ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಬಾ | ಸೀಗೆ ಹುಣ್ಣಿಮೆ: ತುಳಜಾಭವಾನಿ ದರ್ಶನಕ್ಕೆ ಭಕ್ತರ ಪಾದಯಾತ್ರೆ

Published 28 ಅಕ್ಟೋಬರ್ 2023, 6:21 IST
Last Updated 28 ಅಕ್ಟೋಬರ್ 2023, 6:21 IST
ಅಕ್ಷರ ಗಾತ್ರ

ತಾಂಬಾ: ಸೀಗೆ ಹುಣ್ಣಿಮೆಯ ಅಂಗವಾಗಿ ವಿವಿಧ ಸಮಾಜದ ಸಹಸ್ರಾರು ಭಕ್ತ ಸಮೂಹ ತುಳಜಾಪುರದ ಅಂಬಾಭವಾನಿ ದೇವಿಯ ದರ್ಶನಕ್ಕೆ ಪಾದಯಾತ್ರೆಯ ಮೂಲಕ ಹೆಜ್ಜೆ ಹಾಕಲು ಪ್ರಾರಂಭಿಸಿದ್ದಾರೆ. 

ಸೀಗೆ ಹುಣ್ಣಿಮೆ ಹತ್ತಿರವಾಗುತ್ತಿದ್ದಂತೆ ಅಂಬಾಭವಾನಿಯ ದರ್ಶನಕ್ಕೆ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ತಗ್ಗು ದಿನ್ನೆಯ ರಸ್ತೆಯಲ್ಲಿ ಭಕ್ತಿ ಪರವಶರಾಗಿ ವರದಾನಿ ಅಂಬಾಭವಾನಿ ದರ್ಶನಕ್ಕೆ ತಂಡೋಪ ತಂಡವಾಗಿ ಭಕ್ತರು ತುಳಜಾಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ.

ತುಳಾಜಾಪುರಕ್ಕೆ ಪಾದಯಾತ್ರೆಯ ಮೂಲಕ ಹೆಜ್ಜೆ ಹಾಕುತ್ತಿರುವ ಭಕ್ತರ ಕಂಡು 'ನಮ್ಮ ಮನೆಗೆ ಬನ್ನಿ ದಣಿವಾರಿಸಿಕೊಂಡು ನಮ್ಮ ಅತಿಥ್ಯ ಸ್ವೀಕರಿಸಿ ಮುಂದೆ ಹೋಗಿ' ಎಂದು ಕೈಮುಗಿದು ವಿನಂತಿಸಿಕೊಳ್ಳುವ ಭಕ್ತರು ಒಂದೆಡೆಯಾದರೆ, ಇನ್ನೂ ಯಾತ್ರಿಕರು ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ, ಶುಭಕೋರಿ ಮುನ್ನಡೆಯುತ್ತಿದ್ದರು.

ನಾಡಿನ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿರುವ ತುಳಜಾಪುರ ಅಂಬಾಭವಾನಿ ದೇವಿಗೆ ಕರ್ನಾಟಕ ರಾಜ್ಯದಲ್ಲೂ ಅಪಾರ ಭಕ್ತರಿದ್ದಾರೆ. ಮನೆಯಲ್ಲಿ ಶುಭ ಕಾರ್ಯಗಳಾದರೆ ತುಳಜಾಪುರಕ್ಕೆ ತೆರಳಿ ಹರಕೆ ತೀರಿಸುವುದು ಈ ಭಾಗದ ಭಕ್ತರ ರೂಢಿ. ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಮನೆಗೆ ಒಬ್ಬರಾದರೂ ತೆರಳಿ ದೇವಸ್ಥಾನದ ದೀಪಗಳಿಗೆ 'ಎಣ್ಣೆ' ಸಮರ್ಪಿಸಿ ಬರುವುದು ಸಂಪ್ರದಾಯ.

ಪಾದಯಾತ್ರೆಯಲ್ಲಿ ತಾಂಬಾ, ಬಂಥನಾಳ, ವಾಡೆ, ತಾಂಬಾ ತಾಂಡಾ, ಬನ್ನಿಹಟ್ಟಿ, ಹೀರೆರೂಗಿ, ತೆನ್ನಹಳ್ಳಿ, ಅಥರ್ಗಾ, ಚಿಕ್ಕರೂಗಿ, ಗಂಗನಳ್ಳಿ, ಹಿಟ್ನಳ್ಳಿ, ಮಸಳಿ, ದೇವರ ಹಿಪ್ಪರಗಿ, ಸಂಗೋಗಿ, ಸೇರಿದಂತೆ ಹತ್ತಾರು ಗ್ರಾಮದ ಭಕ್ತರು ಅಂಬಾಭವಾನಿ ದರ್ಶನ ಪಡೆಯಲು, ಭಕ್ತಿ ಸಮರ್ಪಣೆಗಾಗಿ, ಸಾಗರವನ್ನು ಸೇರಲು ಓಡುವ ನದಿಯಂತೆ ಅಹೋರಾತ್ರಿ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ.

ಬಡವರು, ಶ್ರೀಮಂತರು, ಜಾತಿ-ಮತ, ಪಂಥ ಭೇದವಿಲ್ಲದೆ, ಎಲ್ಲ ವರ್ಗದವರು ಅಂಬಾಭವಾನಿಯ ದರ್ಶನಕ್ಕಾಗಿ ಕಾಯುತ್ತಾರೆ. ಪಾದಯಾತ್ರೆಯ ಮೂಲಕ ತುಳಜಾಪುರಕ್ಕೆ ತೆರಳಿ ದೇವಿಯ ದರ್ಶನ ಪಡೆದರೆ, ಸಂಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು.

ತುಳಜಾಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದಿಂದ ಆಗಮಿಸಿದ ಅಪಾರ ಭಕ್ತರ ದಂಡು ಕಂಡು ಬರುತ್ತಿದೆ. 'ಉಧೆ...ಅಂಬೆ....ಜೈ ಭವಾನಿ..' ಎಂಬ ಘೋಷಣೆಗಳು ಎಲ್ಲೆಡೆ ಮೊಳಗುತ್ತಿದ್ದವು. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ದೇವಸ್ಥಾನದ ಹೊರಗೂ ಬ್ಯಾರಿಕೇಟ್‌ಗಳನ್ನು ನಿರ್ಮಿಸಲಾಗಿದ್ದು, ಸರದಿ ಸಾಲಿನಲ್ಲಿ ಭಕ್ತರನ್ನು ಒಳಬಿಡಲಾಗುತ್ತಿದೆ. ದೇವಸ್ಥಾನದ ದ್ವಾರ ಬಾಗಿಲಿನಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ತುಳಜಾಪುರ ಅಂಬಾಭವಾನಿ
ತುಳಜಾಪುರ ಅಂಬಾಭವಾನಿ
ಪ್ರತಿ ವರ್ಷ ತುಳಜಾಪುರ ಪಾದಯಾತ್ರಿಗಳಿಗೆ ಕೈಲಾದಷ್ಟು ಸೇವೆ ಮಾಡುತ್ತೇವೆ. ನಮ್ಮ ಗ್ರಾಮದ ಯುವಕರು ಸಂಗ್ರಹಿಸಿರುವ ಖರ್ಚಿನಲ್ಲಿ ದಾಸೋಹ ನಡೆಸುತ್ತೇವೆ
ಬಸವರಾಜ ಹೊಸಮನಿ ದಾಸೋಹಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT