ಶುಕ್ರವಾರ, ಅಕ್ಟೋಬರ್ 30, 2020
27 °C
ಕೂಡಲಸಂಗಮ ಲಿಂಗಾಯತ ಪಂಚಮಸಾಲಿಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿ

ಯಡಿಯೂರಪ್ಪ ಪಂಚಮಸಾಲಿ ಲಿಂಗಾಯತರ ಋಣ ತೀರಿಸಲಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪಂಚಮಸಾಲಿ ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗ 2‘ಎ‘ಗೆ ಸೇರ್ಪಡೆ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮಾಜದ ಋಣ ತೀರಿಸಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮಿ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜದಿಂದ 13 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುವ ಮೂಲಕ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವಂತೆ ಮಾಡಿದ್ದೇವೆ. ಸಮಾಜದ ಋಣ ಅವರ ಮೇಲಿದೆ‘ ಎಂದು ಹೇಳಿದರು.

‘ಸಮಾಜದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ ಸೇರಿದಂತೆ ಪ್ರಮುಖರನ್ನು ಸಚಿವರನ್ನಾಗಿ ಮಾಡಿ ಎಂದು ಆರಂಭದಿಂದ ಬೇಡಿಕೆ ಇಟ್ಟರೂ ಇದುವರೆಗೂ ಪರಿಗಣಿಸಿಲ್ಲ. ನಮಗೂ ಸ್ವಾಭಿಮಾನ ಇದೆ. ಇನ್ನು ಮುಂದೆ ಸಚಿವ ಸ್ಥಾನ, ನಿಗಮ, ಮಂಡಳಿ ಅಧ್ಯಕ್ಷ ಸ್ಥಾನದ ಬೇಡಿಕೆ ಇಡುವುದಿಲ್ಲ. ಇನ್ನೇನಿದ್ದರೂ ನಮ್ಮ ಹಕ್ಕಾದ ಮೀಸಲಾತಿ ಸೌಲಭ್ಯ ಕೇಳುತ್ತೇವೆ’ ಎಂದರು.

‘ಯಡಿಯೂರಪ್ಪ ಅವರು ಸಮಾಜವನ್ನು ಒಬಿಸಿ 2 ‘ಎ’ಗೆ ಸೇರ್ಪಡೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಅವರ ಅವಧಿಯಲ್ಲೇ ಬೇಡಿಕೆ ಈಡೇರುವ ವಿಶ್ವಾಸವಿದೆ’ ಎಂದು ಹೇಳಿದರು.

ಉಪವಾಸ ಸತ್ಯಾಗ್ರಹ

ಲಿಂಗಾಯತ ಪಂಚಮಸಾಲಿ ಸಮಾಜವನ್ನು ಒಬಿಸಿ 2‘ಎ’ಗೆ ಸೇರ್ಪಡೆ ಮಾಡಲು ಆಗ್ರಹಿಸಿ ಅ.28ರಂದು ಬೆಳಿಗ್ಗೆ 9ರಿಂದ ಸಂಜೆ 4ರ ವರಗೆ ಬೆಳಗಾವಿ ಸುವರ್ಣಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

ಲಿಂಗಾಯತ ಸಮಾಜದಲ್ಲಿ ಪಂಚಮಸಾಲಿಗಳು ಬಹುಸಂಖ್ಯಾತರಾಗಿದ್ದಾರೆ. ರಾಜ್ಯದಲ್ಲಿ ಸುಮಾರು ಒಂದು ಕೋಟಿ ಜನಸಂಖ್ಯೆ ಇದೆ. ಕೃಷಿಯಾಧಾರಿತ ಸಮಾಜವು ಆರ್ಥಿಕವಾಗಿ ತೀವ್ರ ಹಿಂದುಳಿದಿರುವುದರಿಂದ ಮೀಸಲಾತಿ ನೀಡುವ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಕೊಪ್ಪ, ರಾಜ್ಯ ಯುವ ಘಟಕದ ಅಧ್ಯಕ್ಷ ಸೋಮಶೇಖರ ಆಲ್ಯಾಳ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ದೇವೂರ್‌, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಬಿರಾದಾರ, ಮುಖಂಡರಾದ ಸಂಗಮೇಶ್ವರ ಬಬಲೇಶ್ವರ, ನಿಂಗನಗೌಡ ಸೊಲ್ಲಾಪುರ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು