ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಚಿದ ದೇಶಮುಖ ಮನೆತನದ ಕೊನೆಯ ಕೊಂಡಿ..!

ವಿಜಯಪುರ ಜಿಲ್ಲೆಯ ಮೊದಲ ಸಚಿವೆ; ಅಪಾರ ಅಭಿಮಾನಿಗಳ ‘ಅಮ್ಮ’ ಇನ್ನಿಲ್ಲ
Last Updated 22 ಜುಲೈ 2018, 17:20 IST
ಅಕ್ಷರ ಗಾತ್ರ

ವಿಜಯಪುರ: ಅವಿಭಜಿತ ವಿಜಯಪುರ ಜಿಲ್ಲೆಯ ದೊಡ್ಡ ಮನೆತನ ಎಂದೇ ಮನೆ ಮಾತಾಗಿದ್ದ ನಾಲತವಾಡದ ದೇಶಮುಖ ಮನೆತನದ ಕೊನೆಯ ಕೊಂಡಿ, ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಭಾನುವಾರ ನಸುಕಿನಲ್ಲಿ ಇಹಲೋಕ ತ್ಯಜಿಸಿದರು.

‘ಉಳುವವನೇ ಭೂಮಿಯ ಒಡೆಯ’ ಎಂಬ ಕಾನೂನು ದೇಶದಲ್ಲಿ ಜಾರಿಯಾದ ತಕ್ಷಣ ಸ್ವ ಇಚ್ಚೆಯಿಂದ ನಾಲತವಾಡದ ಜಗದೇವರಾವ ದೇಶಮುಖ ಕುಟುಂಬ ಅಪಾರ ಸಂಖ್ಯೆಯ ರೈತರಿಗೆ ತಮ್ಮ ಒಡೆತನದ ಸಹಸ್ರ, ಸಹಸ್ರ ಎಕರೆ ಭೂಮಿಯನ್ನು ಬಿಟ್ಟುಕೊಟ್ಟಿತು. ಆಗಿನಿಂದಲೂ ದೇಶಮುಖ ಕುಟುಂಬ ಈ ಭಾಗದಲ್ಲಿ ಮನೆ ಮಾತು.

ದೇಶದ ಎಲ್ಲೆಡೆ ಕಾಂಗ್ರೆಸ್‌ನ ಸುವರ್ಣ ಯುಗದ ದಿನಗಳಲ್ಲೇ, ವಿರೋಧದ ರಣಕಹಳೆ ಊದಿದ್ದ ದೇಶಮುಖ ಮನೆತನ ಕೊನೆಯವರೆಗೂ, ಕಾಂಗ್ರೆಸ್‌ ವಿರೋಧಿ ರಾಜಕಾರಣವನ್ನೇ ನಡೆಸಿದ್ದು ವಿಶೇಷ.

ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿರುವ ದೇಶಮುಖ ಮನೆತನದ ಅಭಿಮಾನಿಗಳು, ಅನುಯಾಯಿಗಳು, ಬೆಂಬಲಿಗರು ಇಂದಿಗೂ ವಿಮಲಾಬಾಯಿ ದೇಶಮುಖರನ್ನು ‘ಅಮ್ಮ’ ಎಂದೇ ಅಭಿಮಾನದಿಂದ ಕರೆಯುತ್ತಿದ್ದುದು ಇಲ್ಲಿ ಉಲ್ಲೇಖಾರ್ಹ.

ರಾಜಕೀಯ ಇತಿಹಾಸ:

ತುರ್ತು ಪರಿಸ್ಥಿತಿ ಘೋಷಣೆಯ ಬಳಿಕ 1978ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಜನತಾ ಪಕ್ಷದಿಂದ ಸ್ಪರ್ಧಿಸಿದ ಜಗದೇವರಾವ ಸಂಗನಬಸಪ್ಪ ದೇಶಮುಖ ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ನಂತರ 1983, 1985ರಲ್ಲಿ ನಡೆದ ಚುನಾವಣೆಗಳಲ್ಲೂ ಅತ್ಯಧಿಕ ಮತಗಳಿಂದ ಆಯ್ಕೆಯಾಗುವ ಮೂಲಕ ತಮ್ಮ ಜನಪ್ರಿಯತೆ ಪ್ರದರ್ಶಿಸಿದರು. ರಾಮಕೃಷ್ಣ ಹೆಗಡೆ, ಎಸ್.ಆರ್‌.ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

1989ರಲ್ಲಿ ಸಿ.ಎಸ್‌.ನಾಡಗೌಡ ವಿರುದ್ಧ ಸೋತ ಬಳಿಕ, ಅದೇ ಕೊರಗಿನಲ್ಲಿ 1991ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ನಿಧನರಾದರು. ಪತಿಯ ನಿಧನದಿಂದ ಕಂಗೆಟ್ಟ ವಿಮಲಾಬಾಯಿ ದೇಶಮುಖ 1994ರ ಚುನಾವಣೆಯಲ್ಲಿ ಅನಿವಾರ್ಯವಾಗಿ ಅಭಿಮಾನಿಗಳ ಒತ್ತಡದಿಂದ ಅಖಾಡಕ್ಕಿಳಿದು, ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಮಣಿಸಿ, ಪತಿಯ ಸೋಲಿಗೆ ಪ್ರತೀಕಾರ ತೀರಿಸಿದರು.

ಐದು ವರ್ಷದ ಅವಧಿ ಮುದ್ದೇಬಿಹಾಳದ ಶಾಸಕಿಯಾಗಿದ್ದ ವಿಮಲಾಬಾಯಿ ಜಿಲ್ಲೆಯ ಮೊದಲ ಸಚಿವೆಯಾಗಿ 1996ರಲ್ಲಿ ಜೆ.ಎಚ್‌.ಪಟೇಲ ಸಂಪುಟ ಪ್ರವೇಶಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆಯಾಗಿ, ನೆರೆಯ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತು ಆಡಳಿತ ನಡೆಸಿದರು.

ರಾಜಕೀಯ ಪ್ರವೇಶಕ್ಕೂ ಮುನ್ನಾ ತಮ್ಮ ವಾಡೆಯೊಳಗೆ ‘ಅಮ್ಮ’ನಾಗಿದ್ದ ವಿಮಲಾಬಾಯಿ, ನಂತರ ಎಲ್ಲೆಡೆ ದೇಶಮುಖಮ್ಮ ಎಂಬ ಹೆಸರಿನಿಂದಲೇ ಖ್ಯಾತಿಯಾದರು.

1999, 2004, 2008ರಲ್ಲಿ ಸಿ.ಎಸ್‌.ನಾಡಗೌಡ ವಿರುದ್ಧ ಜನತಾದಳ, ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದರು. 2013ರಲ್ಲಿ ಬಿ.ಎಸ್‌.ಯಡಿಯೂರಪ್ಪ ಸಾರಥ್ಯದ ಕೆಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಅನಾರೋಗ್ಯವೂ ಹೆಚ್ಚಿದ್ದರಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಇದೀಗ ದೇಶಮುಖ ಮನೆತನದ ರಾಜಕಾರಣಕ್ಕೆ ಇತಿಶ್ರೀ ಬಿದ್ದಂತಾಗಿದೆ.

ವೈಯಕ್ತಿಕ ವಿವರ:

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮುರಗೋಡದಲ್ಲಿ ಜನಿಸಿದ್ದ ವಿಮಲಾಬಾಯಿ, ನಾಲತವಾಡದ ಪ್ರತಿಷ್ಠಿತ ಕುಟುಂಬ ದೇಶಮುಖ ಮನೆತನದ ಜಗದೇವರಾವ ದೇಶಮುಖ ಅವರನ್ನು ವಿವಾಹವಾಗಿದ್ದರು. ಇವರು ದೇಶಮುಖರ ಎರಡನೇ ಪತ್ನಿ.

ನಂದಿನಿ ದೇಶಮುಖ ಇವರ ಏಕೈಕ ಪುತ್ರಿ. ಇವರೂ ನೆರೆಯ ಮಹಾರಾಷ್ಟ್ರದ ಯಾವತ್ಮಲ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ. ನಂದಿನಿ ಪತಿ ನೀಲೇಶ ದೇಶಮುಖ ಸಹ ಶಾಸಕರಾಗಿದ್ದರು. ಮಹಾರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಯಿದ್ದರು. ಹಲ ವರ್ಷಗಳ ಹಿಂದೆಯೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ವಿಮಲಾಬಾಯಿ ಅವರನ್ನು ಬಹಳ ದುಃಖಿತರನ್ನಾಗಿಸಿತ್ತು.

ಅಧಿಕಾರದಲ್ಲಿಲ್ಲದಿದ್ದರೂ ‘ಅಮ್ಮ’ ಪ್ರಭಾವಿಯಾಗಿದ್ದರು. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಿದ್ದ ಸಂದರ್ಭ ಮುದ್ದೇಬಿಹಾಳದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದ್ದರು
- ಬಸಯ್ಯ ನಂದಿಕೇಶ್ವರಮಠ, ನಗರಾಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT