ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನಭಾಗ್ಯ’ಕ್ಕೆ ಕನ್ನ; 26,272 ಅನರ್ಹರು ಪತ್ತೆ

ಪಡಿತರ ಚೀಟಿ ಹೊಂದಿದಿದ್ದ 27 ಸರ್ಕಾರಿ ನೌಕರು ಪತ್ತೆ; ₹4,28 ದಂಡ ವಸೂಲಿ
Last Updated 15 ಜುಲೈ 2021, 11:13 IST
ಅಕ್ಷರ ಗಾತ್ರ

ವಿಜಯಪುರ: ಬಡವರ ಪಾಲಿನ ‘ಅನ್ನಭಾಗ್ಯ’ ಯೋಜನೆಗೆ ಕನ್ನ ಹಾಕುವವರ ಸಂಖ್ಯೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗತೊಡಗಿದೆ. ಅಲ್ಲದೇ, ಪಡಿತರ ಅಕ್ಕಿ ಅನ್ಯ ರಾಜ್ಯಗಳಿಗೆ ಅಕ್ರಮವಾಗಿ ಸಾಗಾಟವಾಗಲು ಜಿಲ್ಲೆ ‘ಮಹಾ‘ದ್ವಾರವಾಗಿದೆ.

ಅಂತ್ಯೋದಯ ಅನ್ನ ಯೋಜನೆ(ಎಎವೈ) ಮತ್ತು ಬಿಪಿಎಲ್‌ ಕಾರ್ಡ್‌ಗಳುಉಳ್ಳವರ ಪಾಲಾಗುತ್ತಿವೆ. ಅಲ್ಲದೇ, ಬಡವರ ಬಟ್ಟಲು ಸೇರಬೇಕಾಗಿದ್ದ ಅನ್ನವನ್ನು ಅನ್ಯ ರಾಜ್ಯಗಳಿಗೆ ಕಳ್ಳಸಾಗಣೆ ಮಾಡುವ ಜಾಲವೂ ಜಿಲ್ಲೆಯಲ್ಲಿ ಅವ್ಯಾಹತವಾಗಿದೆ.

ನೆರೆಯ ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳಿಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುವ ದಂಧೆಯಲ್ಲಿ ಸ್ವತಃ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಬ್ಬಂದಿ, ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿರುವ ಆರೋಪ ಕೇಳಿಬಂದಿದೆ.

ವಿಜಯಪುರ ಜಿಲ್ಲೆಯಿಂದ ಜನವರಿಯಲ್ಲಿ 251 ಕ್ವಿಂಟಲ್‌, ಫೆಬ್ರುವರಿಯಲ್ಲಿ 296 ಕ್ವಿಂಟಲ್‌, ಮಾರ್ಚ್‌ನಲ್ಲಿ 243 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿಯನ್ನುಲಾರಿಗಳ ಮೂಲಕ ಸಾಗಾಟ ಮಾಡುವಾಗ ಖದೀಮರು ಸಿಕ್ಕಿಬಿದ್ದಿದ್ದಾರೆ. ಆದರೆ, ಇಂತಹ ಅದೆಷ್ಟೋ ಕ್ವಿಂಟಲ್‌ ಅಕ್ಕಿ ಅಕ್ರಮವಾಗಿ ಸಾಗಾಟವಾಗಿ, ಅನ್ಯ ರಾಜ್ಯಗಳ ಪಾಲಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶಿದ್ರಾಮ ಮಾರಿಹಾಳ, ‘ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ನಮ್ಮ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಮೂಲಕ ನೆರೆಯ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುವವರನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಿದ್ದೇವೆ’ ಎಂದು ಹೇಳಿದರು.

ಅಕ್ರಮ ಪತ್ತೆಗೆ ಆಂದೋಲನ:

ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಪಡಿಸುವ ಹಾಗೂ ಸಾವಿಗೀಡಾದವರನ್ನು ಪತ್ತೆ ಹಚ್ಚಿ ಅಂಥವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕುವ ಅಭಿಯಾನ ನಡೆಸಿದೆ.

2021ರ ಜನವರಿಯಿಂದ ಈ ವರೆಗೆ ಆದಾಯ ತೆರಿಗೆ ಪಾವತಿ ಮಾಡುತ್ತಿರುವ 1613 ಕುಟುಂಬಗಳು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳು ಸೇರಿದಂತೆ ಒಟ್ಟು 3055 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಎಪಿಎಲ್‌ ಪಡಿತರ ಚೀಟಿಗೆ ಪರಿವರ್ತಿಸಲಾಗಿದೆ ಎಂದುಮಾರಿಹಾಳ ತಿಳಿಸಿದರು.

ಸರ್ಕಾರಿ ಅಧಿಕಾರಿಗಳಿಗೂ ‘ಭಾಗ್ಯ’:

ಜಿಲ್ಲೆಯಲ್ಲಿ 27 ಸರ್ಕಾರಿ ನೌಕರರ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಈ ನೌಕರರಿಗೆ ನೋಟಿಸ್‌ ನೀಡಿ, ಅವರು ಕಳೆದ ಮೂರು ವರ್ಷದಲ್ಲಿ ಈ ವರೆಗೆ ಪಡೆದುಕೊಂಡಿರುವ ಪಡಿತರ ವಸ್ತುಗಳ ಒಟ್ಟು ಮೊತ್ತ ₹4,28,400 ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಏಕವ್ಯಕ್ತಿ ಕುಟುಂಬದ 36,999 ಹಾಗೂ ದ್ವಿವ್ಯಕ್ತಿ 1,15,795 ಪಡಿತರ ಚೀಟಿಗಳು ಇದ್ದು, ಇದರಲ್ಲಿ ಹೆಚ್ಚಿನ ಕುಟುಂಬಗಳು ಒಂದೇ ಮನೆಯಲ್ಲಿ ಕೂಡಿ ವಾಸವಿದ್ದು, ಕೃತಕವಾಗಿ ಪ್ರತ್ಯೇಕವಾಗಿರುವುದಾಗಿ ಪಡಿತರ ಚೀಟಿ ಪಡೆದಿರುವುದೂ ಸಹ ಕಂಡು ಬಂದಿರುತ್ತದೆ ಎಂದು ಹೇಳಿದರು.

ಏಕವ್ಯಕ್ತಿ ಹಾಗೂ ದ್ವಿವ್ಯಕ್ತಿ ಸದಸ್ಯ ಪಡಿತರ ಚೀಟಿದಾರರೂ ಸಹ ಅವರ ಪಡಿತರ ಚೀಟಿಯನ್ನು ರದ್ದುಪಡಿಸಿಕೊಂಡು ಅವರ ಕುಟುಂಬದ ಮೂಲ ಪಡಿತರ ಚೀಟಿಯಲ್ಲಿ ಹೆಸರುಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಎಚ್ಚರಿಕೆ ನೀಡಲಾಗಿದೆ ಎಂದರು.

ಅಂತ್ಯೋದಯ ಅನ್ನ ಯೋಜನೆ(ಎಎವೈ) ಮತ್ತು ಬಿಪಿಎಲ್‌ ಪಡಿತರ ಚೀಟಿಗೆ ಅರ್ಹರಲ್ಲದ 1317 ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ ಎಂದು ಹೇಳಿದರು.

ಮೃತರಾಗಿದ್ದರೂ ಪಡಿತರ ಚೀಟಿಯಲ್ಲಿ ಹೆಸರಿದ್ದ 17,181 ಜನರು ಸೇರಿದಂತೆ ಇದುವರೆಗೆ 26,272 ಹೆಸರನ್ನುಗಳನ್ನು ಡಿಲಿಟ್‌ ಮಾಡಲಾಗಿದೆ. ಇದುವರಗೆ ಒಟ್ಟು 3055 ಅನರ್ಹ ಎಎವೈ ಮತ್ತು ಬಿಪಿಎಲ್‌ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ ಎಂದು ತಿಳಿಸಿದರು.

***

ಅನರ್ಹ ಕುಟುಂಬಗಳು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುವುದು

–ಶಿದ್ರಾಮ ಮಾರಿಹಾಳ
ಉಪನಿರ್ದೇಶಕ, ಆಹಾರ ಇಲಾಖೆ

***

ಪಡಿತರ ಅರ್ಹರಿಗೆ ಸಿಗಬೇಕು, ಅನರ್ಹರನ್ನು ಕೈಬಿಡ ಬೇಕು. ಪರಿಶೀಲನೆ ನೆಪದಲ್ಲಿ ಬಡವರನ್ನು, ಮಧ್ಯಮ ವರ್ಗವನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು

ಸಿದ್ದಲಿಂಗ ಬಾಗೇವಾಡಿ,

ಎಐಡಿವೈಒ, ಜಿಲ್ಲಾ ಘಟಕದ ಅಧ್ಯಕ್ಷ, ವಿಜಯಪುರ

****

838 ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳು

41,326 ಅಂತ್ಯೋದಯ ಅನ್ನ ಯೋಜನೆ ಫಲಾನುಭವಿಗಳು

4,59,684 ಬಿಪಿಎಲ್‌ ಕಾರ್ಡುದಾರರು

5,67,771 ಜಿಲ್ಲೆಯಲ್ಲಿರುವ ಪಡಿತರ ಚೀಟಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT