ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಹಿಪ್ಪರಗಿ: ಒಣ ಮೇವು ಸಂಗ್ರಹಕ್ಕೆ ರೈತರ ಚಿತ್ತ

ಹಸಿ ಮೇವು ಕೊರತೆ: ಮೇವಿನ ಬ್ಯಾಂಕ್‌ ಪ್ರಾರಂಭಿಸಲು ಆಗ್ರಹ
Published 6 ಮಾರ್ಚ್ 2024, 4:58 IST
Last Updated 6 ಮಾರ್ಚ್ 2024, 4:58 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಮುಂಗಾರು ಹಾಗೂ ಹಿಂಗಾರು ಸೇರಿದಂತೆ ಕಳೆದ ವರ್ಷದಲ್ಲಿ ಮಳೆಗಾಲದ ಅಭಾವದ ಹಿನ್ನೆಲೆಯಲ್ಲಿ ಜಾನುವಾರಗಳಿಗೆ ಮೇವಿನ ಕೊರತೆಯನ್ನು ನೀಗಿಸಲು ರೈತ ಸಮುದಾಯ ಮುಂದಾಗಿದ್ದು ಒಣಮೇವು ಸಂಗ್ರಹದತ್ತ ಚಿತ್ತ ಹರಿಸಿದೆ.

ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮಳೆಗಾಲ ಕೈಕೊಟ್ಟ ಪರಿಣಾಮ ಒಂದೆಡೆ ತೊಗರಿ, ಜೋಳ ಸೇರಿದಂತೆ ಬಿತ್ತನೆಯಾದ ಬಹುತೇಕ ಎಲ್ಲ ಬೆಳೆಯ ಫಸಲು ಬಾರದಂತಾಗಿ ರೈತರು ಕಂಗಾಲಾಗಿದ್ದರೆ, ಇನ್ನೊಂದೆಡೆ ಜಾನುವಾರಗಳಿಗೆ ಮೇವು ಒದಗಿಸಲು ಪರದಾಡುವಂತಾಗಿದೆ.

ಬೇಸಿಗೆಗಾಗಿ ಜಾನುವಾರಗಳಿಗೆ ಅಗತ್ಯವಾದ ಒಣಮೇವನ್ನು ದೂರದ ಗ್ರಾಮಗಳಿಂದ ಖರೀದಿಸಿ ಟ್ರ್ಯಾಕ್ಟರ್‌ಗಳ ಮೂಲಕ ತಂದು ಸಂಗ್ರಹಿಸಲಾಗುತ್ತಿದೆ. ಆಕಳು, ಎತ್ತು, ಎಮ್ಮೆಗಳಿಗೆ ಅಗತ್ಯವಾದ ಜೋಳದ ಮೇವು ಈಗ ದೊರೆಯದ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಒಣಮೇವನ್ನೇ ಒಂದು ಟ್ರ್ಯಾಲಿಗೆ ₹10 ಸಾವಿರದವರೆಗೆ ಹಣ ನೀಡಿ ರೈತರು ಕೊಳ್ಳುತ್ತಿದ್ದಾರೆ.

ಒಂದು ಟ್ರ್ಯಾಲಿ ಮೆಕ್ಕೆಜೋಳ ಮೇವು 2 ಎತ್ತುಗಳಿಗೆ ಒಂದು ತಿಂಗಳು ಸಾಲುತ್ತದೆ. ಆಕಳು, ಎಮ್ಮೆಗಳಿಗೆ ಪ್ರತ್ಯೇಕವಾಗಿ ಖರೀದಿಸಬೇಕು. ನೀರಿನ ಕೊರತೆಯಿಂದ ಹಸಿಮೇವು ಸಿಗುವುದು ದೂರದ ಮಾತು. ಮುಂದಿನ ಮಳೆಗಾಲದವರೆಗೆ ಅಗತ್ಯ ಮೇವನ್ನು ದೇವರಹಿಪ್ಪರಗಿ ಪಟ್ಟಣದ ಸಂಬಂಧಿ ರೈತರಿಂದ ಖರೀದಿಸಿ ಸಂಗ್ರಹಿಸುತ್ತಿದ್ದೇವೆ. ಈ ಮೇವು ಮುಂದಿನ ಮಳೆಗಾಲದವರೆಗೆ ಸಾಲಬಹುದು ಎಂಬ ಭರವಸೆಯಿದೆ ಎನ್ನುತ್ತಾರೆ ಮುಳಸಾವಳಗಿ ಗ್ರಾಮದ ರೈತರಾದ ಶಿವಾನಂದ ನಾಗರಳ್ಳಿ, ರುದ್ರಗೌಡ ಬಿರಾದಾರ, ಹಾಗೂ ಮಾದೇವಪ್ಪ ಬಿರಾದಾರ.

ನಾವು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮೊದಲೇ ಮೇವು ಸಂಗ್ರಹಣೆಗೆ ಮುಂದಾಗುತ್ತೇವೆ. ಬೇಸಿಗೆ ಸಮಯದಲ್ಲಿ ಸರ್ಕಾರ ಮೇವು ಬ್ಯಾಂಕ್ ಪ್ರಾರಂಭಿಸಿ ಮೇವು ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅದೇ ಗ್ರಾಮದ ಬಸವರಾಜ ಕಲ್ಲೂರ, ವಿರುಪಾಕ್ಷಿ ರೋಡಗಿ, ಶಿವಾನಂದ ಹಡಪದ.

ವರ್ಷದಿಂದ ವರ್ಷಕ್ಕೆ ಜೋಳ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜೋಳದ ಮೇವಿನ ಅಭಾವ ಎದ್ದು ಕಾಣುತ್ತಿದೆ. ಅದರಲ್ಲೂ ಈಗೀಗ ನಮ್ಮ ತಾಲ್ಲೂಕಿನಲ್ಲಿ ತೊಗರಿ, ಕಬ್ಬು ಬೆಳೆಯುವವರೇ ಹೆಚ್ಚಾಗುತ್ತಿದ್ದಾರೆ. ಮಳೆಗಾಲದಲ್ಲಿ ಹಸಿರು ಮೇವಿಗೆ ಕೊರತೆಯಿಲ್ಲ. ಆದರೆ ಮುಂದಿನ ಆರು ತಿಂಗಳು ದನಕರುಗಳು ಮೇವಿಗಾಗಿ ಅಲೆಯುವಂತಾಗುತ್ತದೆ. ಆದ್ದರಿಂದ ಬಹುತೇಕ ರೈತರು ತಮ್ಮಲ್ಲಿಯ ದನಕರುಗಳನ್ನು ಮಾರಲು ಮುಂದಾಗುತ್ತಾರೆ ಎನ್ನುತ್ತಾರೆ ಕಡ್ಲೇವಾಡ ಪಿಸಿಎಚ್ ಗ್ರಾಮದ ಶೇಖು ಗಣಜಲಿ, ಶ್ರೀಶೈಲ ಕಬಾಡಗಿ.

ತಾಲ್ಲೂಕು ಆಡಳಿತ ಜಾನುವಾರಗಳಿಗೆ ಅಗತ್ಯವಾದ ಮೇವಿಗಾಗಿ ಪಶು ಆಸ್ಪತ್ರೆಯ ಆವರಣದಲ್ಲಿ ಮೇವು ಬ್ಯಾಂಕ್ ಆರಂಭಿಸಿ ರೈತ ಸಮುದಾಯಕ್ಕೆ ಅನುಕೂಲ ಮಾಡಿದರೆ ರೈತರು ಅಲೆಯುವುದು ತಪ್ಪುತ್ತದೆ.
ಕಾಸುಗೌಡ ಬಿರಾದಾರ(ಜಲಕತ್ತಿ), ಸದಸ್ಯರು, ಪಟ್ಟಣ ಪಂಚಾಯಿತಿ ದೇವರಹಿಪ್ಪರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT