ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ನಾಲ್ಕು ವರ್ಷದ ಪದವಿ ಪದ್ಧತಿ ಕೈಬಿಡಿ

ರಾಜ್ಯ ಮಟ್ಟದ ಸಮಾವೇಶದಲ್ಲಿ ಪ್ರೊ.ಸುಖದೇವ್ ಥೋರಟ್ ಆಗ್ರಹ
Last Updated 6 ಜುಲೈ 2021, 14:34 IST
ಅಕ್ಷರ ಗಾತ್ರ

ವಿಜಯಪುರ: ಹೊಸ ಶಿಕ್ಷಣ ನೀತಿ ಅನ್ವಯ ರಾಜ್ಯದಲ್ಲಿ ಜಾರಿಗೊಳಿಸಲು ಹೊರಟಿರುವ ನಾಲ್ಕುವರ್ಷದ ಪದವಿ ಪದ್ಧತಿಯು ಉದ್ಯೋಗ ಮತ್ತು ಶಿಕ್ಷಣಕ್ಷೇತ್ರದಲ್ಲಿ ಅಸಮಾನತೆ, ಹೊಸ ಮಾದರಿಯ ತಾರತಮ್ಯ ಸೃಷ್ಟಿಸಲಿದೆ ಎಂದು ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ವರ್ಷದ ಪದವಿ ಹೇರಿಕೆಯ ವಿರುದ್ಧ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿಜೂಮ್ ಮತ್ತು ಫೇಸ್‍ಬುಕ್ ಲೈವ್‌ನಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ನಾಲ್ಕು ವರ್ಷದ ಪದವಿ ಪದ್ಧತಿಯು ವಿದೇಶಕ್ಕೆ ಹೋಗುವ ಕೆಲವೆ ಕೆಲವು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆಯೇ ಹೊರತು, ಬಹುದೊಡ್ಡ ಸಂಖ್ಯೆಯ ಬಡ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಿಲ್ಲ ಎಂದರು.

ಶಿಕ್ಷಣ ತಜ್ಞ, ನಿವೃತ್ತ ಪ್ರಾಂಶುಪಾಲ ಪ್ರೊ. ಮಹಾಬಲೇಶ್ವರರಾವ್ ಮಾತನಾಡಿ, ಸರ್ಕಾರ ಜನಾಭಿಪ್ರಾಯವನ್ನು ಕಡೆಗಣಿಸಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ನಾಲ್ಕು ವರ್ಷದ ಪದವಿ ಪದ್ಧತಿಯನ್ನು ಜಾರಿಗೊಳಿಸುತ್ತಿದೆ. ಇದು ಸಂವಿಧಾನ ವಿರೋಧಿ, ಜನ ವಿರೋಧಿ ಮತ್ತು ಸಮಾಜವಿರೋಧಿ ನೀತಿಯಾಗಿದೆ ಎಂದರು.

ಈಗಾಗಲೇ ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಸರ್ಕಾರಗಳು ಗುಲಾಮರಂತೆ ನಡೆಸಿಕೊಳ್ಳುತ್ತಿವೆ. ಅವರಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲ ಇಂಥ ಕೆಲಸಗಳನ್ನು ಮಾಡುವುದು ಬಿಟ್ಟು ಅನವಶ್ಯಕವಾಗಿ ಇಂತ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮಗೆ ಬೇಕಿರುವುದು ಬಹು ಶಿಸ್ತಿನ ಪದ್ಧತಿಯಲ್ಲ, ಬದಲಾಗಿ ಅಂತರ್ ಸಂಬಂಧೀಯ ಬಹು ಶಿಸ್ತಿನ ಪದ್ಧತಿ ಎಂದರು.

‘ಏಕ ಭಾರತ ಶ್ರೇಷ್ಠ ಭಾರತ’ ಎಂಬಂತ ರಾಜಕೀಯ ಪಕ್ಷಗಳ ಘೋಷಣೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ತುರುಕಲಾಗಿದೆಯೇ ಹೊರತು, ಶಿಕ್ಷಣದ ನೈಜ ಮೌಲ್ಯಗಳನ್ನಲ್ಲ. ಕುವೆಂಪು ಹೇಳುವಂತೆ ಈ ನೀತಿಯು ಹೆಚ್ಚೆಂದರೆ ಮಾಹಿತಿ ಹೊತ್ತ ಕತ್ತೆಗಳನ್ನು ಸೃಷ್ಟಿಸಬಲ್ಲುದೇ ಹೊರತು ನೈಜ ವಿದ್ಯಾರ್ಥಿಗಳನ್ನು ಸೃಷ್ಠಿಸಲಾರದು ಎಂದು ಅಭಿಪ್ರಾಯಪಟ್ಟರು.

ಎ.ಐ.ಎಸ್.ಇ.ಸಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಪ್ರೋ. ಆನಿಸ್ ರಾಯ್ ಮಾತನಾಡಿ, ಹೊಸ ಶಿಕ್ಷಣ ನೀತಿಯ ನಿರೂಪಕರು ಅಮೆರಿಕಾವನ್ನು ನೋಡಿ ರಚಿಸಿದ್ದಾರೆಯೇ ಹೊರತು ಭಾರತವನ್ನು ನೋಡಿ ರಚಿಸಿಲ್ಲ. ನಮ್ಮಲ್ಲಿನ ಸಾಂಸ್ಕೃತಿಕ, ಪ್ರಾದೇಶಿಕ, ಸಾಮಾಜಿಕ ಭಿನ್ನತೆಯನ್ನು ನೋಡಿ ನಿರೂಪಿಸಿಲ್ಲ ಎಂದರು.

ತಕ್ಷಶಿಲಾ ಮತ್ತು ನಳಂದಾ ವಿಶ್ವ ವಿದ್ಯಾಲಯಗಳು ನಮ್ಮ ದೇಶದ ಅಂದಿನ ಅವಶ್ಯಕತೆಗನುಗುಣವಾಗಿ ಗಮನಾರ್ಹವಾಗಿ ಸ್ಪಂದಿಸದ್ದವು. ಆದರೆ, ಇಂದು ಭಾರತೀಕರಣದ ಹೆಸರಿನಲ್ಲಿ ನಮ್ಮ ಶಿಕ್ಷಣದ ಭವ್ಯ ಪರಂಪರೆಯನ್ನೇ ಸರ್ಕಾರ ತಿರುಚುತ್ತಿದೆ. ಭಾರತದ ಶಿಕ್ಷಣ ನೀತಿಯು ವಿಶ್ವ ಬ್ಯಾಂಕ್, ಗ್ಯಾಟ್‌ ನೀತಿಗಳಿಗೆ ಅನುಗುಣವಾಗಿ ಕುಣಿಯುತ್ತಿದೆ ಎಂದು ಆಪಾದಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ.ಎ. ಮುರಿಗೆಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ತರಬೇಕಾದರೆ ಕನಿಷ್ಠ ಎರಡು ವರ್ಷ ಹಿಡಿಯುತ್ತದೆ ಮತ್ತು ಶಿಕ್ಷಣ ತಜ್ಞರ, ಪಾಲಕರ, ಉಪನ್ಯಾಸಕರ ಅಭಿಪ್ರಾಯ ಪಡೆದು ತರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎ.ಐ.ಎಸ್.ಇ.ಸಿ ಯ ಕರ್ನಾಟಕ ಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಜಾಗತೀಕರಣದ ಹಿನ್ನೆಲೆಯಲ್ಲಿ ಇಂದಿನ ಶಿಕ್ಷಣ ನೀತಿಯನ್ನು ರೂಪಿಸುತ್ತಿರುವುದರಿಂದ ಅದು ಜನರ ಆಶಯಗಳನ್ನು ಈಡೇರಿಸುತ್ತಿಲ್ಲ ಎಂದರು.

ಎ.ಐ.ಎಸ್.ಇ.ಸಿ ರಾಜ್ಯ ಸಮಿತಿ ಸದಸ್ಯ ಸೋಮಶೇಖರಗೌಡಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸೆಕ್ರೇಟರಿಯೇಟ್ ಸದಸ್ಯರಾದ ವಿ.ಎನ್. ರಾಜಶೇಖರ್,ಎಚ್.ಟಿ.ಭರತಕುಮಾರ್‌ ಭಾಗವಿಸಿದ್ದರು.

***
ನಾಲ್ಕುವರ್ಷದ ಪದವಿ ಪದ್ಧತಿಯುಬಹು ಹಂತದ ತೇರ್ಗಡೆ ಇರುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣವಾದ ಜ್ಞಾನ ಸಿಗುವುದಿಲ್ಲ, ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳನ್ನೂ ಕೂಡಾ ಸೃಷ್ಟಿಸುವುದಿಲ್ಲ.
–ಪ್ರೊ. ಸುಖದೇವ್ ಥೋರಟ್
ಮಾಜಿ ಅಧ್ಯಕ್ಷ, ಯುಜಿಸಿ

***

ನಾಲ್ಕುವರ್ಷದ ಪದವಿ ಪದ್ಧತಿಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳ, ಬಡವ ಮತ್ತು ದಲಿತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿಯೇಟು ನೀಡಲಿದೆ.
–ಮಹಾಬಲೇಶ್ವರರಾವ್
ಶಿಕ್ಷಣ ತಜ್ಞ

***

ಈಗಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲಭೂತ ಅವಶ್ಯಕತೆಗಳನ್ನು ಪೂರೈಸದೆ ಇಂಥ ಬದಲಾವಣೆ ತರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಬರುವುದಿಲ್ಲ.
–ಪ್ರೊ.ಎ.ಮುರಿಗೆಪ್ಪ, ವಿಶ್ರಾಂತ ಉಪಕುಲಪತಿ
ಹಂಪಿ ಕನ್ನಡ ವಿಶ್ವವಿದ್ಯಾಲಯ

***

ಖಾಲಿ ಹೊಟ್ಟಯ ಶಿಕ್ಷಕ ಅದ್ಹೇಗೆ ವಿದ್ಯಾರ್ಥಿಗಳ ತಲೆಯನ್ನು ತುಂಬಬಲ್ಲ? ಸರ್ಕಾರ ಮೊದಲು ಅತಿಥಿ ಶಿಕ್ಷಕರ, ಉಪನ್ಯಾಸಕರ ಸಮಸ್ಯೆ ಬಗೆಹರಿಸಲಿ. ಕೂಡಲೇ ಇಂಥ ನೀತಿಯನ್ನು ಕೈ ಬಿಡಬೇಕು
–ಅಲ್ಲಮಪ್ರಭು ಬೆಟ್ಟದೂರು
ಎ.ಐ.ಎಸ್.ಇ.ಸಿ ಯ ಕರ್ನಾಟಕ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT