ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿಕೋಟೆ: ಬಂಡೆಪ್ಪನ ಸಾಲವಾಡಗಿಗೆ ಸೌಲಭ್ಯಗಳ ಕೊರತೆ

ಹಲವು ವಿಶೇಷಗಳನ್ನು ಒಡಲಲ್ಲಿರಿಸಿಕೊಂಡ ಪುಟ್ಟ ಗ್ರಾಮ
Published 19 ಜುಲೈ 2023, 6:02 IST
Last Updated 19 ಜುಲೈ 2023, 6:02 IST
ಅಕ್ಷರ ಗಾತ್ರ

ತಾಳಿಕೋಟೆ: ತಾಲ್ಲೂಕಿನ ಗಡಿಯಲ್ಲಿ ಯಾದಗಿರಿ ಜಿಲ್ಲೆಗೆ ಅಂಟಿಕೊಂಡಿರುವ  ಜಿಲ್ಲೆಯ ಪುಟ್ಟ ಗ್ರಾಮ ಬಂಡೆಪ್ಪನ ಸಾಲವಾಡಗಿ ಹಲವು ವಿಶೇಷಗಳನ್ನು ಒಡಲಲ್ಲಿರಿಸಿಕೊಂಡಿದ್ದರೂ ಸೌಲಭ್ಯಗಳ ಕೊರತೆ ಅನುಭವಿಸುತ್ತಿದೆ.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮಕ್ಕಿದ್ದ ನೀರಿನ ಬವಣೆ ತಪ್ಪಿದ್ದರೂ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್.ಓ ಪ್ಲಾಂಟ್) ಕೊರತೆ ಇದೆ.

ಮುಖ್ಯ ರಸ್ತೆಗಳು ಸುಧಾರಣೆಯಾಗಿದ್ದರೂ ಒಳ ರಸ್ತೆಗಳು, ಚರಂಡಿ ವ್ಯವಸ್ಥೆ ಸುಧಾರಣೆ ಕಾಣಬೇಕಿದೆ. ಬಡಾವಣೆ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಿದೆ.

ಗ್ರಾಮದಂಚಿನ ಪರಮಾನಂದ ಬೆಟ್ಟವು ಕಾಲದ ಹೊಡೆತಕ್ಕೆ ಸಿಕ್ಕು ಕರಗುತ್ತಿದೆ. ಬೆಟ್ಟದಲ್ಲಿ ಪ್ರಾಗೈತಿಹಾಸಿಕ ಕಾಲದ ಕುರುಹುಗಳು, ಹಳೆ ಶಿಲಾಯುಗದ ಉಪಕರಣಗಳ ತಯಾರಿಕಾ ಪ್ರಮುಖ ಕೇಂದ್ರವಾಗಿತ್ತೆಂಬುದಕ್ಕೆ ಕುರುಹುಗಳನ್ನಿಟ್ಟುಕೊಂಡಿದೆ. ಇವುಗಳ ರಕ್ಷಣೆಯಾಗಬೇಕಿದೆ.

ಊರಿನ ಸುತ್ತ ಕಂಡುಬರುವ ಎರಡು ಸುತ್ತಿನ ಕೋಟೆ, ಹುಡೆಗಳು, ರಾಮಲಿಂಗ ದೇವಾಲಯದಲ್ಲಿರುವ ಶಿಲಾಶಾಸನ, ವೀರಗಲ್ಲು 12ನೇ ಶತಮಾನದ ಕಲ್ಯಾಣ ಚಾಲುಕ್ಯರ 4ನೇ ಸೋಮೇಶ್ವರನ ಆಳ್ವಿಕೆಗೊಳಪಟ್ಟ ಸಾಕ್ಷಿ ನುಡಿಯುತ್ತವೆ. ಇವುಗಳ ಸಂರಕ್ಷಣೆಯಾಗಬೇಕಿದೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿತ ಬೃಹತ್ ಅಗಸೆ ದ್ವಾರವು ದ್ರುವ ನಕ್ಷತ್ರಕ್ಕೆ ಅಭಿಮುಖವಾಗಿದ್ದು, ಅಗಸೆಯ ಬಾಗಿಲಲ್ಲಿರುವ ರಂಧ್ರದಿಂದ ನೋಡಿದರೆ ದ್ರುವ ನಕ್ಷತ್ರ ಕಾಣುವಂತೆ ಹಾಗೂ ಅಗಸೆ ಬಾಗಿಲಿನ ಮುಂದೆ ಯಾವ ಕೋನದಲ್ಲಿ ನಿಂತರೂ ಬಾಗಿಲು ನಮ್ಮ ನೇರಕ್ಕೆ ಇದ್ದಂತೆ ನಿರ್ಮಿಸಿರುವುದು ಶಿಲ್ಪಿಗಳ ವಾಸ್ತುಶಿಲ್ಪದ ಕಲಾಸೋಜಿಗ!

ಸಾಲವಾಡಗಿ ಪ್ರಾಚೀನ ಕಾಲದಲ್ಲಿನ ಪ್ರಮುಖ ಅಗ್ರಹಾರ-ವಿದ್ಯಾ ಕೇಂದ್ರವಾಗಿತ್ತು. ನೆಲ ಅಗೆಯುವಾಗ ಜೈನ ತೀರ್ಥಂಕರರ ಮೂರ್ತಿಗಳು ಲಭ್ಯವಾಗಿದ್ದು, ಇದು ಜೈನ ಧರ್ಮೀಯರ ಶ್ರದ್ಧಾ ಕೇಂದ್ರವಾಗಿತ್ತೆಂಬುದನ್ನು ಸೂಚಿಸುತ್ತದೆ.

ಗ್ರಾಮ ಪಂಚಾಯಿತಿಯ ಕೇಂದ್ರವಾಗಿರುವ ಗ್ರಾಮವು 7600 ಜನಸಂಖ್ಯೆ ಹೊಂದಿದ್ದು, 1145 ಕುಟುಂಬಗಳಿವೆ. ರೆಡ್ಡಿ ಜನಾಂಗದವರು ಬಹುಸಂಖ್ಯಾತರಾಗಿದ್ದರೂ, ಮುಸ್ಲಿಂ, ಲಂಬಾಣಿ, ಪರಿಶಿಷ್ಟರು, ಇತರೆ ಹಿಂದುಳಿದ ವರ್ಗದವರೆಲ್ಲ ಸಾಮರಸ್ಯದಿಂದ ಬದುಕುತ್ತಿದ್ದಾರೆ.

ಇದಕ್ಕೆ ಸಾಕ್ಷಿಯಾಗಿ ಮದನಸಾಹೇಬ ದರ್ಗಾ ದ್ವಾರದ ಮೇಲೆ ಶಿವಪಾರ್ವತಿಯರ ಚಿತ್ರಗಳಿವೆ. ಉರುಸ್ ಸಮಯದಲ್ಲಿ ಊರ ಗೌಡರ ಮನೆಯಿಂದಲೇ ಗಂಧ ಸಾಗುತ್ತದೆ. ‘ತಪ್ಪು ಮಾಡಿದವರು ಸುಪ್ರಿಂಕೋರ್ಟ್‌ವರೆಗೂ ಹೋಗಲು ಹೆದರದವರು ಮದನಸಾಬ ದರ್ಗಾದಲ್ಲಿ ನಿಂತು ಪ್ರಮಾಣ ಮಾಡಲು ಹೇಳಿದರೆ ಹಿಂಜರಿಯುತ್ತಾರೆ’ ಎನ್ನುವುದು ಗ್ರಾಮದಲ್ಲಿ ಪ್ರಚಲಿತವಾಗಿದೆ.

ನಿಸರ್ಗದತ್ತ ಬೆಟ್ಟದ ಬೃಹತ್ ಬಂಡೆಗಳ ಮಧ್ಯದ ಗವಿಯಲ್ಲಿರುವ ಪರಮಾನಂದನ ದೇವಸ್ಥಾನ, ಗ್ರಾಮದಲ್ಲಿನ  ಮಹಾಲಕ್ಷ್ಮಿ, ದುರ್ಗಾದೇವಿ, ಮಲ್ಲಿಕಾರ್ಜುನ, ಬಸವೇಶ್ವರ, ಹನುಮಾನ, ಅಲ್ಲಮಪ್ರಭು ದೇವಾಲಯಗಳು ದಶದಿಕ್ಕುಗಳಲ್ಲಿದ್ದು ಧಾರ್ಮಿಕ ಭವ್ಯತೆ ತಂದಿವೆ.

ಗ್ರಾಮದೇವತೆ ಜಾತ್ರೆ, ಪರಮಾನಂದ ಜಾತ್ರೆ, ಅಲ್ಲಮಪ್ರಭು ಜಾತ್ರೆ, ದರ್ಗಾದ ಉರುಸ್ ಗಳಲ್ಲಿ ಎಲ್ಲ ಜಾತಿ-ಧರ್ಮದವರೂ ಒಟ್ಟಾಗಿ ಆಚರಿಸುತ್ತ ಭಾವೈಕ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಹೈದರಾಬಾದ್‌ ವಿಮೋಚನೆಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ‘ಕರ್ನಾಟಕದ ಭಗತ್ ಸಿಂಗ್’, ‘ಕೋಳೂರ ಕೇಸರಿ’ ಎಂದು ಹೆಸರಾಗಿದ್ದ ವಿರೂಪಾಕ್ಷಪ್ಪಗೌಡರ ಕಾರ್ಯಕ್ಷೇತ್ರವಿದಾಗಿತ್ತು.

ಹೆಚ್ಚಿನವರು ಕೃಷಿ ಬದುಕಲ್ಲಿ ಬದುಕು ಕಂಡಿದ್ದು ನೀರಾವರಿ ಅನುಕೂಲವಾದರೆ ರೈತರ ಬದುಕು ಬಂಗಾರವಾಲಿದೆ.

ಗ್ರಾಮಾಭಿವೃದ್ಧಿ ಕನಸು ಹೊತ್ತ ‘ನಮ್ಮ ಸಾಲವಾಡಗಿ ನಮ್ಮ ಹೆಮ್ಮೆ’  ಯುವ ತಂಡವು ಆರಂಭದಲ್ಲಿ ಪರಮಾನಂದ ಬೆಟ್ಟದಲ್ಲಿ ಸಾವಿರಾರು ಗಿಡಗಳನ್ನು ಚಿಗುರಿಸಿದ್ದಾರೆ.

ಸುಸಜ್ಜಿತ ಸೌಕರ್ಯಗಳಿಂದ ಕೂಡಿ ಉತ್ತಮ ಶಿಕ್ಷಣ ನೀಡುತ್ತಿರುವ ಪ್ರೌಢಶಾಲೆಗೆ ನೆರೆ ಜಿಲ್ಲೆಯ ನೂರಾರು ಮಕ್ಕಳು ದಾಂಗುಡಿಯಿಟ್ಟಿದ್ದಾರೆ.

ಪುನರುಜ್ಜೀವನಕ್ಕೆ ಕಾದಿರುವ ಬ.ಸಾಲವಾಡಗಿಯಲ್ಲಿರುವ 12ನೇ ಶತಮಾನ ರಾಮಲಿಂಗ(ಈಶ್ವರ) ದೇವಸ್ಥಾನ 
ಪುನರುಜ್ಜೀವನಕ್ಕೆ ಕಾದಿರುವ ಬ.ಸಾಲವಾಡಗಿಯಲ್ಲಿರುವ 12ನೇ ಶತಮಾನ ರಾಮಲಿಂಗ(ಈಶ್ವರ) ದೇವಸ್ಥಾನ 

ಗ್ರಾಮಕ್ಕೆ ಅತ್ಯವಶ್ಯಕವಾಗಿ ಬ್ಯಾಂಕ್ ಆಸ್ಪತ್ರೆ ವಿದ್ಯಾರ್ಥಿ ವಸತಿ ನಿಲಯ ಪಿಯು ಕಾಲೇಜು ಮಂಜೂರಾದರೆ ಬಂಡೆಪ್ಪನ ಸಾಲವಾಡಗಿ ಪರಿಪೂರ್ಣ ಗ್ರಾಮವಾಗುವುದರಲ್ಲಿ ಸಂಶಯವಿಲ್ಲ  -ರವಿಕಾಂತ ಪಾಟೀಲ ನಿವೃತ್ತ ಪೊಲೀಸ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT