ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳ್ಗಿಚ್ಚು ತಡೆಗೆ ‘ಬೆಂಕಿ ರೇಖೆ’

ಅರಣ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ; ಹೆಚ್ಚು ಕಡೆಗಳಲ್ಲಿ ನಿರ್ಮಾಣ
ರಾಜೇಂದ್ರ ಹೆಗಡೆ
Published 14 ಫೆಬ್ರುವರಿ 2024, 5:16 IST
Last Updated 14 ಫೆಬ್ರುವರಿ 2024, 5:16 IST
ಅಕ್ಷರ ಗಾತ್ರ

ಶಿರಸಿ: ಮಳೆ ಕೊರತೆ, ಬರದ ಸನ್ನಿವೇಶದಲ್ಲಿ ಉಂಟಾಗುವ ಕಾಳ್ಗಿಚ್ಚಿನಿಂದ ವನ್ಯ ಸಂಪತ್ತಿನ ರಕ್ಷಣೆಗೆ ಅರಣ್ಯ ಇಲಾಖೆ ಅವಧಿಗೂ ಮುನ್ನ ಹಿಂದೆಂದಿಗಿಂತಲೂ ಹೆಚ್ಚು ಕಡೆಗಳಲ್ಲಿ ಬೆಂಕಿರೇಖೆ ನಿರ್ಮಿಸಿದೆ.

ಪ್ರಸಕ್ತ ವರ್ಷ ಉತ್ತರ ಕನ್ನಡ ಜಿಲ್ಲೆಯ 11 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕಳೆದೆರಡು ತಿಂಗಳಿನಿಂದ ಅರಣ್ಯ ಪ್ರದೇಶದಲ್ಲಿಯೂ ನೀರಿನ ಕೊರತೆ ಕಾಡತೊಡಗಿದೆ. ಹೆಚ್ಚು ತ್ತಿರುವ ಉಷ್ಣಾಂಶದಿಂದ ಕಾಡಿನ ಒಳಗೆ ಒಣ ತರಗೆಲೆಗಳ ಪ್ರಮಾಣ ಹೆಚ್ಚಿದೆ. ಜಾನುವಾರುಗಳನ್ನು ಮೇಯಲು ಬಿಡುವ ಪ್ರಮಾಣವೂ ಇಳಿಕೆಯಾಗಿದ್ದು, ಕಾಡು ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹುಲ್ಲು ಒಣಗಿ ನಿಂತಿದೆ. ಇದು ಕಾಳ್ಗಿಚ್ಚಿನ ಕಾರಣವಾಗುವ ಸಾಧ್ಯತೆಯಿದೆ.

‘ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬರದ ಕಾರಣಕ್ಕೆ ಕಾಡ್ಗಿಚ್ಚಿನ ಪ್ರಕರಣ ಹೆಚ್ಚುವ ಅಪಾಯವಿದೆ. ಬಿಸಿಲಿನ ಝಳವೂ ಹೆಚ್ಚುತ್ತಿದ್ದು, ಬೆಂಕಿ ಅವಘಡಗಳಿಗೆ ಪೂರಕ ವಾತಾವರಣ ಸೃಷ್ಟಿಸುತ್ತಿದೆ. ಹೀಗಾಗಿ, ಡಿಸೆಂಬರ್ ತಿಂಗಳಿನಿಂದಲೇ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ 5 ಸಾವಿರ ಕಿ.ಮೀ.ಗೂ ಹೆಚ್ಚು ವ್ಯಾಪ್ತಿಯಲ್ಲಿ ಬೆಂಕಿರೇಖೆ ರಚಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 25ರಷ್ಟು ಹೆಚ್ಚುವರಿ ಪ್ರದೇಶದಲ್ಲಿ ರೇಖೆ ಮಾಡಲಾಗಿದೆ. ಇವುಗಳನ್ನು ಪದೇ ಪದೇ ಪರಿಶೀಲಿಸಲಾಗುತ್ತಿದೆ’ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. 

‘ಅರಣ್ಯ ವೀಕ್ಷಕರ ಮೂಲಕ ನಿರಂತರವಾಗಿ ಬೆಂಕಿ ರೇಖೆ ರಚಿಸಲಾಗಿದ್ದು, ಫೈರ್ ವಾಚರ್ ಗಳನ್ನೂ ನೇಮಿಸಿಕೊಳ್ಳಲಾಗಿದೆ. ಫೈರ್ ಅಲರ್ಟ್ ತಂತ್ರಜ್ಞಾನದ ಮೂಲಕ ಈ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಸ್ಥಳಗಳಲ್ಲಿ ಜೆಸಿಬಿ ಬಳಸಿ ಬೆಂಕಿ ರೇಖೆ ರಚಿಸಲಾಗುತ್ತಿದೆ. ಬೆಂಕಿ ತಗಲುವ ಸಾಧ್ಯತೆ ಇರುವ ಕಡೆ ಒಣಗಿಡ, ಹುಲ್ಲು, ಪೊದೆಗಳನ್ನು ತೆರವುಗೊಳಿಸಲಾಗುತ್ತಿದೆ. ಶೇ.80ರಷ್ಟು ಕಡೆಗಳಲ್ಲಿ ಬೆಂಕಿರೇಖೆ ನಿರ್ಮಿಸಲಾಗಿದೆ. ಅರಣ್ಯದ ಸುತ್ತಲಿನ ದಾರಿಗಳನ್ನು ಸ್ವಚ್ಛತೆಗೊಳಿಲಾಗಿದೆ. ಶಿರಸಿ ವಿಭಾಗದಲ್ಲಿ ಒಂದು ಸಾವಿರ ಕಿ.ಮೀಗೂ ಹೆಚ್ಚಿನ ಪ್ರದೇಶದಲ್ಲಿ ರೇಖೆ ರಚಿಸಲಾಗಿದೆ’ ಎಂದು ಶಿರಸಿ ಡಿಸಿಎಫ್ ಜಿ.ಆರ್.ಅಜ್ಜಯ್ಯ ಮಾಹಿತಿ ನೀಡಿದರು. 

‘ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕ, ಜಾಗೃತಿ ಸಭೆ ಮತ್ತು ಕರಪತ್ರಗಳ ಮೂಲಕ ಅರಣ್ಯದಂಚಿನ ನಿವಾಸಿಗಳು ವಹಿಸಬೇಕಾದ ಎಚ್ಚರಿಕೆಗಳ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ಹೇಳಿದರು.

ಬೆಂಕಿ ಆರಿಸಲು ಸಿಬ್ಬಂದಿ ನೇಮಿಸಲಾಗಿದೆ. ಕಾಳ್ಗಿಚ್ಚು ತಡೆಗೆ ಬೆಂಕಿ ರೇಖೆಗಳ ನಿರ್ಮಾಣ ಮಾಡಲಾಗುತ್ತಿದ್ದು ಹೆಚ್ಚಿನ ಹಾನಿ ತಡೆಗೆ ಈ ವ್ಯವಸ್ಥೆ ಅನುಕೂಲವಾಗಿದೆ
ಜಿ.ಆರ್.ಅಜ್ಜಯ್ಯ, ಡಿ.ಸಿ.ಎಫ್., ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT