಮಾಲಕರು ಅದನ್ನು ಬೇಡಿಕೆಗೆ ಅನುಗುಣವಾಗಿ ವಿತರಿಸುತ್ತಿದ್ದಾರೆ. ನೀರು ಕೊಂಡೊಯ್ಯುವ ದೂರ ಹೆಚ್ಚಿದರೆ ಬಾಡಿಗೆ ದರವೂ ಹೆಚ್ಚು. ನಿತ್ಯ 25ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ ನಿರಂತರವಾಗಿ ನೀರು ಮಾರಾಟ ನಡೆದಿದೆ. ಇದೇ ನೀರನ್ನು ಕುಡಿಯುವ ನೀರಿನ ಬೇಡಿಕೆ ಸಲ್ಲಿಸುವ ಗ್ರಾಹಕರಿಗೂ ಮಾರಾಟ ಮಾಡಲಾಗುತ್ತಿದೆ‘ ಎಂದು ಸ್ಥಳಿಕರೊಬ್ಬರು ಮಾಹಿತಿ ಹಂಚಿಕೊಂಡರು.

ಅಡಿಕೆ ಗಿಡ ಮರ ಒಣಗಿ ಹೋದರೆ ಮತ್ತೆ ಬೆಳೆಯಲು ನಾಲ್ಕಾರು ವರ್ಷ ಶ್ರಮ ಪಡಬೇಕಾಗುತ್ತದೆ. ಈ ಕಾರಣ ಕಷ್ಟ ಎನಿಸಿದರೂ ನೀರು ಖರೀದಿಸಿ ಟ್ಯಾಂಕರ್‌ ಮೂಲಕ ಹಾಕುತ್ತಿದ್ದಾರೆ.  ಇದು ಅನಿವಾರ್ಯವಾಗಿ ಟ್ಯಾಂಕರ್ ನೀರು ಅವಲಂಬಿಸುವಂತೆ ಮಾಡಿದೆ.
- ಅನೀಲ ಗೌಡ ಬನವಾಸಿ, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT