ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಷ್ಟಾರ್ಥ ಪೂರೈಸುವ ಕೊಟ್ಟೂರೇಶ್ವರ

ಗುರುಪ್ರಸಾದ್ ಎಸ್.ಎಂ.
Published 4 ಮಾರ್ಚ್ 2024, 5:28 IST
Last Updated 4 ಮಾರ್ಚ್ 2024, 5:28 IST
ಅಕ್ಷರ ಗಾತ್ರ

ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರರು ಮಹಾನ್ ಪವಾಡ ಪುರುಷರು. ಬೇಡಿಬಂದ ಭಕ್ತರನ್ನು, ನೊಂದವರನ್ನು, ಸರ್ವಧರ್ಮೀಯರನ್ನು ರಕ್ಷಿಸುವ, ಮಾನವ ಧರ್ಮದ ಶ್ರೇಷ್ಠತೆಯ ಸಂದೇಶ ಸಾರಿದ ಶಿವಯೋಗಿ. ವೀರಶೈವ ಧರ್ಮದ ತತ್ವ ಮತ್ತು ಸಿದ್ಧಾಂತಗಳನ್ನು ಸಮಾಜಕ್ಕೆ ಸಕ್ರಿಯಗೊಳಿಸಿದ ಚೇತನ.

ಕ್ರಿ.ಶ. 16ನೇ ಶತಮಾನದಲ್ಲಿ ಶಿವನ ಅಪ್ಪಣೆ ಮೇರೆಗೆ ಅವತರಿಸಿದ ಪಂಚಗಣಾಧೀಶ್ವರರು, ವೀರಶೈವ ಧರ್ಮವನ್ನು ಉಳಿಸಿ ಬೆಳೆಸಲು ಭೂಮಿಗೆ ಬಂದರೆಂಬ ಪ್ರತೀತಿ ಇದೆ. ಕೊಟ್ಟೂರಲ್ಲಿ ಕೊಟ್ಟೂರೇಶ್ವರ ಸ್ವಾಮಿ, ನಾಯಕನಹಟ್ಟಿಯಲ್ಲಿ ತಿಪ್ಪೇರುದ್ರಸ್ವಾಮಿ, ಹರಪನಹಳ್ಳಿಯಲ್ಲಿ ಕೆಂಪೇಶ್ವರಸ್ವಾಮಿ, ಅರಸಿಕೆರೆಯಲ್ಲಿ ಕೋಲಶಾಂತೇಶ್ವರ ಸ್ವಾಮಿ, ಕೂಲಹಳ್ಳಿಯಲ್ಲಿ ಮದ್ಧಾನಸ್ವಾಮಿ ನೆಲೆಸಿ ಭಕ್ತ ಸಮೂಹಕ್ಕೆ ಜ್ಞಾನದ ಜ್ಯೋತಿಯನ್ನು ಬೆಳಗಿಸಿ ಪಾವನಗೊಳಿಸಿದ ಮಹಾಮಹಿಮರು.

ಸ್ವಾಮಿಯ ಮಠಗಳಲ್ಲಿ ಪವಾಡ ತೋರಿದ ಪ್ರಥಮ ಮಠವೇ ಮೂರ್ಕಲ್ ಮಠ. ಹಿರೇಮಠಕ್ಕೆ ದರ್ಬಾರು ಮಠ ಎಂದೂ ಕರೆಯಲಾಗುತ್ತದೆ. ತೊಟ್ಟಿಲು ಮಠದಲ್ಲಿರುವ ತೊಟ್ಟಿಲ್ಲನ್ನು ಮಕ್ಕಳಿಲ್ಲದವರು ಹರಕೆ ಹೊತ್ತು ತೂಗಿದರೆ ಮಕ್ಕಳ ಭಾಗ್ಯ ಸಿಗಲಿದೆ ಎಂಬುದು ಭಕ್ತರ ನಂಬಿಕೆ. ಇದು ನಿಜವೂ ಆಗಿದೆ.

ಗಚ್ಚಿನ ಮಠವು ಅದ್ಬುತ ಶಿಲ್ಪಕಲೆ ಹೊಂದಿದ ಮತ್ತು ಗಚ್ಚಿನಿಂದ ನಿರ್ಮಾಣಗೊಂಡಿದ್ದರಿಂದ ‘ಗಚ್ಚಿನಮಠ’ ಎಂಬ ಹೆಸರು ಪಡೆಯಿತು. ಈ ಮಠದ ಮಧ್ಯಭಾಗದ ಯೋಗ ಮಂಟಪದಲ್ಲಿ ಸ್ವಾಮಿಯು ಜೀವಂತ ಸಮಾಧಿಯಾಗಿದ್ದರಿಂದ ಈ ಮಠಕ್ಕೆ ‘ಜೀವಂತ ಯೋಗ ಮಠ’ ಎಂದೂ ಕರೆಯಲಾಗುತ್ತದೆ. ಪಟ್ಟಣದ ಹೊರ ವಲಯದಲ್ಲಿರುವ ಮಠವೇ ಮರಿಕೊಟ್ಟೂರೇಶ್ವರ ಸ್ವಾಮಿಯ ಮಠವಾಗಿದೆ.

ಮಾಘ ಮಾಸದ ಬಹುಳ ದಶಮಿಯ ಮೂಲ ನಕ್ಷತ್ರ ಕೂಡಿದಾಗ ಕೊಟ್ಟೂರೇಶ್ವರರು ಜೀವಂತ ಸಮಾಧಿಯಾದ್ದರಿಂದ ಅದೇ ಮುಹೂರ್ತದಲ್ಲಿಯೇ ಪ್ರತೀ ವರ್ಷವೂ ಸ್ವಾಮಿಯ ರಥೋತ್ಸವವು ಜರುಗುತ್ತದೆ.

‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ, ಜಾತಿ ವಿಜಾತಿ ಎನಬೇಡ, ದೇವನೊಲಿದಾತನೇ ಜಾತ’ ಎನ್ನುವಂತೆ ಸರ್ವರಿಗೂ ಸಮಾನತೆಯ ಸಂದೇಶ ಸಾರಿದ ಸ್ವಾಮಿಗೆ, ಪಟ್ಟಣದ ಮಹಿಳೆಯರು ಆರತಿ ಬೆಳಗಿದ ನಂತರವೇ ಸ್ವಾಮಿ ರಥವನ್ನೇರುವ ಸಂಪ್ರದಾಯವಿದೆ.

ಸ್ವಾಮಿಯ ಲೀಲೆಗಳನ್ನು ಅರಿತ ಮೊಘಲ ದೊರೆ ಅಕ್ಬರ್, ಸ್ವಾಮಿಗೆ ಖಡ್ಗವನ್ನು ಅರ್ಪಿಸುತ್ತಾನೆ. ಹಿರೇಮಠದಲ್ಲಿ ಮತ್ತು ಮಣಿ ಮಂಚವನ್ನು ಗಚ್ಚಿನಮಠದಲ್ಲಿ ನಾವು ಇಂದಿಗೂ ಇದನ್ನು ಕಾಣಬಹುದಾಗಿದೆ.

ಸ್ವಾಮಿಯ ರಥವು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ತೇರುಗಡ್ಡೆಯ ಮೇಲೆ ನಾಲ್ಕು ಅಂಕಣಗಳಿಂದ ಸುಮಾರು 85 ಅಡಿ ಎತ್ತರದಲ್ಲಿ ಬಣ್ಣಬಣ್ಣದ ಪಟಗಳನ್ನು ನಿರ್ಮಿಸಿ, ರುದ್ರಾಕ್ಷಿ ಮಾಲೆ, ತಳಿರು ತೋರಣ ಮತ್ತು ವಿವಿಧ ರೀತಿಯ ಪುಷ್ಪ ಮಾಲೆಗಳಿಂದ ರಥವನ್ನು ಆಕರ್ಷಕವಾಗಿ ಅಲಂಕರಿಸಲಾಗಿರುತ್ತದೆ.

ದಾವಣಗೆರೆ, ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ಹೊಸಪೇಟೆ, ಗದಗ, ಮುಂಡರಗಿ, ಕೊಪ್ಪಳ, ಹುಬ್ಬಳ್ಳಿ, ರಾಣಿಬೆನ್ನೂರು, ಹಾವೇರಿ ಹಾಗೂ ಶಿವಮೊಗ್ಗ ಹೀಗೆ ದೂರದ ಊರುಗಳಿಂದ ಪಾದಯಾತ್ರೆಯ ಮೂಲಕ ಶ್ರೀಕ್ಷೇತ್ರಕ್ಕೆ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ.

ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠದ ಹೊರನೋಟ
ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠದ ಹೊರನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT