ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ | ಅಧಿಕಾರಿಗಳ ನಿರ್ಲಕ್ಷ್ಯ: ಹಾಳಾದ ಉದ್ಯಾನ

ಆಲಮಟ್ಟಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಉದ್ಯಾನದಲ್ಲಿ ಬೆಳೆದ ಮುಳ್ಳಿನ ಗಿಡ
ಶಂಕರ ಈ.ಹೆಬ್ಬಾಳ
Published 6 ಜುಲೈ 2024, 6:31 IST
Last Updated 6 ಜುಲೈ 2024, 6:31 IST
ಅಕ್ಷರ ಗಾತ್ರ

ಮುದ್ದೇಬಿಹಾಳ : ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಪ್ರವಾಸಿ ಉದ್ಯಾನವನ ಉದಾಸೀನಕ್ಕೊಳಗಾಗಿದ್ದು ಅದರ ಸೌಂದರ್ಯವೇ ಹಾಳಾಗುತ್ತಿದೆ.

ಗಣ್ಯಾತಿಗಣ್ಯರು, ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಶಾಸಕರು ತುರ್ತು ಕೆಲಸದ ಅಂಗವಾಗಿ ಪ್ರವಾಸಿ ಮಂದಿರದಲ್ಲಿ ಸಭೆ, ಸುದ್ದಿಗೋಷ್ಠಿಗಳನ್ನು ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಪ್ರವಾಸದ ಸಮಯದಲ್ಲಿ ಉಳಿದುಕೊಳ್ಳಲು ಪ್ರವಾಸಿ ಮಂದಿರದಲ್ಲಿ ಕೊಠಡಿ ಕಾಯ್ದಿರಿಸುತ್ತಾರೆ. ಆದರೆ ಪ್ರವಾಸಿ ಮಂದಿರದ ಸುತ್ತಮುತ್ತಲು ಬೆಳೆದಿರುವ ಕಸ ಕಡ್ಡಿ, ಮುಳ್ಳು ಕಂಟಿ, ಬೇಡವಾದ ಗಿಡಗಳು ಬೆಳೆದಿದ್ದು, ಚರಂಡಿಗಳಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಪ್ರವಾಸಿ ಮಂದಿರದಲ್ಲಿ ಉಳಿದುಕೊಳ್ಳುವವರ ನಿದ್ದೆ ಕಸಿಯುತ್ತವೆ.

ಈ ಹಿಂದೆ ಇಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಅರುಣ ಪಾಟೀಲ್ ಅವರು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿದ್ದ ವೇಳೆ ಗಾರ್ಡನ್‌ನನ್ನು ಸುಂದರವಾಗಿಸುವಲ್ಲಿ ಶ್ರಮಿಸಿದ್ದರು. ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಆಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರವಾಸಿ ಮಂದಿರಕ್ಕೆ ಒಳ ಬರುವ ಇಕ್ಕೆಲಗಳಲ್ಲಿ ಬೆಳೆಸಿರುವ ಗಿಡಮರಗಳು ಹಚ್ಚ ಹಸಿರಾಗಿ ಬೆಳೆದಿವೆ. ಆದರೆ ಸುಂದರವಾದ ಉದ್ಯಾನವನದಂತೆ ಬೆಳೆಸಿರುವ ಹುಲ್ಲುಗಾವಲು, ಹೂವಿನ ಆಲಂಕಾರಿಕ ಗಿಡಗಳ ಮಧ್ಯೆ ಕಸ ಕಡ್ಡಿ, ಮುಳ್ಳು ಕಂಟಿಗಳು ಬೆಳೆದಿವೆ. ಇದರಿಂದ ಗಣ್ಯರು, ಅಧಿಕಾರಿಗಳು ವಸತಿ ಇದ್ದಲ್ಲಿ ವಾಕಿಂಗ್ ಟ್ರ್ಯಾಕ್‌ನಲ್ಲಿ ಬೆಳಿಗ್ಗೆ ವಾಯು ವಿಹಾರ ಮಾಡಲು ಸಾಧ್ಯವಾಗದೇ ಪ್ರವಾಸಿ ಮಂದಿರದ ಹೊರಗಡೆ ಬಯಲಿನಲ್ಲಿ ಮಾಡುತ್ತಾರೆ.

ಕನಿಷ್ಠ ಉದ್ಯಾನದಲ್ಲಿ ಬೆಳೆದಿರುವ ಮುಳ್ಳು ಕಂಟಿ, ಕಸ ತೆಗೆದು ಗಿಡಗಳನ್ನು ಅಂದವಾಗಿ ಕಟಿಂಗ್ ಮಾಡಿಸಿದರೆ ಬೇರೆ ಊರಿನಿಂದ ಬರುವ ಅಧಿಕಾರಿಗಳಿಗೆ ಅನುಕೂಲವಾಗುತ್ತದೆ.

ಸಂಬಂಧಿಸಿದ ಪಿಡಬ್ಲ್ಯೂಡಿ ಅಧಿಕಾರಿ ಎಸ್.ಜಿ.ಶಿವನಗುತ್ತಿ ಅವರು ಪ್ರವಾಸಿ ಮಂದಿರದ ಉದ್ಯಾನವನ್ನು ಗಮನಿಸಿದ್ದಾರೊ ಇಲ್ಲೊ.ಉದ್ಯಾನದಲ್ಲಿ ಕಸ ಕಡ್ಡಿ ಬೆಳೆದು ವಿಷಜಂತುಗಳು ಓಡಾಡುತ್ತಿವೆ. ಸರ್ಕಾರದಿಂದ ಸ್ವಚ್ಛತೆಗೆ, ಪ್ರವಾಸಿ ಮಂದಿರದ ನಿರ್ವಹಣೆಗೆ ಅನುದಾನ ಬರುತ್ತಿದ್ದರೂ ಇಲ್ಲಿ ಮಾತ್ರ ಅದು ಹೇಗೆ ಬಳಕೆ ಆಗುತ್ತಿದೆ ಎಂಬುದೇ ಯಕ್ಷಪ್ರಶ್ನೆ ಎನ್ನುವಂತಾಗಿದೆ ಎನ್ನುತ್ತಾರೆ ವಾಲ್ಮೀಕಿ ಸಮಾಜದ ಮುಖಂಡ ಲಕ್ಷ್ಮಣ ವಾಲೀಕಾರ. ಪ್ರವಾಸಿ ಮಂದಿರದ ಶುಚಿತ್ವಕ್ಕೆ,ಗಾರ್ಡನ್ ಸೌಂದರ್ಯಕ್ಕೆ ಪಿಡಬ್ಲ್ಯೂಡಿ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ಅವರ ಒತ್ತಾಯವಾಗಿದೆ.

ಮುದ್ದೇಬಿಹಾಳದ ಪ್ರವಾಸಿ ಮಂದಿರದ ಎಡ ಹಾಗೂ ಬಲಗಡೆ ಇರುವ ಗಾರ್ಡನ್‌ದ ಹುಲ್ಲುಗಾವಲು ಮಧ್ಯೆ ಎಕ್ಕೆಯ ಗಿಡಗಳು ಸೇರಿದಂತೆ ಉದ್ಯಾನವನದ ನಿರ್ವಹಣೆ ಇಲ್ಲದೇ ಕಸ ಬೆಳೆದಿರುವುದು
ಮುದ್ದೇಬಿಹಾಳದ ಪ್ರವಾಸಿ ಮಂದಿರದ ಎಡ ಹಾಗೂ ಬಲಗಡೆ ಇರುವ ಗಾರ್ಡನ್‌ದ ಹುಲ್ಲುಗಾವಲು ಮಧ್ಯೆ ಎಕ್ಕೆಯ ಗಿಡಗಳು ಸೇರಿದಂತೆ ಉದ್ಯಾನವನದ ನಿರ್ವಹಣೆ ಇಲ್ಲದೇ ಕಸ ಬೆಳೆದಿರುವುದು

ಪ್ರವಾಸಿ ಮಂದಿರದ ನಿರ್ವಹಣೆಗೆ ಪ್ರತಿ ವರ್ಷ ₹5ಲಕ್ಷ ಅನುದಾನ ಬರುತ್ತದೆ. ಆದರೆ ಅದು ಸ್ವಚ್ಛತಾ ಸಿಬ್ಬಂದಿ ವೇತನ ಇನ್ನುಳಿದ ಕೆಲಸಕ್ಕೆ ಸಾಕಾಗುವುದಿಲ್ಲ.ಮುಂಬರುವ ದಿನಗಳಲ್ಲಿ ಪ್ರವಾಸಿ ಮಂದಿರದ ಸೌಂದರ್ಯೀಕರಣಕ್ಕೆ ಒತ್ತು ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ

-ರಾಜು ಚವ್ಹಾಣ ಪಿಡಬ್ಲ್ಯೂಡಿ ಜೆಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT