ಶಿರಸಿ: ಸೇತುವೆ ಕಾಮಗಾರಿ ತಕ್ಷಣ ಮಾಡಿಸಿ, ಇಲ್ಲವಾದರೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತೆವೆ ಎಂಬ ಬ್ಯಾನರ್ ಕಟ್ಟಿ ತಾಲ್ಲೂಕಿನ ಅಜ್ಜರಣಿ ಹಾಗೂ ಮತ್ತುಗುಣಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಪೂರ್ವ ಭಾಗ ಬನವಾಸಿಯ ಈ ಎರಡು ಗ್ರಾಮಗಳು ಒಮ್ಮತದ ತೀರ್ಮಾನ ಕೈಗೊಂಡಿವೆ. ಗುಡ್ನಾಪುರ ಗ್ರಾ.ಪಂ.ಗೆ ಒಳಪಡುವ ಈ ಗ್ರಾಮಗಳು ಮಳೆಗಾಲದಲ್ಲಿ ನರಕಯಾತನೆ ಅನುಭವಿಸುತ್ತವೆ. ಇಲ್ಲಿಗೆ ಸಮೀಪದ ವರದಾ ನದಿಯ ಹಿನ್ನಿರಿಗೆ ಮಾಡಿದ್ದ ಪುರಾತನ ಸೇತುವೆ ಸಂಪೂರ್ಣವಾಗಿ ಹಾಳಾಗಿತ್ತು. 3 ವರ್ಷಗಳ ಹಿಂದೆ ಅಂದಾಜು ₹3 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ಭೂಮಿ ಪೂಜೆ ನೆರವೇರಿಸಿದ್ದರು. ಗುತ್ತಿಗೆದಾರರು ಹಳೆಯ ಸೇತುವೆ ಕೆಡವಿ ಕಾಮಗಾರಿ ಆರಂಭಿಸಿದ ಕೆಲವೇ ದಿನಗಳಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಕಳೆದ ಎರಡು ವರ್ಷದ ಮಳೆಗಾಲದಲ್ಲಿ ಈ ಎರಡು ಊರಿನ ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸಿದರು. ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ.
ಎರಡು ಬಾರಿ ಜಿಲ್ಲಾಧಿಕಾರಿ ಬಂದು ಭರವಸೆ ನೀಡಿದ್ದು ಬಿಟ್ಟರೆ ಕಾಮಗಾರಿ ಆಗಲಿಲ್ಲ. ಸುಮಾರು 300 ಮನೆಗಳಿರುವ ಊರಿಗೆ ಸಮರ್ಪಕ ಸೇತುವೆ ಇಲ್ಲದೇ ಶಾಲಾ ಮಕ್ಕಳು, ವೃದ್ದರು, ಅನಾರೋಗ್ಯ ಪೀಡಿತರು, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಬೇಸತ್ತು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸೇತುವೆ ಕಾಮಗಾರಿ ಆರಂಭಿಸದೇ ಇದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥ ಬಸವರಾಜ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.