ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮಂಕಾಳ ವೈದ್ಯ, ಮಾಜಿ ಸಚಿವ ದೇಶಪಾಂಡೆ ನಡುವೆ ಶೀತಲ ಸಮರ

Published 21 ಡಿಸೆಂಬರ್ 2023, 7:08 IST
Last Updated 21 ಡಿಸೆಂಬರ್ 2023, 7:08 IST
ಅಕ್ಷರ ಗಾತ್ರ

ಕಾರವಾರ: ಅನಿರೀಕ್ಷಿತ ರಾಜಕೀಯ ಬೆಳವಣಿಗೆಯ ಪರಿಣಾಮವಾಗಿ ಸಚಿವ ಸ್ಥಾನದ ಅವಕಾಶ ಕಳೆದುಕೊಂಡ ಹಳಿಯಾಳದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮಂಕಾಳ ವೈದ್ಯ ನಡುವೆ ಶೀತಲ ಸಮರ ಏರ್ಪಟ್ಟಿದೆ ಎಂಬ ವದಂತಿಗೆ ಇಬ್ಬರ ವರ್ತನೆಗಳು ಪುಷ್ಟಿ ನೀಡುತ್ತಿದೆ.

ಕಳೆದ ಮೇ 26 ರಂದು ರಾಜ್ಯ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮಂಕಾಳ ವೈದ್ಯ ಅವರು ಅಧಿಕಾರ ದೊರೆತು ಏಳು ತಿಂಗಳು ಕಳೆದರೂ ಹಳಿಯಾಳ ಕ್ಷೇತ್ರಕ್ಕೆ ಇನ್ನೂ ಕಾಲಿಟ್ಟಿಲ್ಲ. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಪಾಲ್ಗೊಳ್ಳುತ್ತಿಲ್ಲ. ದೇಶಪಾಂಡೆ 9 ಬಾರಿ ಶಾಸಕರಾಗಿದ್ದರೆ, ವೈದ್ಯ ಎರಡನೇ ಬಾರಿ ಶಾಸಕರಾಗಿದ್ದಾರೆ.

ಸಚಿವ ಮಂಕಾಳ ವೈದ್ಯ ಅವರು ಏಳು ತಿಂಗಳ ಅವಧಿಯಲ್ಲಿ ಜಿಲ್ಲೆಯ 9 ತಾಲ್ಲೂಕುಗಳಿಗೂ ಭೇಟಿ ನೀಡಿದ್ದಾರೆ. ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯನ್ನೂ ನಡೆಸಿದ್ದಾರೆ. ಆದರೆ, ಆರ್.ವಿ.ದೇಶಪಾಂಡೆ ಶಾಸಕರಾಗಿರುವ ಹಳಿಯಾಳ, ದಾಂಡೇಲಿ, ಜೊಯಿಡಾ ತಾಲ್ಲೂಕಿನ ವ್ಯಾಪ್ತಿಯ ಯಾವುದೇ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿಲ್ಲ. ಅಲ್ಲದೆ ಈ ತಾಲ್ಲೂಕುಗಳ ಪ್ರಗತಿ ಪರಿಶೀಲನೆ ಸಭೆಯನ್ನು ಪ್ರತ್ಯೇಕವಾಗಿ ನಡೆಸಿಲ್ಲ.

‘ಸಚಿವರಾದ ಬಳಿಕ ಜು.15 ರಂದು ಮಂಕಾಳ ವೈದ್ಯ ಅವರು ಮೊದಲ ಕೆಡಿಪಿ ಸಭೆ ಕರೆದಿದ್ದರು. ಸಭೆಯಲ್ಲಿ ಪಾಲ್ಗೊಳ್ಳಲು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮುನ್ನಾದಿನವೇ ಕಾರವಾರಕ್ಕೆ ಬಂದಿದ್ದರು. ಮುನ್ನಾದಿನ ರಾತ್ರಿ ಏಕಾಏಕಿ ಸಭೆ ಮುಂದೂಡುವ ನಿರ್ಣಯವಾಗಿತ್ತು. ಇದರಿಂದ ಹಿರಿಯ ಶಾಸಕ ದೇಶಪಾಂಡೆ ಅವರಿಗೆ ಬೇಸರ ಉಂಟಾಗಿತ್ತು’ ಎಂದು ಕಾಂಗ್ರೆಸ್‍ನ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.

‘ಆರ್.ವಿ.ದೇಶಪಾಂಡೆ ಎರಡು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದರು. ಈ ಬಾರಿ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಬೇಸರ ಸಹಜವಾಗಿಯೇ ಇದ್ದಿರಬಹುದು. ಮಂಕಾಳ ವೈದ್ಯ ಸಚಿವರಾದರೂ ದೇಶಪಾಂಡೆ ಅವರನ್ನು ವಿಶ್ವಾಸಕ್ಕೆ ಪಡೆಯದೆ ಆಡಳಿತ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ’ ಎಂದೂ ಹೇಳಿದರು.

ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ
ಹಳಿಯಾಳ ಕ್ಷೇತ್ರದ ಶಾಸಕರು ಹಿರಿಯ ನಾಯಕರು. ಉತ್ತಮ ಕೆಲಸ ಮಾಡಿದ್ದಕ್ಕೆ 9 ಬಾರಿ ಗೆದ್ದಿದ್ದಾರೆ. ಅಲ್ಲಿನ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳುವ ಸಾಮರ್ಥ್ಯ ಇರುವ ಕಾರಣ ಅಲ್ಲಿಗೆ ನಾನು ಹೋಗಲೇಬೇಕಾದ ಅನಿವಾರ್ಯತೆ ಇಲ್ಲ.
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ಯಾವುದೇ ಸಚಿವರು ಕ್ಷೇತ್ರಕ್ಕೆ ಬರಲು ಸದಾ ಸ್ವಾಗತವಿದೆ. ಇದಕ್ಕೆ ಉಸ್ತುವಾರಿ ಸಚಿವರು ಹೊರತಾಗಿಲ್ಲ. ಕ್ಷೇತ್ರದ ಅಭಿವೃದ್ಧಿಯಷ್ಟೆ ನನಗೆ ಮುಖ್ಯ.
ಆರ್.ವಿ.ದೇಶಪಾಂಡೆ ಹಳಿಯಾಳ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT