ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಪುರ ಜಲಾಶಯಕ್ಕೆ 3 ಟಿಎಂಸಿ ಅಡಿ ನೀರು

26 ಗೇಟ್‌ಗಳ ಪೈಕಿ 12 ಗೇಟ್‌ಗಳಿಂದ ನೀರು ಬಿಡುಗಡೆ
Published 6 ಏಪ್ರಿಲ್ 2024, 16:12 IST
Last Updated 6 ಏಪ್ರಿಲ್ 2024, 16:12 IST
ಅಕ್ಷರ ಗಾತ್ರ

ಆಲಮಟ್ಟಿ: ಕುಡಿಯುವ ನೀರಿನ ಉದ್ದೇಶಕ್ಕಾಗಿ ನಾರಾಯಣಪುರ ಜಲಾಶಯಕ್ಕೆ ಹರಿಸಬೇಕಿದ್ದ 4 ಟಿಎಂಸಿ ಅಡಿ ನೀರಿನ ಪೈಕಿ 3 ಟಿಎಂಸಿ ಅಡಿ ನೀರನ್ನು ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಮೂರು ದಿನ ಪೂರೈಸಲಾಗಿದೆ.

ಜಲಾಶಯದ ಮಟ್ಟ ಕಡಿಮೆಯಾದ ಕಾರಣ, ಆಲಮಟ್ಟಿ ವಿದ್ಯುತ್ ಘಟಕದಿಂದ ಹಾಗೂ ಹೆಚ್ಚಿನ ನೀರನ್ನು ಆಲಮಟ್ಟಿ ಜಲಾಶಯದ 26 ಗೇಟ್ ಗಳ ಪೈಕಿ 12 ಗೇಟ್‌ಗಳಿಂದ ನೀರು ಹರಿಸಲಾಗಿದೆ.

3 ಟಿಎಂಸಿ ಅಡಿ ನೀರು: ‘ನಾರಾಯಣಪುರ ಜಲಾಶಯಕ್ಕೆ ನೀಡಬೇಕಾದ ನಾಲ್ಕು ಟಿಎಂಸಿ ಅಡಿಯಷ್ಟು ನೀರು ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಿದೆ. ಆ ಪೈಕಿ 3 ಟಿಎಂಸಿ ಅಡಿ ನೀರನ್ನು ಬುಧವಾರದಿಂದ ಶುಕ್ರವಾರ ಮಧ್ಯರಾತ್ರಿಯವರೆಗೂ ನೀರು ಹರಿಸಲಾಗಿದೆ’ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಪ್ರಭಾರಿ ಸೂಪರಿಂಟೆಂಡಿಂಗ್ ಎಂಜಿನಿಯರ್ ರಾಮನಗೌಡ ಹಳ್ಳೂರ ತಿಳಿಸಿದರು.

ಬೇಸಿಗೆಯ ಕಡುಬಿಸಿಲಿನಲ್ಲಿ ಹಿನ್ನೀರಿನ ಭಾಷ್ಪಿಭವನವೂ ಹೆಚ್ಚಿದೆ. ಚಿಕ್ಕಪಡಸಲಿ, ಗಲಗಲಿ ಬ್ಯಾರೇಜ್ ಬಳಿ ನದಿಪಾತ್ರದ ಮುಂಭಾಗದ ನೀರನ್ನು ಎತ್ತಿ ಬ್ಯಾರೇಜ್ ಹಿಂಬದಿ ಸಂಗ್ರಹಿಸಲಾಗುತ್ತಿದೆ. ಇದರಿಂದ ನಿತ್ಯ 826 ಕ್ಯುಸೆಕ್ ನೀರು ಜಲಾಶಯದ ಸಂಗ್ರಹದಿಂದ ಕಡಿಮೆಯಾಗುತ್ತಿದೆ. ಇಡೀ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿಗಾಗಿ ನೀರನ್ನು ಎತ್ತಲಾಗುತ್ತಿದೆ. ಜಲಾಶಯದ ಮಟ್ಟ ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ನಾರಾಯಣಪುರಕ್ಕೆ ಬಿಡಬೇಕಾದ ನೀರನ್ನು ಕೊಡಲಾಗಿದೆ ಎನ್ನಲಾಗಿದೆ.

ಕಡಿಮೆಯಾದ ಜಲಾಶಯದ ಮಟ್ಟ:

ಏ.3ರಂದು ಜಲಾಶಯದಲ್ಲಿ 38.481 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಶನಿವಾರ ಜಲಾಶಯದ ಮಟ್ಟ 34.842 ಟಿಎಂಸಿ ಅಡಿಗೆ ಕುಸಿದಿದೆ.
ಸದ್ಯ ಜಲಾಶಯದ ಮಟ್ಟ 511.15 ಮೀ ಇದ್ದು, ಬಳಕೆಯೋಗ್ಯ 17.22 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಮೂರು ದಿನ ವಿದ್ಯುತ್ ಘಟಕದ ಮೂಲಕವೂ ನೀರು ಬಿಟ್ಟ ಕಾರಣ 15 ಮೆಗಾವಾಟ್ ಸಾಮರ್ಥ್ಯದ ಒಂದು ಘಟಕ ಮಾತ್ರ ಮೂರು ದಿನ ಕಾರ್ಯಾರಂಭ ಮಾಡಿತ್ತು. ಉಳಿದ ಘಟಕಗಳು ಕಾರ್ಯಾರಂಭ ಮಾಡಲು ಜಲಾಶಯದ ಮಟ್ಟ 511.50 ಮೀ ಎತ್ತರದಲ್ಲಿರಬೇಕು ಎಂದು ವಿದ್ಯುತ್ ಉತ್ಪಾದನಾ ಘಟಕದ ಸೂಪರಿಂಟೆಂಡಿಂಗ್ ಎಂಜಿನಿಯರ್ ಚಂದ್ರಶೇಖರ ದೊರೆ ತಿಳಿಸಿದರು.

ನದಿಪಾತ್ರಕ್ಕೆ ಜೀವ ಕಳೆ ಬೇಸಿಗೆಯ ಬಿಸಿಲಿನ ಪ್ರಖರತೆಯ ಕಾರಣ ಆಲಮಟ್ಟಿ ಜಲಾಶಯದ ಮುಂಭಾಗ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಜಲಾಶಯದಿಂದ 14000 ಕ್ಯುಸೆಕ್ ನೀರು ಹರಿಸಿದ್ದರಿಂದ ನದಿಗೆ ಜೀವಕಳೆ ಬಂದಂತಾಗಿದೆ. ಅಲ್ಲಲ್ಲಿ ಇದ್ದ ತಗ್ಗುಗಳಲ್ಲಿ ನೀರು ನಿಂತಿದ್ದು ಬಿಸಿಲಿನ ಪ್ರಖರತೆ ಬರದಲ್ಲಿಯೂ ನೀರು ಹರಿಯುವ ದೃಶ್ಯ ಮನಸ್ಸಿಗೆ ಮುದ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT