ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತೆ ಬದಲು ನೆತ್ತರು ಮಾತಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು...

ಜಾತಿ ಪದ್ಧತಿ, ಮೇಲು ಕೀಳು, ಶೋಷಣೆ, ಪ್ರಭುತ್ವದ ಕೌರ್ಯಕ್ಕೆ ಕಾವ್ಯಗಳ ಮುಲಾಮು
Last Updated 28 ಜನವರಿ 2023, 12:37 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ): ‘ದೇವರ ಬದಲು ಭಕ್ತರು ಮಾತನಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು, ಕವಿತೆಯ ಬದಲು ನೆತ್ತರು ಮಾತನಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು’

ಇದು ಬಾಗಲಕೋಟೆಯ ಕವಿ ಆರಿಫ್‌ ರಾಜ ಅವರ ‘ಈ ಶಹರಕ್ಕೆ ಬೆಂಕಿ ಬಿತ್ತು’ ಕವಿತೆಯ ಸಾಲುಗಳು. ‘ಹಂಪಿ ಉತ್ಸವ’ದ ಅಂಗವಾಗಿ ಜಿಲ್ಲಾಡಳಿತವು ಶನಿವಾರ ಇಲ್ಲಿನ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಅವರ ಕವಿತೆಯ ಸಾಲುಗಳು ಎಲ್ಲರನ್ನೂ ಯೋಚನೆಗೆ ಹಚ್ಚಿತು.

‌ಮುಖದ ಮೇಲೆ ಮುಖ ತೊಟ್ಟು ಓಡಾಡುವ ದೇವಮಾನವರೇ,
ಮನುಷ್ಯರ ಬದಲು ಮಹಾತ್ಮರು ಮಾತನಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು
ಹೀಗೆ ಸಮಕಾಲೀನ ಪರಿಸ್ಥಿತಿಯನ್ನು ತನ್ನ ಮೊನಚು, ವಿಡಂಬನಾತ್ಮಕ ಕಿರು ಕವಿತೆಯನ್ನು ಪ್ರಸ್ತುತಪಡಿಸಿದಾಗ ಅಲ್ಲಿದ್ದವರೂ ಚಪ್ಪಾಳೆಗಳ ಮೂಲಕ ಮೆಚ್ಚುಗೆ ಸೂಚಿಸಿದರು. ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ವಿವಿಧ ಭಾಗಗಳ ಕವಿಗಳು ಜಾತಿ ಪದ್ಧತಿ, ಮೇಲು ಕೀಳು, ಅಸಮಾನತೆ, ಶೋಷಣೆ, ಪ್ರಭುತ್ವದ ಕೌರ್ಯವನ್ನು ಪದಗಳ ಮೂಲಕ ವಿವರಿಸಿದರೆ, ಮತ್ತೆ ಕೆಲವರು ವಿಜಯನಗರದ ವೈಭವವನ್ನು ಕವನಗಳಲ್ಲಿ ಕಟ್ಟಿಕೊಟ್ಟರು. ಕೆಲವರು ಮುಕ್ತಕ, ಗಜಲ್‌, ಲಾವಣಿಗಳ ಮೂಲಕ ಕವಿತೆಗಳನ್ನು ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.

ಹೊಸಪೇಟೆಯ ಅಂಜಲಿ ಬೆಳಗಲ್‌ ಅವರ ‘ದೇಶವಾಸಿಗಳು ನಾವು’ ಕವನವು ಮಡುಗಟ್ಟಿದ ವ್ಯವಸ್ಥೆ ಮೇಲೆ ಬೆಳಕು ಚೆಲ್ಲಿತ್ತು. ಅದರಲ್ಲೂ ಅವರ ಮೊದಲೆರೆಡು ಸಾಲುಗಳು ಎಲ್ಲರ ಗಮನ ಸೆಳೆಯಿತು. ‘ನೀನು ಗುಂಡಿಟ್ಟು ಹೊಡೆದರೇನು, ನಾವು ದಂಡೆತ್ತಿ ಬರುತ್ತೇವೆ’ ಎಂದು ಗಟ್ಟಿ ದನಿಯಲ್ಲಿ ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು.

ರಾಯಚೂರಿನ ಚಿದಾನಂದ ಸಾಲಿ ಅವರ ‘ಬೇಡ’ ಕವಿತೆಯು ಮನಮುಟ್ಟಿತು. ‘ಆ ಊರ ಜನ ಬೇಡವೆಂದು ಸುತ್ತ ಗೋಡೆಯ ಕಟ್ಟಿಸಿದೆ. ನಮ್ಮೂರೊಳಗೆ ಇರುವ ಹೊಲಸು ಈಗ ಮೂಗಿಗೆ ತಟ್ಟುತ್ತಿದೆ. ಆ ಓಣಿಯ ಜನ ಬೇಡವೆಂದರೂ ದಿಗ್ಭಂಧನ ಹಾಕಿಸುತ್ತಿದೆ’ ಸಾಲುಗಳು, ಕಲಬುರಗಿಯ ವಿಕ್ರಮ ವಿಸಾಜಿ ಅವರು ವಾಚಿಸಿದ ‘ಸಮಗಾರ ಹರಳಯ್ಯ’ ಶೀರ್ಷಿಕೆಯ ಕವನದ ‘ಸೇಡಂ ರಸ್ತೆಯ ತಿರುವಿನಲ್ಲಿ ಕುಳಿತರು, ಹರಕು ಛತ್ರಿ ಹಿಡಿದುಕೊಂಡು’ ಸಾಲುಗಳು ವ್ಯವಸ್ಥೆ ಮೇಲೆ ಬೆಳಕು ಚೆಲ್ಲಿತು. ಬೆಂಗಳೂರಿನ ವಸಂತಕುಮಾರ ಎಂ. ಅವರು ‘ಮತಾಂಧ’ ಕವಿತೆಯಲ್ಲಿ ‘ನಾ ಹುಟ್ಟಿದ ಜಾತಿ, ನಿ ಹುಟ್ಟಿದ ಜಾತಿ’ ಸಾಲುಗಳು ಜಾತಿ ವ್ಯವಸ್ಥೆಯನ್ನು ಬಿಚ್ಚಿಟ್ಟಿತು.

ಹೊಸಪೇಟೆಯ ಗೃಹರಕ್ಷಕ ದಳದ ವಿ. ಪರಶುರಾಮ ಅವರು, ‘ಯಾವ ಕುಲ, ಯಾವ ಮತ’, ಮೈಸೂರಿನ ಸುಜಾತ ಅಕ್ಕಿ ಅವರು ‘ವಿಜಯನಗರ ಸಾಮ್ರಾಜ್ಞೆ’, ಮಂಗಳೂರಿನ ಅನುರಾಧ ಕುರುಂಜಿ–ವಾಸ್ತವ, ಹೊಸಪೇಟೆಯ ದಯಾನಂದ ಕಿನ್ನಾಳ್‌ ಅವರ ‘ಹಂಪಿ ಉತ್ಸವ’, ಬಳ್ಳಾರಿಯ ದಸ್ತಗಿರಿ ಸಾಬ್‌ ದಿನ್ನಿ ಗಜಲ್‌ ಹೇಳಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ ಗೋವಿಂದ ಅವರು ‘ಮರೆಯದ ಪ್ರಿಯತಮೆ’ ಪ್ರೇಮ ಕಾವ್ಯ ವಾಚಿಸಿದರು.

ಚಿತ್ರದುರ್ಗದ ತಾರಿಣಿ ಶುಭದಾಯಿನಿ ಅವರು ‘ಮಕ್ಕಳು ನೆಟ್ಟಗೆ ಮುರಿದದ್ದು’, ಕಮಲಾಪುರದ ವೆಂಕಟೇಶ ಬಡಿಗೇರ್‌, ‘ಬಲಿತ ಹೂಮಳೆ’, ಹೊಸಪೇಟೆಯ ಶ್ರೀಶೈಲ ನಾಗರಾಜ ಮುಕ್ತ ಹೇಳಿದರು. ಬನಹಟ್ಟಿಯ ಬಿ.ಆರ್‌. ಪೊಲೀಸ್‌ ಪಾಟೀಲ್‌ ಅವರು ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ನಂತರ ನಡೆದ ಘಟನಾವಳಿಗಳನ್ನು ಲಾವಣಿಯಲ್ಲಿ ವಿವರಿಸಿದ್ದು ಎಲ್ಲರ ಗಮನ ಸೆಳೆಯಿತು. ಹಾವೇರಿಯ ಅರುಣ್‌ ಜೋಳದಕೂಡ್ಲಿಗಿ, ‘ಅಬ್ಬಬ್ಬಾ’ ಹೆಸರಿನ ಕವನದ ಮೂಲಕ ಸಮಕಾಲೀನ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲಿದರು.

ಹೊಸಪೇಟೆಯ ಶೋಭಾ ಶಂಕರಾನಂದ, ಕಮಲಾಪುರದ ರಾಘವೇಂದ್ರ ಕುಪ್ಪೇಲೂರು, ಗಂಗಾವತಿಯ ಜಾಜಿ ದೇವೇಂದ್ರಪ್ಪ, ಅಂಬಳಿಯ ಬಿ. ಕಲ್ಲನಗೌಡ, ಹೊಸಪೇಟೆಯ ಉಮಾಮಹೇಶ್ವರ, ನಾಗರಾಜ ಪತ್ತಾರ, ಯಾದಗಿರಿಯ ಸಿದ್ದರಾಮ ಹೊನ್ಕಲ್‌, ಕೊಪ್ಪಳದ ರಂಗನಾಥ ಆರನಕಟ್ಟಿ ಕವನ ವಾಚನ ಮಾಡಿದರು. ಕವಿಗೋಷ್ಠಿ ಸಂಚಾಲಕ ಕೆ. ರವೀಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೀರ್‌ ಬಾಷ, ಲಕ್ಷ್ಮಣರಾವ್‌ ಗೈರು

‘ಸರ್ಕಾರಿ ಪ್ರಾಯೋಜಿತ ಉತ್ಸವದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ’ ಎಂದು ಪೀರ್‌ ಬಾಷ ಅವರು ಕವಿಗೋಷ್ಠಿಗೂ ಮುಂಚೆಯೇ ತಿಳಿಸಿ ಹೊರಗುಳಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಿದ್ದ ಹಿರಿಯ ಕವಿ ಬಿ.ಆರ್‌. ಲಕ್ಷ್ಮಣರಾವ್‌ ಕೂಡ ಬರಲಿಲ್ಲ. ‘ಜ. 28ರಂದು ಬೇರೊಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡಿರುವುದರಿಂದ ಬರಲಾಗುವುದಿಲ್ಲ ಎಂದು ಆಯೋಜಕರಿಗೆ ತಿಳಿಸಿದ್ದೆ. ಹೀಗಿದ್ದರೂ ಅವರು ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಿಸಿದ್ದಾರೆ’ ಎಂದು ಲಕ್ಷ್ಮಣರಾವ್‌ ಸ್ಪಷ್ಟನೆ ನೀಡಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಕಲಬುರಗಿಯ ಎಚ್‌.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು.

ಪ್ರಭುತ್ವವನ್ನು ಪ್ರಶ್ನಿಸಲು ಹಿಂದೇಟು ಏಕೆ–ಮಲ್ಲಿಕಾ ಘಂಟಿ

‘ಕವಿಗಳು ನಿರಂತರವಾಗಿ ಪ್ರತಿಪಕ್ಷದ ಕೆಲಸ ಮಾಡಬೇಕು. ಪಂಪನ ಕಾಲದಲ್ಲಿ ಆರಂಭಗೊಂಡ ಪ್ರಶ್ನಿಸುವ ಮನೋಧರ್ಮ ಇಂದು ಕೂಡ ಮುಂದುವರೆಯಬೇಕು. ಲೋಕಸತ್ಯಗಳನ್ನು ಪ್ರಶ್ನಿಸಲು ಕವಿಗಳಿಗೆ ಹಿಂಜರಿಕೆ ಇರಬಾರದು. ಅದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು’ ಎಂದು ಕವಿಗೋಷ್ಠಿ ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಹೇಳಿದರು.

ನವ್ಯದ ಲೇಖಕರು ಬಂದ ನಂತರ ಕಾವ್ಯಲೋಕದಲ್ಲಿ ಸಂಕೀರ್ಣತೆ ಬಂದಿದೆ. ಅದು ಈಗಲೂ ಮುಂದುವರೆದಿದೆ. ಸಾಹಿತ್ಯ ಜನರ ತಲುಪಬೇಕು. ಜೊತೆಗೆ ಪ್ರಭುತ್ವವನ್ನು ಸತತವಾಗಿ ಪ್ರಶ್ನಿಸಬೇಕು. ಲೇಖಕರು ಸಂಕೀರ್ಣ ಸ್ಥಿತಿಯಲ್ಲಿದ್ದಾರೆ. ಅದರಿಂದ ಹೊರಬರಬೇಕಿದೆ. ಸರ್ಕಾರದ ವಿರುದ್ಧ ಏನು ಮಾತಾಡಿದರೆ ಏನಾಗುತ್ತದೆ ಎಂಬ ಆತಂಕ ಆವರಿಸಿದೆ. ಸಮಾಜದಲ್ಲಿ ನಿರ್ಲಿಪ್ತತತೆ ಬಂದಿರುವುದರಿಂದ ಸಾಮೂಹಿಕ ಹೋರಾಟಗಳೇ ಕಾಣಿಸುತ್ತಿಲ್ಲ ಎಂದು ವಿಷಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT