ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಬಾಗೇವಾಡಿ: ನರಸಲಗಿ ಹಂತಿ ಹಬ್ಬಕ್ಕೆ ಭರದ ಸಿದ್ದತೆ

‘ಜೋಳದ ರಾಶಿ ನರಸಲಗಿ ಹಂತಿ ಹಬ್ಬ’ಕ್ಕೆ ಸಿದ್ಧತೆ
Published 26 ಫೆಬ್ರುವರಿ 2024, 13:31 IST
Last Updated 26 ಫೆಬ್ರುವರಿ 2024, 13:31 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ನರಸಲಗಿ‌ ಗ್ರಾಮದ ಕನ್ನಡ ಜಾನಪದ‌ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರ ಗೋನಾಳ ಅವರ ಹೊಲದಲ್ಲಿ ಫೆ.29 ರಂದು ಸಂಜೆ 5ಕ್ಕೆ ‘ಜೋಳದ ರಾಶಿ ನರಸಲಗಿ ಹಂತಿ ಹಬ್ಬ’ಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದೆ.

ಸಾಂಪ್ರದಾಯಿಕ ಕೃಷಿ ಪದ್ಧತಿ ಪರಿಚಯಿಸುವುದು ಹಾಗೂ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ದೇವೇಂದ್ರ ‘ಹಂತಿ ಹಬ್ಬ’ ಆಚರಿಸುತ್ತಾ ಬಂದಿದ್ದಾರೆ.

ಹೊಲದಲ್ಲಿ ವಿಶಾಲವಾದ ಕಣ ಸಿದ್ಧ ಮಾಡಲಾಗಿದ್ದು, ಮಧ್ಯೆ ‘ಮೇಟಿ’ ಕಂಬ ನಹಾಕಲಾಗಿದೆ. ಹಂತಿ ಆರಂಭಕ್ಕೂ ಮುನ್ನ ಸುಮಾರು 25 ಜೋಡಿ ಎತ್ತುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಹಂತಿ ಸ್ಥಳಕ್ಕೆ ಬರಮಾಡಿಕೊಳ್ಳಲಾಗುವುದು. ಕಟಾವು ಮಾಡಿ ಗೂಡು ಹಾಕಿದ್ದ ಜೋಳದ ತೆನೆಗಳಿಗೆ, ಹಂತಿ ಮಾಡುವ ಸ್ಥಳಕ್ಕೆ ಹಾಗೂ ಎತ್ತುಗಳಿಗೆ ಪೂಜೆ ಸಲ್ಲಿಸಲಾಗುವುದು.

ರೈತರ ಹಂತಿ ಪದಗಳೊಂದಿಗೆ ಹಾಗೂ ಜೋಳದ ತೆನೆ ಮುರಿಯುವ ಮೂಲಕ ಹಂತಿ ಹಬ್ಬಕ್ಕೆ ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಚಾಲನೆ ನೀಡಲಿದ್ದಾರೆ. ನಂತರ 8 ಜೋಡು ಎತ್ತುಗಳ ಸಹಾಯದಿಂದ ಜೋಳದ ರಾಶಿ ನಡೆಯುವುದು.
ಕೃಷಿಗೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.

ತಾಲ್ಲೂಕು ಅಧ್ಯಕ್ಷ ಬಾಳನಗೌಡ ಪಾಟೀಲ ಸೇರಿದಂತೆ ಗಣ್ಯರು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರನ್ನು ಹಂತಿ ಹಬ್ಬಕ್ಕೆ ಆಹ್ವಾನಿಸಲಾಗಿದೆ.

‘ಇಂದು ಕೃಷಿಕರು ಯಂತ್ರಗಳ ಬೆನ್ನು ಹತ್ತಿದ್ದರಿಂದ ಕೃಷಿಯಲ್ಲಿನ ಸಾಂಪ್ರದಾಯಿಕ ಪದ್ಧತಿ, ಹಿಂದಿನ ಗತವೈಭವ ಮರೆಯಾಗುತ್ತಿದೆ. ಹಂತಿ ಮೂಲಕ ರಾಶಿ ಮಾಡುವುದರಿಂದ ರೈತರಲ್ಲಿ ಬಾಂಧವ್ಯ ಹೆಚ್ಚುತ್ತದೆ. ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ವೇದಿಕೆಯಾಗುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಕೃಷಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುವುದಕ್ಕಾಗಿ ಪ್ರತಿ ವರ್ಷ ಹಂತಿ ಹಬ್ಬ ಆಚರಿಸಲು ನಿರ್ಧರಿಸಿರುವೆ’ ಎಂದು ದೇವೇಂದ್ರ ಗೋನಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT