ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಕ್‌ ರ‍್ಯಾಲಿ ನಡೆಸಿದ ಕಾರ್ಯಕರ್ತರು, ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

ಮತ್ತೊಮ್ಮೆ ಮೋದಿ: ಹೊಸಪೇಟೆಯಲ್ಲಿ ವಿಜಯೋತ್ಸವ
Published 9 ಜೂನ್ 2024, 15:34 IST
Last Updated 9 ಜೂನ್ 2024, 15:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿ ಕುಣಿದಾಡಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ದೊಡ್ಡ ಪರದೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಅವರು ಪ್ರಮಾಣವಚನ ಸ್ವೀಕರಿಸಲು ವೇದಿಕೆಗೆ ಬರುತ್ತಿದ್ದಂತೆಯೇ ಸಾಸಿವೆ ಕಾಳು ಬಿದ್ದರೂ ಕೇಳಿಸುವಂತಹ ಮೌನ ಆವರಿಸಿತು. ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು. 

ಬಿಜೆಪಿಯ ಪ್ರಚಾರದ ವೇಳೆ ಬಳಸಲಾಗಿದ್ದ ಹಾಡುಗಳನ್ನು ಹಾಕಿ ಡಿಜೆ ನೃತ್ಯ ಮಾಡಿದ ಕಾರ್ಯಕರ್ತರು ಪರಸ್ಪರ ಶುಭಾಶಯ ಕೋರಿದರು. ಪಕ್ಷದ ಕಚೇರಿಯಲ್ಲಿ ನೂರಾರು ಕಾರ್ಯಕರ್ತರು ತುಂಬಿದ್ದರು. ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಇದಕ್ಕೆ ಮೊದಲು ನಗರದ ನಗರದ ಭಟ್ರಹಳ್ಳಿ ಆಂಜನೇಯ ದೇವಾಲಯದಿಂದ ಬೈಕ್‌ ರ‍್ಯಾಲಿ ಹಮ್ಮಿಕೊಳ್ಳಲಾಯಿತು. ಶ್ರೀಕೃಷ್ಣ ದೇವರಾಯ ವೃತ್ತ, ಹಂಪಿ ರಸ್ತೆ, ಮೂರಂಗಡಿ ಸರ್ಕಲ್‌, ಸಿದ್ಧಿವಿನಾಯಕ ವೃತ್ತ, ಬಸ್‌ ನಿಲ್ದಾಣ, ಪುನೀತ್ ರಾಜ್‌ಕುಮಾರ್ ವೃತ್ತ, ನಗರಸಭೆ, ಉದ್ಯೋಗ ಪೆಟ್ರೋಲ್‌ ಬಂಕ್‌, ಮದಕರಿನಾಯಕ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿದ ರ‍್ಯಾಲಿ, ಚಿತ್ತವಾಡ್ಗಿ ರಸ್ತೆ ಮೂಲಕ ಬಿಜೆಪಿ ಕಚೇರಿಗೆ ಬಂದು ಸೇರಿತು. ಪಟಾಕಿ, ಬಾಣ ಬಿರುಸುಗಳೊಂದಿಗೆ ಇಡೀ ನಗರ ಸಂಭ್ರಮಿಸಿತು. 

ಪಕ್ಷದ ಮುಖಂಡರಾದ ಸಿದ್ಧಾರ್ಥ ಸಿಂಗ್, ಅಯ್ಯಾಳಿ ತಿಮ್ಮಪ್ಪ, ಅಶೋಕ್‌ ಜೀರೆ, ಕೆ.ಎಸ್‌.ರಾಘವೇಂದ್ರ, ಶಂಕರ್ ಮೇಟಿ, ಬಸವರಾಜ ನಾಲತ್ವಾಡ, ಸಂದೀಪ್ ಸಿಂಗ್ ಮೊದಲಾದವರು ಪಾಲ್ಗೊಂಡಿದ್ದರು.

ದುಗುಡ ಮರೆಸಿದ ಸಂಭ್ರಮ: ಲೋಕಸಭಾ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾದಾಗ ಹೊಸಪೇಟೆಯಲ್ಲಿ ಶೋಕದ ವಾತಾವರಣ ಇತ್ತು. ಏಕೆಂದರೆ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು 98 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್‌ನ ಇ.ತುಕಾರಾಂ ಅವರ ಎದುರು ಸೋಲುಂಡಿದ್ದರು. ಪಕ್ಷದ ಯಾವೊಬ್ಬ ನಾಯಕರೂ ಮುಖ ತೋರಿಸಲಾಗದೆ ಬೇಸರದಿಂದ ಕುಗ್ಗಿ ಹೋಗಿದ್ದರು. ಆದರೆ ಆ ‌ದುಃಖ ಸದ್ಯಕ್ಕೆ ಮರೆತುಹೋದ ರೀತಿಯಲ್ಲಿ ಭಾನುವಾರದ ಸಂಭ್ರಮಾಚರಣೆ ಕಾಣಿಸಿತು.

====

ಗಾಯದ ಮೇಲೆ ಬರೆ ಎಳೆದ ಎಂಎಲ್‌ಸಿ ಫಲಿತಾಂಶ

ಕಲ್ಯಾಣ ಕರ್ನಾಟಕ ಭಾಗದ ಐದೂ ಲೋಕಸಭಾ ಕ್ಷೇತ್ರಗಳೂ ಈ ಬಾರಿ ಕಾಂಗ್ರೆಸ್‌ಗೆ ಒಲಿದ ಕಾರಣ ವಿಜಯನಗರ ಭಾಗದಲ್ಲಿ ಬಿಜೆಪಿ ನಾಯಕರು ತಮ್ಮ ಧ್ವನಿಯನ್ನೇ ಕಳೆದುಕೊಂಡಿದ್ದರು. ಗಾಯದ ಮೇಲೆ ಬರೆ ಎಳೆದಂತೆ ವಿಧಾನ ಪರಿಷತ್‌ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರಿಗೆ ಸೋಲು ಉಂಟಾಯಿತು. ಮೇಲಿಂದ ಮೇಲೆ ಎದುರಾದ ಈ ಆಘಾತದಿಂದ ಸ್ವಲ್ಪ ಚೇತರಿಸಿಕೊಳ್ಳಲು ನೀಡಿದ ಗುಳಿಗೆಯ ರೀತಿಯಲ್ಲಿ ಪ್ರಧಾನಿ ಮೋದಿ ಪ್ರಮಾಣವಚನ ಕಾರ್ಯಕ್ರಮ ಕಾರ್ಯಕರ್ತರಿಗೆ ಒದಗಿಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT