ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ರಕ್ಷಣೆಗೆ ಟ್ಯಾಂಕರ್ ನೀರಿಗೆ ಮೊರೆ

ಮಳೆ ಕೊರತೆ: ಬರಿದಾದ ಕೆರೆಗಳು; ಬತ್ತುತ್ತಿವೆ ಬೋರ್‌ವೆಲ್‌: ಸಂಕಷ್ಟದಲ್ಲಿ ರೈತರು
ರಾಮಚಂದ್ರ ಎಂ ನಾಗತಿಕಟ್ಟೆ
Published 13 ಮಾರ್ಚ್ 2024, 5:18 IST
Last Updated 13 ಮಾರ್ಚ್ 2024, 5:18 IST
ಅಕ್ಷರ ಗಾತ್ರ

ಅರಸೀಕೆರೆ: ಮಳೆ ಕೊರತೆ, ಬಿಸಿಲ ಪ್ರಖರತೆಗೆ ಕೊಳವೆಬಾವಿ ಅಂತರ್ಜಲ ಮಟ್ಟ   ಕುಸಿಯುತ್ತಿದೆ. ನೀರಿನ ಕೊರತೆಯಿಂದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಹೋಬಳಿಯ ಕಂಚಿಕೆರೆ, ಅರಸೀಕೆರೆ, ಹೊಸಕೋಟೆ, ಉಚ್ಚಂಗಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.

ಚಟ್ನಿಹಳ್ಳಿ, ಅಣಜಿಗೆರೆ, ಪುಣಭಗಟ್ಟ ಪಂಚಾಯಿತಿ ವ್ಯಾಪ್ತಿಯ ರೈತರು ಲಕ್ಷಾಂತರ ಹಣ ಖರ್ಚು ಮಾಡಿ 600ರಿಂದ 700 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ಒಂದಿಂಚೂ ನೀರು ಇಲ್ಲದಂತಾಗಿದೆ. ಕೆಲ ಗ್ರಾಮಗಳಲ್ಲಿ ನೀರು ಸಿಕ್ಕರೂ ಒಂದೆರಡು ದಿನಗಳಲ್ಲಿ ಕೊಳವೆಬಾವಿ ಬತ್ತಿಹೋಗುತ್ತಿವೆ.

ಹಿರೇಮೆಗಳಗೆರೆ, ಲಕ್ಷ್ಮಿಪುರ, ಸಿಂಗ್ರಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲ ಗ್ರಾಮಗಳು ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟಿದ್ದರೂ ಮುಂದಿನ ದಿನಗಳಲ್ಲಿ ಸಮಸ್ಯೆ ಬಿಗಡಾಯಿಸುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.

ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಅನಿವಾರ್ಯವಾಗಿ ಟ್ಯಾಂಕರ್ ನೀರಿಗೆ ಮೊರೆ ಹೋಗುವಂತಾಗಿದೆ. ತೋಟದ ಪಕ್ಕದಲ್ಲಿ ಹೊಂಡಗಳನ್ನು ತೋಡಿ, ಒಂದು ಟ್ಯಾಂಕರ್‌ ನೀರಿಗೆ  ₹250ರಿಂದ ₹300 ಕೊಟ್ಟು ಖರೀದಿಸಿ ಶೇಖರಣೆ ಮಾಡುತ್ತಿದ್ದಾರೆ. ಹೀಗೆ ಶೇಖರಿಸಿದ ನೀರನ್ನು  ಡೀಸೆಲ್ ಮೋಟಾರ್, ವಿದ್ಯುತ್ ಬಳಸಿ ತೋಟಕ್ಕೆ ಹರಿಸುತ್ತಿದ್ದಾರೆ.

ಕೆಲ ರೈತರು ಭದ್ರಾ ಅಚ್ಚುಕಟ್ಟು ಪ್ರದೇಶದ ಚಿಕ್ಕಮೆಗಳಗೆರೆ, ಹಿರೇಮೆಗಳಗೆರೆ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಯಿಸಿ ಪೈಪ್‌ಲೈನ್ ಮೂಲಕ ಪೋತಲಕಟ್ಟೆ, ನಾಗತಿಕಟ್ಟೆ, ಫಣಿಯಾಪುರ ಭಾಗದ ಜಮೀನುಗಳಿಗೆ ನೀರು ಪೂರೈಸಿಕೊಳ್ಳುತ್ತಿದ್ದಾರೆ.

‘₹2 ಲಕ್ಷ ವೆಚ್ಚ ಮಾಡಿ ಟ್ಯಾಂಕರ್ ಮಾಡಿಸಲಾಗಿದೆ. ಅದರ ಮೂಲಕವೇ ತೋಟಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ನೀರಿಗಿಂತ ನೀರನ್ನು ತರಲು ಸಾಗಿಸುವ ಟ್ರಾಕ್ಟರ್ ಡೀಸೆಲ್ ವೆಚ್ಚವೇ ಅಧಿಕವಾಗಿದೆ. ಕೊಳವೆ ಬಾವಿ ಕೊರೆಸಿ ಕೈಸುಟ್ಟುಕೊಳ್ಳುವ ಬದಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ತೋಟ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಅಡಿಕೆ ಬೆಳೆಗಾರ ಲಿಂಗಯ್ಯ ಹೇಳಿದರು.

ಉಚ್ಚಂಗಿದುರ್ಗದ ರೈತ ಹನುಮಂತಪ್ಪ ಅವರು ಅಡಿಕೆ ತೋಟಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದು
ಉಚ್ಚಂಗಿದುರ್ಗದ ರೈತ ಹನುಮಂತಪ್ಪ ಅವರು ಅಡಿಕೆ ತೋಟಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದು
ಈ ಹಿಂದೆ 1500 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿತ್ತು. ಎರಡ್ಮೂರು ವರ್ಷಗಳಲ್ಲಿ 4500 ಎಕರೆಯಷ್ಟು ಏರಿಕೆ ಆಗಿದೆ. ಅಡಿಕೆ ಗಿಡಗಳಲ್ಲಿ ನೀರಿನ ಅವಶ್ಯಕತೆ ಹೆಚ್ಚಿದೆ
ಜಯಸಿಂಹ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ
ಮಳೆ ಕೊರತೆ ಬಿಸಿಲ ಬೇಗೆಗೆ ಅಡಿಕೆ ತೋಟ ಒಣಗುತ್ತಿದೆ. ನೀರಿಗಾಗಿ ಹೆಚ್ಚಿನ ಹಣ ಖರ್ಚು ಮಾಡಿಯಾದರೂ ಇಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದ ತೋಟ ಉಳಿಸಿಕೊಳ್ಳಬೇಕಿದೆ
ಬಿದ್ರಿ ಸುನಿಲ್ ಕುಮಾರ್, ಅಡಿಕೆ ಬೆಳೆಗಾರ ಕಂಚಿಕೆರೆ
ಕುಡಿಯುವ ನೀರು ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿದ್ದರೆ ಅಂತರ್ಜಲ ಮಟ್ಟ ಸುಸ್ಥಿರದಲ್ಲಿರುತ್ತಿತ್ತು. ಇನ್ನು ಮುಂದೆಯಾದರೂ ಸರ್ಕಾರ ಗಮನಹರಿಸಬೇಕಿದೆ
ಎಚ್.ಹನುಮಂತಪ್ಪ ಉಚ್ಚಂಗಿದುರ್ಗದ ರೈತ

ನೀರಿಲ್ಲದೆ ಬಣಗುಡುತ್ತಿವೆ ಕೆರೆ ಅರಸೀಕೆರೆ ಹೋಬಳಿ ವ್ಯಾಪ್ತಿಯ 11 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 21 ಕೆರೆಗಳಿವೆ. ಮಳೆ ಕೊರತೆಯಿಂದ ಅರಸೀಕೆರೆ ಗ್ರಾಮದ ಕೆರೆಗಳು ಹೊರತು ಪಡಿಸಿದರೆ ಬಹುತೇಕ ಕೆರೆಗಳು ನೀರಿಲ್ಲದೆ ಬಣಗುಡುತ್ತಿದೆ. ಕೆರೆಗಳು ಒಣಗಿದ್ದರಿಂದ ಕೊಳವೆಬಾವಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ 57 ಕೆರೆ ತುಂಬಿಸುವ ಯೋಜನೆಗಳು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೆ ಕೊಳವೆಬಾವಿ ಅಂತರ್ಜಲ ಮಟ್ಟ ಹೆಚ್ಚುತ್ತಿತ್ತು. ಜನ-ಜಾನುವಾರುಗಳ ಪರದಾಟ ತಪ್ಪುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಯೋಜನೆ ಸಾಕಾರದ ಆಶಾವಾದದಲ್ಲಿ ಈ ಭಾಗದ ಜನರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT