ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಮ್ಮಟನಗರಿಯಲ್ಲಿ 'ರಂಜಾನ್‌' ರಂಗು: ಗಮನ ಸೆಳೆಯುತ್ತಿರುವ ಇಫ್ತಾರ್‌ ಕೂಟಗಳು

ಜಗಮಗಿಸುತ್ತಿರುವ ಮಾರುಕಟ್ಟೆ
Published 7 ಏಪ್ರಿಲ್ 2024, 14:15 IST
Last Updated 7 ಏಪ್ರಿಲ್ 2024, 14:15 IST
ಅಕ್ಷರ ಗಾತ್ರ

ವಿಜಯಪುರ: ‘ಗುಮ್ಮಟನಗರಿ’ಯಲ್ಲಿ ಅಬ್ಬರದ ಬಿಸಿಲ ಝಳದ ನಡುವೆಯೇ ಮುಸ್ಲಿಮರು ಪವಿತ್ರ ರಂಜಾನ್‌ ಮಾಸವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಿದ್ದಾರೆ.

ರಂಜಾನ್​ ಹಬ್ಬದ ಪ್ರಯುಕ್ತ ನಗರದ ಕೆ.ಸಿ. ಮಾರುಕಟ್ಟೆ ವಿದ್ಯುತ್​ ದೀಪಗಳಿಂದ ಝಗಮಗಿಸುತ್ತಿದೆ. ರಂಜಾನ್‌ ಹಬ್ಬದಲ್ಲಿ ತಯಾರಿಸುವ ಸುರುಕುಂಬಾ ತಯಾರಿಕೆಗೆ ಅಗತ್ಯ ಇರುವ ಪಿಸ್ತಾ, ಗೋಡಂಬಿ, ದ್ರಾಕ್ಷಿ, ಶಾವಿಗೆ ಹಾಗೂ ವಿವಿಧ ಮಸಾಲ, ಖಾದ್ಯ ಪದಾರ್ಥಗಳು, ಹಣ್ಣು, ಬಗೆಬಗೆಯ ಖರ್ಜೂರಗಳ ಖರೀದಿ ಜೋರಾಗಿದೆ.

ಹೊಸ ಬಟ್ಟೆ, ಟೋಪಿ, ಬುರ್ಖಾ, ಸೀರೆ, ಬಳೆ, ಚಪ್ಪಲಿ, ಶೂ, ಆಲಂಕಾರಿಕ ವಸ್ತುಗಳು, ಸುಗಂಧ ದ್ರವ್ಯಗಳು, ಮೆಹಂದಿ ಖರೀದಿ ಕೂಡ ಜೋರಾಗಿದೆ. ಮಾರುಕಟ್ಟೆಯಲ್ಲಿ ಕಾಲಿಡಲು ಕೂಡ ಆಗದಷ್ಟು ಜನದಟ್ಟಣೆ ಕಂಡುಬರುತ್ತದೆ. ಹಬ್ಬಕ್ಕೆ ಕೇವಲ ಮೂರು ದಿನ ಬಾಕಿ ಇರುವುದರಿಂದ ವ್ಯಾಪಾರ, ವಹಿವಾಟು ಬಿರುಸು ಪಡೆದಿದೆ.

ಹಗಲು ಬಿಸಿಲು ತಾರಕಕ್ಕೇರಿರುವುದರಿಂದ ಹಾಗೂ ರೋಜಾ(ಉಪವಾಸ) ಇರುವುದರಿಂದ ಸಂಜೆ ಇಫ್ತಾರ್‌ ಮುಗಿದ ಬಳಿಕ ಜನರು ಕುಟುಂಬ ಸಮೇತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರಾತ್ರಿ 11ರ ವರೆಗೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿರುತ್ತದೆ. 

ಹಬ್ಬದ ಖರೀದಿ ಜೊತೆಗೆ ಪ್ರಮುಖ ಹೋಟೆಲ್‌ಗಳಿಗೆ ತೆರಳಿ ಬಗೆಬಗೆಯ ತಿನಿಸು, ತಂಪಾದ ಪಾನೀಯ, ಐಸ್‌ ಕ್ರೀಂ, ಖರ್ಜೂರ, ಹಣ್ಣು, ಸಿಹಿ ಪದಾರ್ಥ, ಮೀನು, ಮಾಂಸಾಹಾರ ಖಾದ್ಯಗಳನ್ನು ಸವಿಯುತ್ತಿದ್ದಾರೆ.

ಬಡ ಮುಸ್ಲಿಂ ಮಹಿಳೆಯರು, ಪುರುಷರು ನಗರದಲ್ಲಿ ಮನೆ–ಮನೆಗಳಿಗೆ ತೆರಳಿ ರಂಜಾನ್‌ ಜಕಾತ್‌ ಕೇಳಿ ಪಡೆಯುತ್ತಿರುವುದು ಕಂಡುಬರುತ್ತಿದೆ. ಜೊತೆಗೆ ಬಗೆಬಗೆಯ ಆಹಾರ ಪದಾರ್ಥಗಳನ್ನು ಪಡೆದು ಮೂಟೆಕಟ್ಟಿಕೊಂಡು ಧನ್ಯತೆಯಿಂದ ಮನೆಗೆ ತೆರಳುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಮಸೀದಿ, ದರ್ಗಾಗಳನ್ನು ರಂಜಾನ್‌ ಪ್ರಯುಕ್ತ ವಿದ್ಯುತ್‌ ದೀಪಗಳಿಂದ ಆಲಂಕರಿಸಿದ್ದು, ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತಿದೆ. ಮಸೀದಿ, ದರ್ಗಾಗಳ ಎದುರು ಬಡವರು ಸಾಲುಗಟ್ಟಿ ನಿಂತು, ಹಣವನ್ನು ಬೇಡಿ ಪಡೆಯುತ್ತಿರುವುದು ನೋಡಬಹುದಾಗಿದೆ.

ನಗರದ ವಿವಿಧೆಡೆ ಸಂಘ, ಸಂಸ್ಥೆಗಳು, ಸಮಾಜದ ಮುಖಂಡರು, ಜನಪ್ರತಿನಿಧಿಗಳು ವಿಶೇಷ ಇಫ್ತಾರ್‌ ಕೂಟಗಳನ್ನು ಆಯೋಜಿಸಿ, ಎಲ್ಲ ಸಮುದಾಯದವರನ್ನು ಆಹ್ವಾನಿಸಿ ಭಾವೈಕ್ಯದ ಸಂದೇಶ ಸಾರುತ್ತಿದ್ದಾರೆ.

ವಿಜಯಪುರದ ಕೆ.ಸಿ.ಮಾರುಕಟ್ಟೆಯಲ್ಲಿ ಭಾನುವಾರ ರಂಜಾನ್‌ ಅಂಗವಾಗಿ ಬಟ್ಟೆ ಬಳೆ  ಖರೀದಿಯಲ್ಲಿ ತೋಡಗಿದ್ದ ಮಹಿಳೆಯರು
ವಿಜಯಪುರದ ಕೆ.ಸಿ.ಮಾರುಕಟ್ಟೆಯಲ್ಲಿ ಭಾನುವಾರ ರಂಜಾನ್‌ ಅಂಗವಾಗಿ ಬಟ್ಟೆ ಬಳೆ  ಖರೀದಿಯಲ್ಲಿ ತೋಡಗಿದ್ದ ಮಹಿಳೆಯರು

ಯುಗಾದಿಗೆ ಹಿಂದುಗಳು ಸಜ್ಜು

ಒಂದೆಡೆ ಮುಸ್ಲಿಮರು ರಂಜಾನ್‌ ಹಬ್ಬಕ್ಕೆ ಸಿದ್ಧವಾಗುತ್ತಿದ್ದರೆ ಇನ್ನೊಂದೆಡೆ ಹಿಂದುಗಳು ಯುಗಾದಿ ಬೇವು–ಬೆಲ್ಲ ಸವಿಯಲು ಅಣಿಯಾಗಿದ್ದಾರೆ. ಏಪ್ರಿಲ್‌ 9ರಂದು(ಮಂಗಳವಾರ) ಯುಗಾದಿ ಹಬ್ಬ ಇರುವುದರಿಂದ ಹೊಸವಸ್ತ್ರ ಬಂಗಾರ ಬೆಳ್ಳಿ ಹೂವು–ಹಣ್ಣು ತರಕಾರಿ ಪೂಜಾ ಸಾಮಾನುಗಳನ್ನು ಖರೀದಿಸುತ್ತಿರುವುದು ನಗರದ ಮಾರುಕಟ್ಟೆಯಲ್ಲಿ ಭಾನುವಾರ ಕಂಡುಬಂದಿತು. ಬಿಸಿಲು ಅಧಿಕ ಇರುವುದರಿಂದ ಸಂಜೆ ವೇಳೆ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ದೂರದ ನಗರ ಪಟ್ಟಣಗಳಿಗೆ ಉದ್ಯೋಗಕ್ಕಾಗಿ ತೆರಳಿದವರು ಹಬ್ಬದ ರಜೆ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT