ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜ್ಞಾನ ಭಾರತಿ ವಿದ್ಯಾಮಂದಿರ ನೂತನ ಕಟ್ಟಡಕ್ಕಾಗಿ ₹25 ಲಕ್ಷ: ಶಾಸಕ ಮನಗೂಳಿ

ಲಿಂ.ಮಡಿವಾಳಯ್ಯ ಹಿರೇಮಠರ ಮೂರ್ತಿ ಅನಾವರಣ, ಕಾಲೇಜಿನ ದಶಮಾನೋತ್ಸವ
Published 24 ಫೆಬ್ರುವರಿ 2024, 13:20 IST
Last Updated 24 ಫೆಬ್ರುವರಿ 2024, 13:20 IST
ಅಕ್ಷರ ಗಾತ್ರ

ಸಿಂದಗಿ: ‘ಶಿಕ್ಷಣ ಕಾಶಿ ಎಂದೇ ಹೆಸರುವಾಸಿಯಾದ ಸಿಂದಗಿ ಪಟ್ಟಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಜ್ಞಾನಭಾರತಿ ವಿದ್ಯಾಮಂದಿರ ಕೂಡ ಒಂದು. ಈ ಸಂಸ್ಥೆಗೆ ಈಗಾಗಲೇ ಶಾಸಕ ನಿಧಿಯಿಂದ ₹ 5 ಲಕ್ಷ ಅನುದಾನ ಮಂಜೂರಾಗಿದೆ. ನೂತನ ಕಟ್ಟಡಕ್ಕಾಗಿ ಇನ್ನೂ ₹ 25 ಲಕ್ಷ ಅನುದಾನವನ್ನು ನೀಡುವೆ’ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

ಇಲ್ಲಿಯ ಬಸವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಜ್ಞಾನಭಾರತಿ ವಿದ್ಯಾಮಂದಿರದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂ.ಮಡಿವಾಳಯ್ಯ ಹಿರೇಮಠರ ಮೂರ್ತಿ ಅನಾವರಣ, ಪಿಯು ಕಾಲೇಜಿನ ದಶಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂರ್ತಿ ಅನಾವರಣಗೊಳಿಸಿದ ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಈ ಶಿಕ್ಷಣ ಸಂಸ್ಥೆ ಇನ್ನೂ ವಿಸ್ತಾರಗೊಳ್ಳಬೇಕು. ಅದಕ್ಕಾಗಿ ವಿಶಾಲ ಕಟ್ಟಡಕ್ಕಾಗಿ ಜಾಗ ಖರೀದಿಸಲು ವೈಯಕ್ತಿಕವಾಗಿ ₹ 1 ಲಕ್ಷ ನೀಡುವುದಾಗಿ ತಿಳಿಸಿದರು.

ಸಮಾರಂಭವನ್ನು ಉದ್ಘಾಟಿಸಬೇಕಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪರವಾಗಿ ಅವರ ಪುತ್ರ ರಾಮನಗೌಡ ಪಾಟೀಲ ಸಮಾರಂಭದಲ್ಲಿ ಪಾಲ್ಗೊಂಡರು.

ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಚಂದ್ರಶೇಖರ ಕವಟಗಿ ಮಾತನಾಡಿ, ‘ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಜಾಗೃತಗೊಳಿಸಬೇಕಿದೆ’ ಎಂದು ಹೇಳಿದರು. ಪಿಇಎಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಮಾತನಾಡಿದರು.

ಸೊನ್ನ ದಾಸೋಹಮಠದ ಶಿವಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಜಗದೀಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂದಾನಿ ದಯಾನಂದಗೌಡ ಹೊನ್ನಪ್ಪಗೌಡ ಬಿರಾದಾರ, ಶಾಸಕ ಅಶೋಕ ಮನಗೂಳಿ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪುತ್ರ ರಾಮನಗೌಡ ಪಾಟೀಲ, ಜ್ಞಾನಭಾರತಿ ವಿದ್ಯಾಮಂದಿರದ ಶಿಕ್ಷಕಿ ಪ್ರೇಮಾ ನಾಯ್ಕ, ಮಹಾದೇವಿ ಮಡಿವಾಳಯ್ಯ ಹಿರೇಮಠ, ಕಳೆದ ವರ್ಷ ಪಿಯು ದ್ವಿತೀಯ ವರ್ಷದ ಕಲಾ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್‌ ಪಡೆದುಕೊಂಡಿದ್ದ ಜ್ಞಾನಭಾರತಿ ಪಿಯು ಕಾಲೇಜು ವಿದ್ಯಾರ್ಥಿ ಭಾಗಪ್ಪ ಭಾಸಗಿ ಅವರನ್ನು ಗೌರವಿಸಲಾಯಿತು.

ಕನ್ನೊಳ್ಳಿ ಶ್ರೀ, ಯಂಕಂಚಿ ಶ್ರೀ, ಆಲಮೇಲ ಶ್ರೀ, ಬೋರಗಿ-ಪುರದಾಳ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಅಂಜುಮನ್ ಶಿಕ್ಷಣ ಸಂಸ್ಥೆಯ ಎಸ್.ಎಂ.ಪಾಟೀಲ ಗಣಿಹಾರ, ಪ್ರೇರಣಾ ಶಿಕ್ಷಣ ಸಂಸ್ಥೆಯ ಆರ್.ಡಿ.ಕುಲಕರ್ಣಿ, ಪಂಚತಂತ್ರ ಸಂಸ್ಥೆಯ ಎನ್.ಜಿ.ಸಜ್ಜನ, ಅಬು ಸಂಸ್ಥೆಯ ಎಂ.ಎ.ಖತೀಬ, ಜಾನಪದ ವಿದ್ವಾಂಸ ಎಂ.ಎಂ.ಪಡಶೆಟ್ಟಿ, ಅಶೋಕ ಅಲ್ಲಾಪುರ ವೇದಿಕೆಯಲ್ಲಿದ್ದರು.

ಸಿಂದಗಿ ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶನಿವಾರ ನೂರಾರು ಶಾಲಾ ಮಕ್ಕಳು ತಮ್ಮ ತಾಯಂದಿರ ಪಾದಪೂಜೆ ಮಾಡಿ ಅವರಿಂದ ಕೈ ತುತ್ತು ಉಣ್ಣುವ ಅಪರೂಪದ ಕಾರ್ಯಕ್ರಮ ನಡೆಯಿತು
ಸಿಂದಗಿ ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶನಿವಾರ ನೂರಾರು ಶಾಲಾ ಮಕ್ಕಳು ತಮ್ಮ ತಾಯಂದಿರ ಪಾದಪೂಜೆ ಮಾಡಿ ಅವರಿಂದ ಕೈ ತುತ್ತು ಉಣ್ಣುವ ಅಪರೂಪದ ಕಾರ್ಯಕ್ರಮ ನಡೆಯಿತು

ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಜಾಗೃತಗೊಳಿಬೇಕಿದೆ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗೆ ಸನ್ಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT