ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನ ಸತ್ಯ, ಬಿಜೆಪಿಯ ಸುಳ್ಳಿನ ನಡುವೆ ಚುನಾವಣೆ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ ಕುಂದೂರ ವಾಗ್ದಾಳಿ
Published 28 ಏಪ್ರಿಲ್ 2024, 4:33 IST
Last Updated 28 ಏಪ್ರಿಲ್ 2024, 4:33 IST
ಅಕ್ಷರ ಗಾತ್ರ

ವಿಜಯಪುರ: ಪ್ರಸಕ್ತ ಲೋಕಸಭೆ ಚುನಾವಣೆಯು ಕಾಂಗ್ರೆಸ್‌ನ ಸತ್ಯ ಮತ್ತು ಬಿಜೆಪಿಯ ಸುಳ್ಳಿನ ನಡುವೆ ನಡೆಯುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ ಕುಂದೂರ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. 2014ರಲ್ಲಿ ₹53 ಲಕ್ಷ ಕೋಟಿ ಇದ್ದ ದೇಶದ ಸಾಲ ಮೋದಿಯವರ 10 ವರ್ಷದ ಆಡಳಿತಾವಧಿಯಲ್ಲಿ ₹1.83 ಲಕ್ಷ ಕೋಟಿಗೆ ಏರಿಕೆಯಾಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ₹ 84ಕ್ಕೆ ಏರಿಕೆಯಾಗಿದೆ. ದಿನಬಳಕೆ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಅಡುಗೆ ಅನಿಲ ಬೆಲೆ ₹ 1 ಸಾವಿರ ದಾಟಿದೆ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ. ಎಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ ಎಂಬುದನ್ನು ತಿಳಿಸಬೇಕು ಎಂದರು.

ಮೋದಿ ಆಡಳಿತದಲ್ಲಿ ದೇಶ ಸುಭದ್ರವಾಗುತ್ತದೆ ಎಂದು ಬಿಜೆಪಿಯವರು ಹಸಿ ಸುಳ್ಳು ಹೇಳುತ್ತಿದ್ದಾರೆ. ಪುಲ್ವಾಮಾದಲ್ಲಿ ಸೈನಿಕರ ಮೇಲೆ ದಾಳಿ ಆಗಿದ್ದು, ಲಡಾಖ್‌ನಲ್ಲಿ ಚೀನಾ ಅತಿಕ್ರಮಣ ಮಾಡಿದ್ದು, ಸಂಸತ್ತಿನ ಮೇಲೆ ದಾಳಿ ಆಗಿದ್ದು ಯಾರ ಅವಧಿಯಲ್ಲಿ ಎಂಬುದಕ್ಕೆ ಬಿಜೆಪಿಯವರು ಉತ್ತರಿಸಬೇಕು ಎಂದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಿಂದು–ಮುಸ್ಲಿ, ಮಂದಿರ–ಮಸೀದಿ, ಇಂಡಿಯಾ–ಪಾಕಿಸ್ತಾನ ಈ ವಿಷಯ ಬಿಟ್ಟು ಬಿಜೆಪಿಯವರು ಮತ್ತೇನನ್ನೂ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.

2019ರಲ್ಲಿ ಇದ್ದ ಮೋದಿ ಅಲೆ ಈಗ ಇಲ್ಲ, ಶೇ 60ರಷ್ಟು ಯುವ ಮತದಾರರು ಕಾಂಗ್ರೆಸ್‌ನತ್ತ ಒಲವು ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೀಡಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಈಡೇರಿಸಿರುವ ಪರಿಣಾಮ ಯುವ ಮತದಾರರಿಗೆ ಪಕ್ಷದ ಮೇಲೆ ಪೂರ್ಣ ವಿಶ್ವಾಸ ಬಂದಿದೆ ಎಂದು ಹೇಳಿದರು.

ಯಾವುದೇ ಮಧ್ಯವರ್ತಿಗಳು ಇಲ್ಲದೇ, ಭ್ರಷ್ಟಾಚಾರ ಇಲ್ಲದೇ ನೇರವಾಗಿ ಫಲಾನುಭವಿಗಳ ಅಕೌಂಟ್‌ಗೆ ಗೃಹಲಕ್ಷ್ಮಿ, ಯುವನಿಧಿ ಸಂದಾಯವಾಗುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಪ್ರತಿ ಮಹಿಳೆಯರ ಅಕೌಂಟ್‌ಗೆ ‘ಮಹಾಲಕ್ಷ್ಮಿ’ ಯೋಜನೆಯಡಿ ಪ್ರತಿ ವರ್ಷ ₹1 ಲಕ್ಷ ನೀಡುವುದಾಗಿ ಘೋಷಿಸಿರುವುದು, ವಿದ್ಯಾವಂತ ನಿರುದ್ಯೋಗಿಗಳಿಗೆ ‘ಯುವ ನ್ಯಾಯ’ ಯೋಜನೆಯಡಿ ₹ 1 ಲಕ್ಷ ನೀಡುವುದು, ರೈತರ ಸಾಲ ಮನ್ನಾ ಮಾಡುವುದು, ನರೇಗಾ ಕೂಲಿ ₹400ಕ್ಕೆ ಹೆಚ್ಚಳ, ಜಾತಿ ಗಣತಿ ಮಾಡುವುದಾಗಿ ಘೋಷಣೆ ಮಾಡಿರುವುದು ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ತಂದುಕೊಡಲಿದೆ ಎಂದರು.  

ಕೆಪಿಸಿಸಿ ಮೀನುಗಾರ ವಿಭಾಗದ ಅಧ್ಯಕ್ಷ ಮಂಜುನಾಥ ಸುಣಗಾರ ಮಾತನಾಡಿ, ಪ್ರಧಾನಿ ಮೋದಿ ಅವರು 10 ವರ್ಷ ಸುಳ್ಳಿನ ಗೋಪುರ ನಿರ್ಮಿಸಿ, ಆಡಳಿತ ನಡೆಸಿದರು. ಆದರೆ, ಈ ಬಾರಿ ಮೋದಿ ಅವರ ಸುಳ್ಳು ಚುನಾವಣೆಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಮೀನುಗಾರ ವಿಭಾಗದ ಅಧ್ಯಕ್ಷ ಕೃಷ್ಣಾ ಕಾಮಟೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಜಿಲ್ಲಾ ವೈದ್ಯಕೀಯ ವಿಭಾಗದ ಉಪಾಧ್ಯಕ್ಷ ಪ್ರವೀಣ ಚೌರ ಹಾಗೂ ಮಹಾದೇವಿ ಗೋಕಾಕ, ವಸಂತ ಹೊನಮೊಡೆ  ಇದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT